ಕರ್ನಾಟಕ

karnataka

ETV Bharat / state

ಮಗುವನ್ನು ಸುಪರ್ದಿಗೆ ಪಡೆಯಲು ಆರ್ಥಿಕ ಸದೃಢತೆಯೊಂದೇ ಆಧಾರವಲ್ಲ: ತಂದೆಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್ - High Court - HIGH COURT

14 ವರ್ಷದ ಅಪ್ರಾಪ್ತ ಪುತ್ರಿಯನ್ನು ಶಾಶ್ವತವಾಗಿ ತನ್ನ ಸುಪರ್ದಿಗೆ ನೀಡಲು ವಿಚ್ಛೇದಿತ ಪತ್ನಿಗೆ ಆದೇಶಿಸುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ಹೈಕೋರ್ಟ್, ಮಗುವನ್ನು ಸುಪರ್ದಿಗೆ ಪಡೆಯಲು ಆರ್ಥಿಕ ಸದೃಢತೆ ಆಧಾರವಾಗುವುದಿಲ್ಲ ಎಂದು ತಿಳಿಸಿದೆ.

ಹೈಕೋರ್ಟ್
ಹೈಕೋರ್ಟ್

By ETV Bharat Karnataka Team

Published : Apr 17, 2024, 8:26 PM IST

ಬೆಂಗಳೂರು : ಹಣಕಾಸಿನ ಸಾಮರ್ಥ್ಯ (ಆರ್ಥಿಕ ಸದೃಢತೆ) ಅಂಶವೊಂದೇ ಮಗುವಿನ ಸುಪರ್ದಿ ವಿಚಾರವನ್ನು ನಿರ್ಧರಿಸಲು ಆಧಾರವಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಮಗಳನ್ನು ತನ್ನ ಸುಪರ್ದಿಗೆ ನೀಡುವಂತೆ ಕೋರಿ ಸಲ್ಲಿಸಿದ ಅರ್ಜಿ ವಜಾಗೊಳಿಸಿದ್ದ ಕೌಟುಂಬಿಕ ನ್ಯಾಯಾಲಯ ಆದೇಶ ಪ್ರಶ್ನಿಸಿ ಬೆಂಗಳೂರಿನ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಅನು ಶಿವರಾಮನ್‌ ಮತ್ತು ನ್ಯಾಯಮೂರ್ತಿ ಅನಂತ ರಾಮನಾಥ ಹೆಗ್ಡೆ ಅವರಿದ್ದ ವಿಭಾಗೀಯ ಪೀಠ ಈ ಅಭಿಪ್ರಾಯಪಟ್ಟಿದೆ. ಅಲ್ಲದೆ, ಹಣಕಾಸಿನ ಸಾಮರ್ಥ್ಯ ಹೊಂದಿರುವುದರಿಂದ 14 ವರ್ಷದ ಅಪ್ರಾಪ್ತ ಪುತ್ರಿಯನ್ನು ಶಾಶ್ವತವಾಗಿ ತನ್ನ ಸುಪರ್ದಿಗೆ ನೀಡಲು ಪತ್ನಿಗೆ ಆದೇಶಿಸುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದೆ.

ಜತೆಗೆ, ಅಪ್ರಾಪ್ತ ಮಗಳನ್ನು ಮೇಲ್ಮನವಿದಾರನ ವಶಕ್ಕೆ ನೀಡಲು ನಿರಾಕರಿಸಿದ ಹೈಕೋರ್ಟ್‌, ಮಗಳ ಭೇಟಿಯ ಹಕ್ಕು ನೀಡಲು ಮತ್ತು ಮಗಳಿಗೆ ಉತ್ತಮ ಶಿಕ್ಷಣದ ವ್ಯವಸ್ಥೆಗೆ ಹಣಕಾಸಿನ ಸೌಲಭ್ಯ ಒದಗಿಸಲು ಅವಕಾಶ ಕೋರಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಲು ಮೇಲ್ಮನವಿದಾರ ಸ್ವತಂತ್ರರಾಗಿದ್ದಾರೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದೆ.

