ಬೆಂಗಳೂರು:ಭೋವಿ ಅಭಿವೃದ್ಧಿ ನಿಗಮ ಬಹುಕೋಟಿ ಹಗರಣ ತನಿಖೆಯ ನೆಪದಲ್ಲಿ ಸಿಐಡಿ ಪೊಲೀಸರು ನೀಡಿದ ಕಿರುಕುಳದಿಂದ ಮನನೊಂದು ವಕೀಲೆ ಎಸ್ ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಪ್ರಕರಣದ ತನಿಖೆ ನಡೆಸಲು ಹೈಕೋರ್ಟ್ ಮೂವರು ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಿದ್ದು, ಮೂರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ.
ಜೀವಾ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿ ಬೆಂಗಳೂರು ವಕೀಲರ ಸಂಘ ಸಲ್ಲಿಸಿದ್ದ ಮಧ್ಯಂತರ ಅರ್ಜಿ ಹಾಗೂ ತಮ್ಮ ವಿರುದ್ಧ ಬನಶಂಕರಿ ಠಾಣೆಯಲ್ಲಿ ದಾಖಲಾಗಿರುವ ಬಿಎನ್‌ಎಸ್ ಸೆಕ್ಷನ್ 108 ಮತ್ತು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಸೆಕ್ಷನ್ 17(a) ಅಡಿ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಜೀವಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಡಿವೈಎಸ್‌ಪಿ ಕನಕಲಕ್ಷ್ಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ನೀಡಿದೆ.
ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಬೆಂಗಳೂರು ಸಿಬಿಐನ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ್ ವರ್ಮಾ ನೇತೃತ್ವದ ಮೂರು ಅಧಿಕಾರಿಗಳ ವಿಶೇಷ ತನಿಖಾ ತಂಡ ನಡೆಸಲಿದೆ. ಕರ್ನಾಟಕ ಹೋಮ್ ಗಾರ್ಡ್‌ನ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಹಕೇ ಅಕ್ಷಯ್ ಮಚೀಂದ್ರ, ಆಂತರಿಕ ಭದ್ರತಾ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ನಿಷಾ ಜೇಮ್ಸ್ ಅವರು ಎಸ್‌ಐಟಿಯ ಸದಸ್ಯರಾಗಿರಲಿದ್ದಾರೆ ಎಂದು ನ್ಯಾಯಾಲಯ ಆದೇಶಿಸಿದೆ.