ಬೆಂಗಳೂರು:ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇಡೀ ವ್ಯವಸ್ಥೆಯನ್ನು ಕಾಡುತ್ತಿದೆ. ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ನಿಧನ, ನಿವೃತ್ತಿ ಮತ್ತಿತರ ಕಾರಣಗಳಿಂದಾಗಿ ಖಾಲಿ ಆಗುವ ಕಾಯಂ ಹುದ್ದೆಗಳನ್ನು ಕಾಲ ಕಾಲಕ್ಕೆ ಭರ್ತಿ ಮಾಡಲು ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.
ಕೇಂದ್ರ ಸರ್ಕಾರದ ಅಧೀನದ ಎಲ್‌ಐಸಿ ಸಂಸ್ಥೆಯ ನೇಮಕಾತಿಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾಯಮೂರ್ತಿ ವಿಜಯಕುಮಾರ್ ಎ. ಪಾಟೀಲ್ ಅವರಿದ್ದ ಧಾರವಾಡ ವಿಭಾಗೀಯ ಪೀಠ ಈ ಅದೇಶ ನೀಡಿದೆ.
ಸಿಬ್ಬಂದಿ ನಿಧನ, ವಿಕಲಾಂಗತೆ, ನಿವೃತ್ತಿ ಅಥವಾ ವಜಾಗೊಳಿಸಿದ ಪ್ರಕರಣಗಳಲ್ಲಿ ಹುದ್ದೆಗಳು ಖಾಲಿಯಾಗುತ್ತವೆ. ಅವುಗಳನ್ನು ಅನಿರ್ದಿಷ್ಟಾವಧಿಗೆ ಹಾಗೆಯೇ ಬಿಟ್ಟರೆ ಅದು ಸಾರ್ವಜನಿಕ ಆಡಳಿತದ ಮೇಲೆ ಪರಿಣಾಮ ಬೀರುವ ಜೊತೆಗೆ ಹಲವು ಅರ್ಹರು ಅನರ್ಹರಾಗುತ್ತಾರೆ. ಅವರ ವಯೋಮಿತಿ ಮೀರುತ್ತದೆ. ಕಾಲ ಕಾಲಕ್ಕೆ ನೇಮಕಾತಿ ಪ್ರಕ್ರಿಯೆ ನಡೆಯದ ಹಿನ್ನೆಲೆಯಲ್ಲಿ ನಿಜಕ್ಕೂ ಉದ್ಯೋಗಕ್ಕೆ ಅರ್ಹರಾಗಿರುವ ಯುವ ಜನಾಂಗ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ. ನೇಮಕಾತಿ ಪ್ರಕ್ರಿಯೆ ಮಾಡದಿರುವುದರಿಂದ ಸಂವಿಧಾನ ಖಾತ್ರಿಪಡಿಸಿರುವ ಸಾರ್ವಜನಿಕ ಉದ್ಯೋಗದ ಅವಕಾಶದಿಂದ ಬಹುದೊಡ್ಡ ಸಂಖ್ಯೆಯ ಯುವಜನತೆ ವಂಚಿತವಾಗುತ್ತಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.