ಕರ್ನಾಟಕ

karnataka

ETV Bharat / state

ರೈತ ಆಕಸ್ಮಿಕ ಠೇವಣಿ ಇಟ್ಟ ಹಣವನ್ನು ಬಡ್ಡಿಯೊಂದಿಗೆ ಹಿಂದಿರುಗಿಸಲು ಅರಣ್ಯ ಇಲಾಖೆಗೆ ಹೈಕೋರ್ಟ್ ಸೂಚನೆ - HIGH COURT ON FARMER DEPOSIT

ತನ್ನ ಜಮೀನಿನಲ್ಲಿರುವ ಮರಗಳನ್ನು ಕತ್ತರಿಸಲು ರೈತರೊಬ್ಬರು ಆಕಸ್ಮಿಕವಾಗಿ ಠೇವಣಿ ಇಟ್ಟ ಹಣವನ್ನು ಬಡ್ಡಿಯೊಂದಿಗೆ ಹಿಂದಿರುಗಿಸುವಂತೆ ಅರಣ್ಯ ಇಲಾಖೆಗೆ ಹೈಕೋರ್ಟ್ ಸೂಚಿಸಿದೆ.

HIGH COURT ON FARMER DEPOSIT
ಹೈಕೋರ್ಟ್ (ETV Bharat)

By ETV Bharat Karnataka Team

Published : Jan 4, 2025, 1:18 PM IST

ಬೆಂಗಳೂರು:ರಾಜ್ಯದ ಜನ ಮಾಡುವ ತಪ್ಪಿನ ಲಾಭ ಪಡೆಯಲು ಸರ್ಕಾರ ಪ್ರಯತ್ನಿಸಬಾರದೆಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಸಾಗು ಬಾಣೆ ಜಮೀನಿನಲ್ಲಿ ಮರಗಳನ್ನು ಕಡಿಯುವುದಕ್ಕಾಗಿ ತಪ್ಪಾಗಿ ಠೇವಣಿ ಇಟ್ಟಿದ್ದ ಹಣವನ್ನು ಬಡ್ಡಿಯೊಂದಿಗೆ ಹಿಂದಿರುಗಿಸಲು ಅರಣ್ಯ ಇಲಾಖೆಗೆ ಸೂಚಿಸಿದೆ.

ತಮ್ಮ ಪೂರ್ವಜರಾದ ಮಡಿಕೇರಿ ತಾಲೂಕಿನ ದಿವಂಗತ ಎನ್. ಮಹಾಬಲೇಶ್ವರ ಭಟ್ ತಪ್ಪಾಗಿ ಇಟ್ಟಿದ್ದ ಠೇವಣಿ ಹಿಂದಿರುಗಿಸಲು ಸೂಚಿಸುವಂತೆ ಕೋರಿ ಅವರ ಕಾನೂನುಬದ್ಧ ವಾರಸುದಾರರಾದ ಗಾಯತ್ರಿ ಕೋಂ ಎನ್.ಎಂ. ಕುಮಾರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ, ಸಾಗು ಬಾಣೆ ಜಮೀನು ಒಮ್ಮೆ ಪರಭಾರೆಗೊಂಡರೆ, ಆ ಜಮೀನಿನ ಮೇಲಾಗಲಿ ಅಥವಾ ಅದರಲ್ಲಿನ ಮರದ ಮೇಲಾಗಲಿ ಸರ್ಕಾರ ತನ್ನ ಯಾವುದೇ ಹಕ್ಕನ್ನು ಪ್ರತಿಪಾದಿಸಲಾಗದು.

ಅಲ್ಲದೆ, ಈ ಜಮೀನಿನಲ್ಲಿರುವ ಮರಗಳನ್ನು ಕತ್ತರಿಸಲು ಸರ್ಕಾರಕ್ಕೆ ಯಾವುದೇ ಠೇವಣಿ ಇಡುವುದಕ್ಕೆ ಅವಕಾಶವಿಲ್ಲ. ಹೀಗಾಗಿ ತಪ್ಪಾಗಿ ಮುಂಗಡವಾಗಿ ಅರ್ಜಿದಾರರಿಂದ ಠೇವಣಿ ಇರಿಸಿಕೊಂಡಿದ್ದ 4.33 ಲಕ್ಷ ಮೊತ್ತಕ್ಕೆ ಶೇ.6ರಂತೆ ವಾಷಿಕ ಬಡ್ಡಿಯೊಂದಿಗೆ ಹಿಂದಿರುಗಿಸಬೇಕು ಎಂದು ಸೂಚನೆ ನೀಡಿದೆ.

