ಬೆಂಗಳೂರು: ವಿದೇಶಿಯರಿಗೆ ವೈದ್ಯಕೀಯ ವೀಸಾ ಮಂಜೂರು ಮಾಡುವ ಸಂದರ್ಭದಲ್ಲಿ ಸೂಕ್ಷ್ಮವಾಗಿ ಪರಿಶೀಲಿಸಿ, ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಬೇಕು ಎಂದು ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿಗೆ (ಎಫ್‌ಆರ್‌ಆರ್‌ಒ) ಹೈಕೋರ್ಟ್ ನಿರ್ದೇಶನ ನೀಡಿದೆ.
ವೈದ್ಯಕೀಯ ವೀಸಾ ನೀಡುವುದಕ್ಕೆ ನಿರಾಕರಿಸಿದ್ದ ಎಫ್‌ಆರ್‌ಆರ್‌ಒ ನಿರ್ಧಾರ ಪ್ರಶ್ನಿಸಿ ಇರಾಕ್‌ನ ಬಾಗ್ದಾದ್ ನಿವಾಸಿ ಸಗದ್ ಕರೀಂ ಇಸ್ಮಾಯಿಲ್ ಎಂಬುವರು ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಈ ನಿರ್ದೇಶನ ನೀಡಿದೆ.
ಅಲ್ಲದೆ, ಅರ್ಜಿದಾರರು ಅವಧಿ ಮೀರಿ ನೆಲೆಸಿರುವುದ್ದರಿಂದ ನಿರ್ಗಮನ ಪರವಾನಗಿ ನೀಡಿ ಗಡಿಪಾರು ಮಾಡಲಾಗಿದ್ದು, ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಎರಡು ಬಾರಿ ವೈದ್ಯಕೀಯ ವೀಸಾ ನೀಡಿದ್ದು, ಎರಡು ವರ್ಷಗಳಿಗಿಂತ ಹೆಚ್ಚುಕಾಲ ನೆಲೆಸಿದ್ದಾರೆ. ಇದೀಗ ಮತ್ತೊಂದು ಅವಧಿಗೆ ವೀಸಾ ಕೋರಿರುವುದನ್ನು ಪರಿಗಣಿಸಲಾಗದು ಎಂದು ಪೀಠ ತಿಳಿಸಿದೆ.
ವೈದ್ಯಕೀಯ ವೀಸಾ ಪಡೆದು ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಅವರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಆದರೆ, ಮೊದಲು ತಮ್ಮ ಹೆಸರನ್ನು ಸಜ್ಜದ್ ಕರೀಂ ಇಸ್ಮಾಯಿಲ್ ಎಂಬುದಾಗಿ ಇದ್ದದ್ದನ್ನು ಬಳಿಕ ಸಾಗದ್ ಕರೀಂ ಇಸ್ಮಾಯಿಲ್ ಎಂಬುದಾಗಿ ಬದಲಾಯಿಸಿಕೊಂಡಿದ್ದಾರೆ ಎಂಬುದಾಗಿ ಪೀಠ ಆದೇಶದಲ್ಲಿ ವಿವರಿಸಿದೆ.
ಜೊತೆಗೆ, ಅರ್ಜಿದಾರರು ವಿದೇಶದಲ್ಲಿ ಕುಳಿತು ತಮ್ಮ ಪರವಾಗಿ ಸ್ಪೆಷಲ್ ಪವರ್ ಆಫ್ ಅಟಾರ್ನಿ (ಎಸ್‌ಪಿಎ) ಮೂಲಕ ಅರ್ಜಿ ಸಲ್ಲಿಸಿದಲ್ಲಿ ಅದನ್ನು ಕಾರ್ಯಗತಗೊಳಿಸುವುದಕ್ಕೆ ಅವಕಾಶವಿಲ್ಲ. ಕಾಯಿದೆಯಲ್ಲಿ ಇಲ್ಲದ ಅವಕಾಶವನ್ನು ಅರ್ಜಿದಾರ ಕೋರಿದ್ದು, ಅವರ ವಾದ ಪುರಸ್ಕಾರಾರ್ಹವಲ್ಲ ಎಂದು ತಿಳಿಸಿ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:ಇರಾಕ್ ಪ್ರಜೆಯಾಗಿರುವ ಅರ್ಜಿದಾರರು ಬಸ್ರಾದ ಆರೋಗ್ಯ ಇಲಾಖೆಯಲ್ಲಿ ಪರಿಶೀಲನೆಗೊಳಪಟ್ಟಾಗ ಮೆದುಳಿನಲ್ಲಿ ಮೂರು ಸಣ್ಣ ಗಾಯಗಳಾಗಿರುವುದು ಪತ್ತೆಯಾಗಿತ್ತು. ಅದರ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಟ್ರ ಸಿಎಂಐ ಆಸ್ಪತ್ರೆಯೊಂದಿಗೆ ಸಮಾಲೋಚನೆ ನಡೆಸಿ, ಮೂರು ತಿಂಗಳುಗಳ ಕಾಲ ವೈದ್ಯಕೀಯ ಚಿಕಿತ್ಸೆಗಾಗಿ ಒಳಗಾಗಬೇಕಾಗಿತ್ತು.
