ಕರ್ನಾಟಕ

karnataka

ETV Bharat / state

ಲೈಂಗಿಕ ದೌರ್ಜನ್ಯ ಆರೋಪ: ರೇವಣ್ಣ ವಿರುದ್ಧ ಸೆ.19ರವರೆಗೂ ಯಾವುದೇ ಪ್ರಕ್ರಿಯೆ ನಡೆಸದಂತೆ ಹೈಕೋರ್ಟ್ ನಿರ್ದೇಶನ - Sexual Assault Case - SEXUAL ASSAULT CASE

ಲೈಂಗಿಕ ಆರೋಪ ರದ್ದು ಕೋರಿ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯ ಪೀಠ, ಸೆ.19ರ ವರೆಗೆ ಯಾವುದೇ ಪ್ರಕ್ರಿಯೆ ನಡೆಸದಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚನೆ ನೀಡಿ ವಿಚಾರಣೆ ಮುಂದೂಡಿತು.

SEXUAL ASSAULT CASE
ಮಾಜಿ ಸಚಿವ ಹೆಚ್​.ಡಿ.ರೇವಣ್ಣ (ETV Bharat)

By ETV Bharat Karnataka Team

Published : Aug 30, 2024, 8:53 PM IST

ಬೆಂಗಳೂರು: ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಶಾಸಕ ಹೆಚ್​.ಡಿ.ರೇವಣ್ಣ ವಿರುದ್ಧ ಸೆಪ್ಟೆಂಬರ್ 19ರ ವರೆಗೂ ಯಾವುದೇ ಪ್ರಕ್ರಿಯೆ ನಡೆಸದಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚನೆ ನೀಡಿದೆ.

ಪ್ರಕರಣ ರದ್ದು ಕೋರಿ ಹೆಚ್​.ಡಿ.ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ, ಸೆ.19ರ ವರೆಗೆ ಯಾವುದೇ ಪ್ರಕ್ರಿಯೆ ನಡೆಸದಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚನೆ ನೀಡಿ ವಿಚಾರಣೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸಂತ್ರಸ್ತೆ ನಾಲ್ಕು ವರ್ಷಗಳ ಹಿಂದೆಯೇ ರೇವಣ್ಣ ಅವರ ಮನೆ ತೊರೆದಿದ್ದಾರೆ. ಆದರೆ, 2024ರ ಏ.28ರಂದು ಭಾರತೀಯ ದಂಡ ಸಂಹಿತೆ-1860ರ ಕಲಂನ ವಿವಿಧ ಸೆಕ್ಷನ್​ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಆದರೆ, ಆ ಸೆಕ್ಷನ್​ಗಳು ದೂರಿನಲ್ಲಿರುವ ಅಂಶಗಳಿಗೆ ಅನ್ವಯವಾಗುವುದಿಲ್ಲ. ಹಾಗಾಗಿ ಎಫ್‌ಐಆರ್ ಅನ್ನು ರದ್ದುಪಡಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಅಲ್ಲದೆ, ದೂರಿನಲ್ಲಿ ಹೇಳಿರುವಂತೆ, ಹಿಂಬಾಲಿಸುವ ಆರೋಪ ಎಲ್ಲಿದೆ? ಈ ಎರಡೂ ಅಪರಾಧಗಳಿಗೆ ಗರಿಷ್ಠ 3 ವರ್ಷ ಶಿಕ್ಷೆ ಇದೆ. ಐಪಿಸಿ ಕಲಂಗಳನ್ನು ಅನ್ವಯಿಸಿದ ಮಾತ್ರಕ್ಕೆ ಸಾಲದು. ಅಲ್ಲಿ ಆರೋಪವೂ ಇರಬೇಕಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.

ಇದಕ್ಕೆ ಆಕ್ಷೇಪಿಸಿದ್ದ ಸರ್ಕಾರದ ಪರ ವಕೀಲ ಪ್ರೊ.ರವಿವರ್ಮಕುಮಾರ್, ಪ್ರಕರಣದಲ್ಲಿ ಪೊಲೀಸರು ಈಗಾಗಲೇ ತನಿಖೆ ಪೂರ್ಣಗೊಳಿಸಿ ಆ.23ರಂದು ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಕೃತ್ಯ ಹೀನ ಕೃತ್ಯವಾಗಿದೆ. ಹಾಗಾಗಿ ಈ ಹಂತದಲ್ಲಿ ಪ್ರಕರಣ ರದ್ದು ಪಡಿಸಲಾಗದು ಎಂದು ಮಾಹಿತಿ ನೀಡಿದರು. ಜತೆಗೆ, ಈ ಸಂಬಂಧ ವಾದ ಮಂಡಿಸಲು ಮತ್ತಷ್ಟು ಕಾಲಾವಕಾಶ ಕೋರಿದರು. ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಸೆ.19ಕ್ಕೆ ಮುಂದೂಡಿತು.

ಇದನ್ನೂ ಓದಿ:ಅತ್ಯಾಚಾರ ಸಂತ್ರಸ್ತ ಎನ್ನಲಾದ ಮಹಿಳೆ ಅಪಹರಣ ಆರೋಪ; ರೇವಣ್ಣ ಜಾಮೀನು ಆದೇಶ ಎತ್ತಿಹಿಡಿದ ಹೈಕೋರ್ಟ್ - Kidnap Case

ABOUT THE AUTHOR

...view details