ಬೆಂಗಳೂರು: ಈ ಹಿಂದೆ ತನಗೆ ಮಂಜೂರು ಮಾಡಿದ್ದ ಲಿಂಗಾಯತ ಜಾತಿ ಪ್ರಮಾಣಪತ್ರ ವಾಪಸ್ ಪಡೆದು, ಬೇಡ ಜಂಗಮ ಜಾತಿ ಪ್ರಮಾಣಪತ್ರ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ರಾಯಚೂರು ಜಿಲ್ಲೆಯ ಸಿಂಧನೂರಿನ ರುದ್ರಯ್ಯಸ್ವಾಮಿ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಹೈಕೋರ್ಟ್‌ನ ಕಲಬುರಗಿ ಪೀಠದಲ್ಲಿ ರುದ್ರಯ್ಯಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ. ಪ್ರಕರಣವು ಜಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿದ ವ್ಯಾಜ್ಯವಾಗಿದೆ. ಅರ್ಜಿದಾರರಿಗೆ ಮೊದಲೇ ಲಿಂಗಾಯತ ಎಂದು ಪ್ರಮಾಣಪತ್ರ ವಿತರಿಸಲಾಗಿದೆ. ಆದರೆ, ಅರ್ಜಿದಾರರು 2018ರಲ್ಲಿ ತಮಗೆ ಮೊದಲು ನೀಡಿದ್ದ ಲಿಂಗಾಯತ ಜಾತಿ ಪ್ರಮಾಣಪತ್ರ ರದ್ದುಗೊಳಿಸಬೇಕು ಮತ್ತು ಹೊಸದಾಗಿ ಬೇಡರ ಜಂಗಮ ಪ್ರಮಾಣಪತ್ರ ನೀಡಲು ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ. ಆದರೆ ಅದಕ್ಕೆ ಕಾರಣ ನೀಡಿಲ್ಲ ಎಂದು ಪೀಠ ತಿಳಿಸಿದೆ.
ಅಲ್ಲದೇ, ಅರ್ಜಿದಾರರ ಪರ ವಕೀಲರು ಮೊದಲು ತಪ್ಪಾಗಿ ಸರ್ಟಿಫಿಕೇಟ್ ನೀಡಲಾಗಿದೆ, ಅದನ್ನು ಬದಲಾಯಿಸಬೇಕು ಎಂದಷ್ಟೇ ಮೌಖಿಕವಾಗಿ ಹೇಳಿದ್ದಾರೆ. ಆದರೆ ಅದಕ್ಕೆ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ. ಹಾಗಾಗಿ, ಪ್ರಕರಣದ ವಿವರಗಳನ್ನು ಗಮನಿಸಿದರೆ ಮೊದಲು ನೀಡಿದ್ದ ಜಾತಿ ಪ್ರಮಾಣಪತ್ರ ರದ್ದುಗೊಳಿಸಿ, ಹೊಸದಾಗಿ ಸರ್ಟಿಫಿಕೇಟ್ ನೀಡಬೇಕು ಎಂಬುದಾಗಿ ಕೋರಿಕೆ ಅಪ್ರಸ್ತುತವಾಗಿದೆ. ಹಾಗಾಗಿ, ಅರ್ಜಿಯನ್ನು ವಜಾಗೊಳಿಸಲಾಗುತ್ತಿದೆ ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ:ಮೂಲತಃ ಲಿಂಗಾಯತ ಜಾತಿಗೆ ಸೇರಿದ ಅರ್ಜಿದಾರರು ತನಗೆ ಬೇಡ ಜಂಗಮ ಜಾತಿ ಪ್ರಮಾಣಪತ್ರ ನೀಡುವಂತೆ ಸಿಂಧನೂರು ತಹಸೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕಂದಾಯ ನಿರೀಕ್ಷಕರ ಪರಿಶೀಲನಾ ವರದಿಯನ್ನು ಆಧರಿಸಿ ಆ ಮನವಿಯನ್ನು ತಹಸೀಲ್ದಾರ್ ತಿರಸ್ಕರಿಸಿದ್ದರು. ಅದನ್ನು ಪ್ರಶ್ನಿಸಿ ತನಗೆ ಈ ಹಿಂದೆ ನೀಡಿರುವ ಲಿಂಗಾಯಿತ ಜಾತಿ ಪ್ರಮಾಣಪತ್ರ ವಾಪಸ್ ಪಡೆದು, ಹೊಸದಾಗಿ ಬೇಡ ಜಂಗಮ ಪ್ರಮಾಣಪತ್ರ ನೀಡುವಂತೆ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ:ಬಿಎನ್ಎಸ್ಎಸ್ ಜಾರಿ ಬಳಿಕ ಸಿಆರ್ಪಿಸಿ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗದು: ಹೈಕೋರ್ಟ್