ಇದಕ್ಕಾಗಿ ಭಾರತ ಪ್ರವೇಶಕ್ಕೆ 2024ರ ಫೆಬ್ರವರಿ 22ರಂದು ಇ-ಮೇಲ್ ಕಳುಹಿಸಿ, ಭಾರತ ಪ್ರವೇಶಕ್ಕೆ ವೀಸಾಗಾಗಿ ಮನವಿ ಸಲ್ಲಿಸಿದ್ದರು. ಹಲವು ಬಾರಿ ಮನವಿ ಮಾಡಿದರೂ ಎಫ್‌ಆರ್‌ಆರ್‌ಒ ಪುರಸ್ಕರಿಸದ ಹಿನ್ನೆಲೆಯಲ್ಲಿ, ಬೆಂಗಳೂರಿನ ನಿವಾಸಿಯೊಬ್ಬರ ಸ್ಪೆಷಲ್ ಪವರ್ ಆಫ್ ಅಟಾರ್ನಿ (ಎಸ್‌ಪಿಎ) ಮೂಲಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಾದಿಸಿದ್ದ ಶಾಂತಿ ಭೂಷಣ್, ಅರ್ಜಿದಾರರು 2012ರಲ್ಲಿ ವೀಸಾ ಪಡೆದು ಬೆಂಗಳೂರಿನಲ್ಲಿ ಬಿ-ಫಾರ್ಮಾ ಅಧ್ಯಯನ ಮಾಡಲು ಅವರು ಭಾರತಕ್ಕೆ ಆಗಮಿಸಿದ್ದರು. ಬಳಿಕ 2017ರಲ್ಲಿ 11 ತಿಂಗಳ ಕಾಲ ವಿಳಂಬವಾಗಿ ತಮ್ಮ ದೇಶಕ್ಕೆ ಹಿಂದಿರುಗಿದ್ದರು.
ಅವಧಿ ಮೀರಿ ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದರ ಪರಿಣಾಮ ಅವರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿತ್ತು. ಆದರೂ 2017ರ ನವೆಂಬರ್ ತಿಂಗಳಲ್ಲಿ ವೈದ್ಯಕೀಯ ಸಹಾಯಕರಾಗಿ ಭಾರತಕ್ಕೆ ಬರಲು ಪ್ರಯತ್ನಿಸಿದ್ದರು. ಅವರಿಗೆ ಅವಕಾಶ ನಿರಾಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ 2019ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅಲ್ಲದೆ, ಅರ್ಜಿದಾರರನ್ನು ಕಪ್ಪುಪಟ್ಟಿಗೆ ಸೇರಿಸಿದ್ದರ ಪರಿಣಾಮ ಅವರು ಮತ್ತೊಬ್ಬ ವ್ಯಕ್ತಿಯ ಮೂಲಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವುದಕ್ಕೂ ಕಾನೂನಿಯಲ್ಲಿ ಅವಕಾಶವಿಲ್ಲ ಎಂದು ಪೀಠಕ್ಕೆ ವಿವರಿಸಿದ್ದರು.
ಇದನ್ನೂ ಓದಿ:ಒಬ್ಬರಿಗೆ 22 ನಕಲಿ ಖಾತೆ ಆರೋಪ: ಬಿಬಿಎಂಪಿಗೆ ವಿವರಣೆ ಕೇಳಿದ ಹೈಕೋರ್ಟ್ - High Court