ಕರ್ನಾಟಕ

karnataka

ETV Bharat / state

ಪಿಟಿಸಿಎಲ್ ಕಾಯ್ದೆಯಡಿ ಮಂಜೂರಾದ ಜಮೀನು ಮಾರಿ 12 ವರ್ಷದ ಬಳಿಕ ಹಕ್ಕು ಮರುಸ್ಥಾಪನೆಗೆ ಕೋರಿದ್ದ ಅರ್ಜಿ ವಜಾ - PTCL ACT

ಪಿಟಿಸಿಎಲ್ ಕಾಯ್ದೆ ಅಡಿ ಮಂಜೂರಾಗಿದ್ದ ಜಮೀನು ಮಾರಾಟ ಮಾಡಿ 12 ವರ್ಷದ ಬಳಿಕ ಹಕ್ಕುಗಳ ಮರುಸ್ಥಾಪನೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.

ಹೈಕೋರ್ಟ್, PTCL Act
ಹೈಕೋರ್ಟ್ (ETV Bharat)

By ETV Bharat Karnataka Team

Published : Dec 24, 2024, 7:45 PM IST

ಬೆಂಗಳೂರು:ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಭೂಮಿ ವರ್ಗಾವಣೆ ನಿಷೇಧ (ಕೆಲವು ಭೂಮಿಗಳ ಪರಭಾರೆ ನಿಷೇಧ) (ಪಿಟಿಸಿಎಲ್) ಕಾಯ್ದೆ ಅಡಿ ಮಂಜೂರಾಗಿದ್ದ ಜಮೀನನ್ನು ಮಾರಾಟ ಮಾಡಿದ 12 ವರ್ಷದ ಬಳಿಕ ಆ ಜಮೀನಿನ ಮೇಲಿನ ಹಕ್ಕುಗಳು ಮರುಸ್ಥಾಪನೆ ಕೋರಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದೆ.

ಮಾರಾಟ ಮಾಡಿದ ಜಮೀನನ್ನು ಮರು ಸ್ಥಾಪಿಸಲು ಕೋರಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಪರಿಶಿಷ್ಟ ಜಾತಿಗೆ ಸೇರಿದ ದಿವಂಗತ ಲಕ್ಷ್ಮಯ್ಯ ಎಂಬುವರ ಉತ್ತರಾಧಿಕಾರಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಅರ್ಜಿದಾರರ ಪೂರ್ವಜರು ಜಮೀನು ಮಾರಾಟ ಮಾಡಿ 12 ವರ್ಷಗಳೇ ಕಳೆದಿವೆ. ಇದೀಗ ಆ ಜಮೀನು ಮತ್ತೊಬ್ಬರಿಗೆ ವರ್ಗಾವಣೆಯಾಗಿದ್ದು, ಇದನ್ನು ಅನೂರ್ಜಿತ ಎಂಬುದಾಗಿ ಹೇಳುವುದು ಅತ್ಯಂತ ಅಸಮಂಜಸ, ಅಸಮಾನತೆ ಮತ್ತು ಕಾನೂನಿಗೆ ವಿರುದ್ಧವಾಗಿರಲಿದೆ ಎಂದು ಪೀಠ ಹೇಳಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲವು ಭೂಮಿಗಳ ಪರಭಾರೆ ನಿಷೇಧ) ಪಿಟಿಸಿಎಲ್ ಕಾಯ್ದೆಗೆ 2023ರಲ್ಲಿ ರಾಜ್ಯ ಸರ್ಕಾರ ತಿದ್ದುಪಡಿ ಮಾಡಿದ್ದು, ಕಲಂ 5ಕ್ಕೆ ಸಿ ಮತ್ತು ಡಿ ಉಪ ಕಲಂಗಳನ್ನು ಸೇರಿಸಿದ್ದರು. ಅವುಗಳಂತೆ ಸರ್ಕಾರದಿಂದ ಪರಿಶಿಷ್ಟ ಜಾತಿಗೆ ಸೇರಿದವರಿಗೆ ಮಂಜೂರಾದ ಜಮೀನನ್ನು ಮಾರಾಟದ ಬಳಿಕ ಹಿಂಪಡೆಯಲು ಯಾವುದೇ ಕಾಲಾವಧಿಯ ಮಿತಿ ಇರುವುದಿಲ್ಲ. ಈ ನಿಯಮ ಉಪವಿಭಾಗಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಹಾಗೂ ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳಿಗೆ ಅನ್ವಯಿಸಲಿದೆ ಎಂಬುದಾಗಿ ತಿಳಿಸಲಾಗಿತ್ತು. ಆದರೆ ಈ ತಿದ್ದುಪಡಿ ಕಾಯ್ದೆಯ ಸಿಂಧುತ್ವವನ್ನು ಏಕಸದಸ್ಯ ಪೀಠದ ಮುಂದೆ ಪ್ರಶ್ನಿಸಿದ್ದು, ಅರ್ಜಿ ವಿಚಾರಣಾ ಹಂತದಲ್ಲಿದೆ. ಈ ಸಂದರ್ಭದಲ್ಲಿ ನಿರ್ಧಾರಕ್ಕೆ ಬರಲಾಗುವುದಿಲ್ಲ ಎಂದು ಪೀಠ ತಿಳಿಸಿತ್ತು.