ಹಾಣಕಾಸಿನ ಸಾಮರ್ಥ್ಯವೊಂದೇ ಮಗುವಿನ ಸುಪರ್ದಿ ವಿಚಾರ ನಿರ್ಧರಿಸಲು ಆಧಾರವಾಗುವುದಿಲ್ಲ. ಇದೇ ಅಭಿಪ್ರಾಯ ವ್ಯಕ್ತಪಡಿಸಿ ಕೌಟುಂಬಿಕ ನ್ಯಾಯಾಲಯವು ಮೇಲ್ಮನವಿದಾರನ ಅರ್ಜಿ ವಜಾಗೊಳಿಸಿದೆ. ಕೌಟುಂಬಿಕ ನ್ಯಾಯಾಲಯದ ಅಭಿಪ್ರಾಯ ಹಾಗೂ ಆದೇಶವನ್ನು ಅಕ್ರಮವೆಂದು ಹೇಳಲಾಗದು. ಇನ್ನು ಮೇಲ್ಮನವಿದಾರನೊಂದಿಗೆ ಪುತ್ರಿ ಚೆನ್ನಾಗಿದ್ದಾರೆ (ಫೆಮಿಲಿಯರ್‌) ಎನ್ನುವುದನ್ನು ಸಾಬೀತುಪಡಿಸುವ ದಾಖಲೆಯನ್ನು ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸಿಲ್ಲ. ಆದ್ದರಿಂದ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಪಡಿಸಲು ಸಕಾರಣ ಕಂಡುಬರುತ್ತಿಲ್ಲ ಎಂದು ತಿಳಿಸಿ ಮೇಲ್ಮನವಿ ವಜಾಗೊಳಿಸಿದೆ.

ಪ್ರಕರಣದ ಹಿನ್ನೆಲೆ :ಪ್ರಕರಣದಲ್ಲಿನ ಮೇಲ್ಮನವಿದಾರ ಪತಿ ಮತ್ತು ಆತನ ಪತ್ನಿ 2008ರ ಏ.27ರಂದು ಮದುವೆಯಾಗಿದ್ದರು. 2009ರ ಸೆ.29ರಂದು ದಂಪತಿಗೆ ಪುತ್ರಿ ಜನಿಸಿದ್ದಳು. ಕೌಟುಂಬಿಕ ವ್ಯಾಜ್ಯದಿಂದ 2010ರ ನಂತರ ಪತ್ನಿ ಮೇಲ್ಮನವಿದಾರನಿಂದ ಬೇರ್ಪಟ್ಟು, ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ವಿಚ್ಛೇದನ ಕೋರಿ ಪತ್ನಿ 2011ರಲ್ಲಿ ಅರ್ಜಿ ಸಲ್ಲಿಸಿದ್ದರು. ಕೌಟುಂಬಿಕ ನ್ಯಾಯಾಲಯವು 2012ರಲ್ಲಿ ದಂಪತಿಯ ವಿವಾಹ ಅನೂರ್ಜಿತಗೊಳಿಸಿ, ವಿಚ್ಛೇದನ ಮಂಜೂರು ಮಾಡಿತ್ತು.

