ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಕುಟುಂಬ ಒಡೆತನದ ಸಿದ್ಧಸಿರಿ ಎಥೆನಾಲ್ ಘಟಕವನ್ನು ಏಕಾಏಕಿ ಮುಚ್ಚುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಹೊರಡಿಸಿರುವ ಆದೇಶಕ್ಕೆ ಕಾರಣ ತಿಳಿಸಬೇಕು ಎಂದು ಹೈಕೋರ್ಟ್ ತಿಳಿಸಿದೆ.
ಕೆಎಸ್ಪಿಸಿಬಿಯಿಂದ ಎಥೆನಾಲ್ ಘಟಕ ಮುಚ್ಚುವಂತೆ ಆದೇಶ ಬಂದ ಬೆನ್ನಲ್ಲೇ ಇದನ್ನು ಪ್ರಶ್ನಿಸಿ ಯತ್ನಾಳ್ ಸಲ್ಲಿಸಿದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿಗಳಾದ ಎನ್.ವಿ. ಅಂಜಾರಿಯಾ ಹಾಗೂ ಕೃಷ್ಣ.ಎಸ್. ದೀಕ್ಷಿತ್ ಅವರ ವಿಭಾಗೀಯ ಪೀಠವು ವಿಚಾರಣೆ ನಡೆಸಿತು. ಅಲ್ಲದೇ, ಮೊದಲು ಎಥೆನಾಲ್ ಘಟಕ ಆರಂಭ ಮಾಡುವುದಕ್ಕೆ ಅನುಮತಿ ನೀಡಲಾಗಿದ್ದು, ಈಗ ಏಕಾಏಕಿ ಮುಚ್ಚಲು ಆದೇಶ ನೀಡಿದ ಬಗ್ಗೆ ಕಾರಣ ಕೊಡಬೇಕು. ನಿಮ್ಮ ತೀರ್ಮಾನದ ಹಿಂದಿನ ಕಾರಣ ಜನರಿಗೆ ತಿಳಿಯಬೇಕು ಎಂದು ಪೀಠ ತಿಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಘಟಕ ಮುಚ್ಚುವುದಕ್ಕೆ ಕಾರಣ ಏನು ಎಂಬುದನ್ನು ಮಾಲಿನ್ಯ ನಿಯಂತ್ರಣ ಮಂಡಳಿಗೆ ಪೀಠ ಪ್ರಶ್ನಿಸಿತು. ಆಗ ಕೆಎಸ್‌ಪಿಸಿಬಿ ಅಧಿಕಾರಿಗಳು ಸಿದ್ಧಸಿರಿ ಎಥೆನಾಲ್ ಘಟಕಕ್ಕೆ ಪರಿಸರ ಅನುಮೋದನೆ ಹಿಂಪಡೆದಿರುವುದರಿಂದ, ಮುಚ್ಚುವಂತೆ ಆದೇಶ ನೀಡಲಾಗಿದೆ. ಈ ಘಟಕವನ್ನು ನಡೆಸಲು ಪರಿಸರ ಇಲಾಖೆ ಅನುಮತಿ ನೀಡಿಲ್ಲ ಎಂದು ಹೈಕೋರ್ಟ್‌ಗೆ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಯಿಸಿದ ನ್ಯಾಯಪೀಠ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸಿದ್ಧಸಿರಿ ಘಟಕವನ್ನು ಮುಚ್ಚಿಸಲು ತೆಗೆದುಕೊಂಡ ತೀರ್ಮಾನಕ್ಕೆ ಕಾರಣ ಒದಗಿಸಬೇಕು. ಸಂವಿಧಾನಿಕ ಸಂಸ್ಥೆ ಅನುಮತಿ ನೀಡದಿರುವುದಕ್ಕೆ ಕಾರಣ ನೀಡಬೇಕು. ನಮ್ಮಲ್ಲಿರುವುದು ಜನಕಲ್ಯಾಣ ಆಡಳಿತ, ಮೊಘಲ್ ಸರ್ಕಾರವಲ್ಲ. ತೀರ್ಮಾನದ ಹಿಂದಿನ ಕಾರಣ ಜನರಿಗೆ ತಿಳಿಯಬೇಕು ಎಂದು ಹೇಳಿ ವಿಚಾರಣೆಯನ್ನು ಜೂ.4 ಕ್ಕೆ ನಿಗದಿಪಡಿಸಿ ಮುಂದೂಡಿದೆ.