ಜತೆಗೆ, ಮರಗಳನ್ನು ಕತ್ತರಿಸಲು ಅರ್ಜಿದಾರರು ಅನುಮತಿ ಕೋರಿದಾಗಲೇ ಭೂಮಿಯ ದಾಖಲೆಗಳನ್ನು ಪರಿಶೀಲನೆ ಮಾಡಬೇಕಾದದ್ದು ಅರಣ್ಯಾಧಿಕಾರಿಗಳ ಕರ್ತವ್ಯವಾಗಿತ್ತು, ಈ ಪ್ರಕರಣದಲ್ಲಿ ಅರ್ಜಿದಾರರು ತಪ್ಪಾಗಿ ತಮ್ಮದು ಸಾಗು ಬಾಣೆ ಜಮೀನು ಎಂದು ತೋರಿಸಿದ್ದರು. ಇದರ ಅನುಕೂಲವನ್ನು ನೀವು ಸರ್ಕಾರ ಪಡೆಯಬಾರದು ಎಂದು ಪೀಠ ಸರ್ಕಾರಕ್ಕೆ ತಿಳಿಸಿದೆ.

ಪ್ರಕರಣದ ಹಿನ್ನೆಲೆ :ಮಡಿಕೇರಿ ತಾಲೂಕಿನ ಬಿಳಿಗೇರಿ ಗ್ರಾಮದ ಸರ್ವೇ ನಂಬರ್ 23ರಲ್ಲಿನ 25 ಎಕರೆ ಮತ್ತು ಸರ್ವೇ ನಂಬರ್ 29/7ರಲ್ಲಿನ 13.23 ಎಕರೆ ಜಮೀನನ್ನು ಎನ್. ಮಹಾಬಲೇಶ್ವರ ಭಟ್ ಖರೀದಿಸಿದ್ದರು. 1983ರಲ್ಲಿ ಈ ಜಮೀನಿನಲ್ಲಿರುವ 349 ಮರಗಳನ್ನು ಕತ್ತರಿಸಲು ಅನುಮತಿ ಕೋರಿ ಕೊಡಗು ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಅವರು ಅರ್ಜಿ ಸಲ್ಲಿಸಿದ್ದರು. ಇದಕ್ಕೆ 1983ರ ಫೆಬ್ರುವರಿ 1ರಂದು ಅನುಮತಿ ದೊರೆತಿತ್ತು, ಅರ್ಜಿದಾರರು ಅರಣ್ಯಾಧಿಕಾರಿಗಳ ಷರತ್ತಿನಂತೆ ಮರಗಳನ್ನು ಕತ್ತರಿಸಿ, ತೆರವು ಕಾರ್ಯದ ಮೌಲ್ಯ 4.33 ಮೊತ್ತವನ್ನು ಠೇವಣಿ ಇರಿಸಿದ್ದರು.

ಮರಗಳನ್ನು ಕತ್ತರಿಸಿ ತೆರವುಗೊಳಿಸಿದ ನಂತರ ಮಹಾಬಲೇಶ್ವರ ಭಟ್ ಅವರಿಗೆ, ''ಈ ಜಮೀನು ಪರಭಾರೆಗೊಂಡ ಸಾಗುಬಾಣೆ ಜಮೀನಾಗಿದ್ದು, ಇದನ್ನು ಕಂದಾಯ ಇಲಾಖೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ಹೀಗಾಗಿ, ಈ ಜಮೀನು ನನಗೆ ಸೇರಿರುವ ಕಾರಣ ಮರಗಳನ್ನು ಕತ್ತರಿಸಲು ಹಣ ಠೇವಣಿ ಇರಿಸಬೇಕೆಂಬ ಷರತ್ತನ್ನು ವಿಧಿಸಲು ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಅವಕಾಶವಿಲ್ಲ. ಆದ್ದರಿಂದ, ಠೇವಣಿ ಹಣವನ್ನು ಹಿಂದಿರುಗಿಸಬೇಕು'' ಎಂದು ಅರ್ಜಿದಾರರು ಕೋರಿದ್ದರು. ಆದರೆ, ಮೊತ್ತವನ್ನು ಹಿಂದಿರುಗಿಸಲು ಮಡಿಕೇರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ:ವೈವಾಹಿಕ ಸಂಬಂಧ ಕೊನೆಗಾಣಿಸುವ ಸಮ್ಮತಿಯಿಂದ ಅರ್ಜಿ ಸಲ್ಲಿಸಿ ಕೋರ್ಟ್​ಗೆ ಗೈರಾದ ಮಹಿಳೆ; ಪತಿಗೆ ವಿಚ್ಛೇದನ ಮಂಜೂರು - HIGH COURT

ABOUT THE AUTHOR

...view details