ಜೊತೆಗೆ, ಗೌರಮ್ಮ ಅಲಿಯಾಸ್ ಗಂಗವ್ವ ಪ್ರಕರಣದಲ್ಲಿ ಹೈಕೋರ್ಟ್‌ನ ಮತ್ತೊಂದು ಪೀಠ (ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಮತ್ತು ನ್ಯಾಯಮೂರ್ತಿ ವಿಜಯ್‌ಕುಮಾರ್ ಎ. ಪಾಟೀಲ್) ಜಮೀನು ಮಾರಿದ ಬಳಿಕ ಹಲವು ವರ್ಷಗಳ ನಂತರ ಮತ್ತೆ ಜಮೀನಿನ ಮೇಲಿನ ಹಕ್ಕುಗಳನ್ನು ಮರು ಸ್ಥಾಪಿಸುವಂತೆ ಆದೇಶಿಸುವುದು ಸಮರ್ಥನೀಯವಲ್ಲ ಎಂಬುದಾಗಿ ತಿಳಿಸಿದೆ. ಹೀಗಾಗಿ ಮೇಲ್ಮನವಿದಾರರು ಸಾಕಷ್ಟು ವಿಳಂಬವಾಗಿ ಆಸ್ತಿಯ ಹಕ್ಕುಗಳನ್ನು ಪುನರ್ ಸ್ಥಾಪಿಸಲು ಕೋರಿ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಲಾಗದು ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ ಏನು?ಲಕ್ಷ್ಮಯ್ಯ ಎಂಬುವರಿಗೆ 1981ರಲ್ಲಿ ಸರ್ಕಾರದಿಂದ ಜಮೀನು ಮಂಜೂರಾಗಿತ್ತು. ಈ ಜಮೀನನ್ನು 1995ರಲ್ಲಿ ಮಾರಾಟ ಮಾಡಿದ್ದರು. ಬಳಿಕ 2008ರಲ್ಲಿ ಜಮೀನಿನ ಹಕ್ಕುಗಳು ಮರುಸ್ಥಾಪನೆಗಾಗಿ ಕೋರಿ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಅರ್ಜಿಯನ್ನು ಪುರಸ್ಕರಿಸಿದ್ದ ಉಪ ವಿಭಾಗಾಧಿಕಾರಿಗಳು ಜಮೀನಿನ ಹಕ್ಕುಗಳನ್ನು ಲಕ್ಷ್ಮಯ್ಯ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದರು.

ಇದನ್ನು ಪ್ರಶ್ನಿಸಿ ಜಮೀನು ಖರೀದಿದಾರರು ಜಿಲ್ಲಾಧಿಕಾರಿಗಳ ಮುಂದೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪುರಸ್ಕರಿಸಿದ್ದ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳ ಆದೇಶವನ್ನು ರದ್ದುಪಡಿಸಿದ್ದರು. ಅಲ್ಲದೆ, ಜಮೀನು ಮಾರಾಟ ಮಾಡಿ ಸಾಕಷ್ಟು ವಿಳಂಬವಾಗಿದೆ. ಆದ ಕಾರಣ ಅರ್ಜಿದಾರರ ಮನವಿಯನ್ನು ಪುರಸ್ಕರಿಸುವುದಕ್ಕೆ ಸಾಧ್ಯವಿಲ್ಲ ಎಂದು ಪೀಠ ಹೇಳಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ:ಪಿಟಿಸಿಎಲ್ ಕಾಯಿದೆಯಡಿ ಮಂಜೂರಾದ ಜಮೀನನ್ನು ಸೊಸೈಟಿ ಸಾಲಕ್ಕೆ ಜಪ್ತಿ ಮಾಡಲಾಗದು: ಹೈಕೋರ್ಟ್ - High Court

ABOUT THE AUTHOR

...view details