ಬೆಂಗಳೂರು :ಕಾನೂನು ಬಾಹಿರವಾಗಿ ಇಬ್ಬರು ಅಪ್ರಾಪ್ತರನ್ನು ಮಕ್ಕಳ ಕಲ್ಯಾಣ ಸಮಿತಿ ಮತ್ತು ಪೊಲೀಸರ ಮಧ್ಯಸ್ಥಿಕೆಯಲ್ಲಿ ತಾಯಿಯಿಂದ ತಂದೆಗೆ ಹಸ್ತಾಂತರ ಮಾಡಿದ್ದ ಕ್ರಮಕ್ಕೆ ತೀವ್ರ ಅಸಮಾಧಾನಗೊಂಡ ಹೈಕೋರ್ಟ್, ಇಬ್ಬರೂ ಅಪ್ರಾಪ್ತರನ್ನು ತಾಯಿಯ ಮಡಿಲು ಸೇರುವಂತೆ ಮಾಡಿದೆ.
ತಮ್ಮ ಮಕ್ಕಳನ್ನು ಕಾನೂನು ಬಾಹಿರವಾಗಿ ತಂದೆಗೆ ಹಸ್ತಾಂತರಿಸಿರುವ ಮಕ್ಕಳನ್ನು ನ್ಯಾಯಾಲಯದಲ್ಲಿ ಹಾಜರಿಪಡಿಸುವಂತೆ ಸೂಚನೆ ನೀಡಬೇಕು ಎಂದು ಕೋರಿ ಬೆಂಗಳೂರಿನ ನಾಯಂಡಹಳ್ಳಿ ನಿವಾಸಿಯಾಗಿರುವ ರೆಹಾನಾ ಬೇಗಂ ಹೆಬಿಯಾಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ನ್ಯಾಯಮೂರ್ತಿ ರಾಜೇಶ್ ರೈ ಕೆ, ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಅಲ್ಲದೆ, ಮಕ್ಕಳ ಕಲ್ಯಾಣ ಸಮಿತಿಯಿಂದ ಲಿಖಿತ ಬೇಷರತ್ ಕ್ಷಮಾಪಣೆ ದಾಖಲಿಸಿಕೊಂಡಿತು. ಜತೆಗೆ, ಮುಂದಿನ ದಿನಗಳಲ್ಲಿ ಈ ರೀತಿಯ ನಿರ್ಧಾರಗಳನ್ನು ಕೈಗೊಳ್ಳದಂತೆ ಎಚ್ಚರಿಕೆ ನೀಡಿ ಅರ್ಜಿ ಇತ್ಯರ್ಥ ಪಡಿಸಿತು.
ಈ ಪ್ರಕ್ರಿಯೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಆದೇಶ ಸಂಪೂರ್ಣವಾಗಿ ಅಧಿಕಾರದ ದುರುಪಯೋಗವನ್ನು ಬಿಂಬಿಸುತ್ತದೆ. ಈ ಕ್ರಿಯೆಗೆ ಬಾಲ ನ್ಯಾಯ ಕಾಯಿದೆಯಡಿ ತಿಳಿಸಿರುವಂತೆ ಅಧ್ಯಕ್ಷರು, ಸದಸ್ಯರ ಅಧಿಕಾರವಧಿ ಕೊನೆಗೊಳಿಸಬಹುದು. ಕ್ಷಮೆ ಇಲ್ಲದಂತೆ ಶಿಕ್ಷೆ ನೀಡಬಹುದಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ನಾಯಂಡಹಳ್ಳಿ ನಿವಾಸಿಯಾಗಿರುವ ರೆಹಾನಾ ಬೇಗಂ ಎಂಬುವರರು ಮತ್ತು ಅವರ ಪತಿಯ ನಡುವೆ ವೈವಾಹಿಕ ಕಲಹಗಳಿತ್ತು. ಈ ನಡುವೆ ಅರ್ಜಿದಾರರ ಇಬ್ಬರ ಅಪ್ರಾಪ್ತ ಮಕ್ಕಳನ್ನು ನಗರದ ಮಕ್ಕಳ ಹಕ್ಕುಗಳ ಕಲ್ಯಾಣ ಸಮಿತಿಯ ಅಧ್ಯಕ್ಷರು ಮತ್ತು ಚಂದ್ರ ಬಡಾವಣೆ ಪೊಲೀಸ್‌ರ ನಡುವೆ ನಡೆದ ಚರ್ಚೆಯಲ್ಲಿ ಪತಿಗೆ ಹಸ್ತಾಂತರ ಮಾಡಬೇಕು ಎಂದು ನಿರ್ದೇಶಿಸಲಾಗಿತ್ತು. ಅದರಂತೆ ಅರ್ಜಿದಾರರು ಮಕ್ಕಳುನ್ನು ಪತಿಗೆ ನೀಡಿದ್ದರು.