ನಂತರ ಮಗಳನ್ನು ಶಾಶ್ವತವಾಗಿ ತನ್ನ ಸುಪರ್ದಿಗೆ ನೀಡಲು ಪತ್ನಿಗೆ ಆದೇಶಿಸುವಂತೆ ಕೋರಿ ಮೇಲ್ಮನವಿದಾರ, ಪೋಷಕರು ಮತ್ತು ಪಾಲಕರ ಕಾಯ್ದೆ-1890ರಡಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದನ್ನು ವಜಾಗೊಳಿಸಿ ನೆಲಮಂಗಲದ ಕೌಟುಂಬಿಕ ಹಿರಿಯ ಸಿವಿಲ್‌ ನ್ಯಾಯಾಲಯವು 2019ರ ಡಿ.19ರಂದು ಆದೇಶಿಸಿತ್ತು. ಈ ಆದೇಶ ರದ್ದುಪಡಿಸಬೇಕು ಹಾಗೂ ಮಗಳನ್ನು ತನ್ನ ಸುಪರ್ದಿಗೆ ನೀಡಿ ಆದೇಶಿಸಬೇಕು ಎಂದು ಕೋರಿ ಮೇಲ್ಮನವಿದಾರ 2021ರಲ್ಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಮೇಲ್ಮನವಿದಾರ ಪರ ವಕೀಲರು, ಕೌಟುಂಬಿಕ ನ್ಯಾಯಾಲಯವು ತಪ್ಪಾಗಿ ಅರ್ಜಿ ವಜಾಗೊಳಿಸಿದೆ. ಮೇಲ್ಮನವಿದಾರರು ಉತ್ತಮ ವೇತನದ ಉದ್ಯೋಗ ಹೊಂದಿದ್ದಾರೆ. ಹಣಕಾಸಿನ ಸಾಮರ್ಥ್ಯ ಉತ್ತಮವಾಗಿದ್ದು, ಮಗುವನ್ನು ಚೆನ್ನಾಗಿ ಆರೈಕೆ ಮಾಡುತ್ತಾರೆ. ಮೇಲ್ಮನವಿದಾರರ ಸುಪರ್ದಿಗೆ ಮಗಳನ್ನು ನೀಡುವುದರಿಂದ ಆಕೆಯ ಹಿತರಕ್ಷಣೆ ಮಾಡಿದಂತಾಗುತ್ತದೆ ಎಂದು ಕೋರಿದ್ದರು.

ಮೇಲ್ಮನಿದಾರನ ಪತ್ನಿ (ಪ್ರತಿವಾದಿ) ಪರ ವಕೀಲರು, 2013ರಲ್ಲಿ ಡಿ.12ರಂದು ಮೇಲ್ಮನವಿದಾರ ಮರು ಮದುವೆಯಾಗಿದ್ದಾರೆ. ಮಗಳ ಪರವಾಗಿ ನಾನು (ಪತ್ನಿ) ಮೇಲ್ಮನವಿದಾರನ ಆಸ್ತಿಯಲ್ಲಿ ಪಾಲು ಕೋರಿ ದಾವೆ ಹೂಡಿದ್ದೆ. ಆ ನಂತರ ಮಗಳ ಸುಪರ್ದಿಗೆ ಕೋರಿ ಮೇಲ್ಮನವಿದಾರ ಅರ್ಜಿ ಸಲ್ಲಿಸಿದ್ದಾರೆ. ಈ ಅಂಶ ಪರಿಗಣಿಸಿಯೇ ಕೌಟುಂಬಿಕ ನ್ಯಾಯಾಲಯ ಅರ್ಜಿ ವಜಾಗೊಳಿಸಿತ್ತು. ಮೇಲ್ಮನವಿದಾರ ಮಗಳ ಭೇಟಿಗೆ ಕೋರಿ ಯಾವುದೇ ಅರ್ಜಿ ಸಹ ಸಲ್ಲಿಸಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದಿದ್ದರು.

ಇದನ್ನೂ ಓದಿ:ಬೇಸಿಗೆ ಎಫೆಕ್ಟ್​: ಕಪ್ಪು ಕೋಟ್ ಇಲ್ಲದೇ ಕೋರ್ಟ್​ ಕಲಾಪದಲ್ಲಿ ಭಾಗವಹಿಸಲು ವಕೀಲರಿಗೆ ಅವಕಾಶ - High Court

ABOUT THE AUTHOR

...view details