ಮಕ್ಕಳನ್ನು ಕಾನೂನು ಬಾಹಿರವಾಗಿ ಹಸ್ತಾಂತರ ಮಾಡಲಾಗಿತ್ತು. ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ, ಅಧಿಕಾರ ಮೀರಿ ಮಕ್ಕಳನ್ನು ಪತಿಗೆ ನೀಡುವಂತೆ ಸೂಚನೆ ನೀಡಿದೆ. ಆದ್ದರಿಂದ ತಮ್ಮ ಇಬ್ಬರೂ ಮಕ್ಕಳನ್ನು ನ್ಯಾಯಾಲಯದ ಮುಂದೆ ಹಾಜರಿ ಪಡಬೇಕು ಎಂದು ಕೋರಿ ಹೈಕೋರ್ಟ್‌ಗೆ ಪತ್ನಿ ಹೆಬಿಯಾಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಬೇಷರತ್ ಕ್ಷಮೆಯಾಚಿಸಿದ ಮಹಿಳಾ ಕಲ್ಯಾಣ ಸಮಿತಿ: ರೆಹಾನಾ ಬೇಗಂ ಅವರ ಪತಿ ತನ್ನ ಇಬ್ಬರು ಮಕ್ಕಳನ್ನು ಬೇಸಿಗೆ ರಜೆ ಹಿನ್ನೆಲೆಯಲ್ಲಿ ಎರಡು ವಾರ ತನ್ನೊಂದಿಗೆ ಕಳುಹಿಸಲು ಕೋರಿ ಮನವಿ ಮಾಡಿದ್ದರು. ಅವರ ಮನವಿಯ ಮೇರೆಗೆ ರೆಹಾನ್ ಬೇಗಂ ಅವರು ಸಿದ್ದರಿದ್ದ ಪರಿಣಾಮ ಮಕ್ಕಳನ್ನು ಪತಿಯೊಂದಿಗೆ ಕಳುಹಿಸಲು ಸೂಚಿಸಿದ್ದೇನೆ. ಈ ಸಂಬಂಧ ಆದೇಶವನ್ನು ಸೂಕ್ಷ್ಮವಾಗಿ ಪರಿಶೀಲಿಸದೇ ಸಹಿ ಮಾಡಿದ್ದೇನೆ. ಅಲ್ಲದೆ, ಅಪ್ರಾಪ್ತ ಮಕ್ಕಳನ್ನು ತಂದೆಯೊಂದಿಗೆ ಕಳುಹಿಸುವುದಕ್ಕೆ ಅಧಿಕಾರವಿಲ್ಲ. ಕೇವಲ ಏಳು ದಿನಗಳ ಕಾಲ ಮೇಲ್ವಿಚಾರಣೆಯಿಂದ ತಂದೆಯೊಂದಿಗೆ ಮಕ್ಕಳನ್ನು ಕಳುಹಿಸಿದ್ದೇನೆ. ಇದರಲ್ಲಿ ಮಕ್ಕಳ ಹಿತದೃಷ್ಠಿಯೇ ವಿನಃ, ಯಾವುದೇ ದುರುದ್ದೇಶವಿಲ್ಲ. ಆದರೂ ನಾನು ಮಾಡಿದ ತಪ್ಪಿಗೆ ನ್ಯಾಯಾಲಯಕ್ಕೆ ಬೇಷರತ್ತಾಗಿ ಕ್ಷಮಾಪಣೆ ಕೇಳುತ್ತೇನೆ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ನಾಗರತ್ನ, ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದರು.
ವಿಚಾರಣೆ ವೇಳೆ ನ್ಯಾಯಾಲಯದ ಸೂಚನೆಯ ಮೇರೆಗೆ ನಾಗರತ್ನ ಖುದ್ದು ಹಾಜರಾಗಿದ್ದರು. ಈ ವೇಳೆ, ಅರ್ಜಿದಾರರ ಪತಿಯ ಮನವಿಯಂತೆ ಮಕ್ಕಳನ್ನು ಹಸ್ತಾಂತರಕ್ಕೆ ಸೂಚನೆ ನೀಡಲಾಗಿದೆ. ಕಲ್ಯಾಣ ಸಮಿತಿ ಅಧ್ಯಕ್ಷರಿಗೆ ಕಾನೂನಿನ ಕೊರತೆಯಿಂದ ಈ ಆದೇಶ ನೀಡಿದ್ದಾರೆ ಎಂಬುದಾಗಿ ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ವಿವರಿಸಿದ್ದರು.
ಓದಿ:ಲೈಂಗಿಕ ಕಿರುಕುಳ ಆರೋಪ ಪ್ರಕರಣದಲ್ಲಿ ಶಾಸಕ ಹೆಚ್ಡಿ ರೇವಣ್ಣಗೆ ಜಾಮೀನು: ಬೇಲ್ ರದ್ದು ಕೋರಿ ಅರ್ಜಿ ಸಲ್ಲಿಸಲು ಸರ್ಕಾರ ಸಿದ್ಧತೆ - HD Revanna Granted Bail