ಕರ್ನಾಟಕ

karnataka

ETV Bharat / state

ವಾಲ್ಮೀಕಿ ನಿಗಮದ ಹಗರಣ: ತನಿಖಾ ವರದಿ ಸಲ್ಲಿಸುವಂತೆ ಸಿಬಿಐಗೆ ಹೈಕೋರ್ಟ್ ನಿರ್ದೇಶನ - VALMIKI CORPORATION SCAM

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ತನಿಖಾ ವರದಿಯನ್ನು ಸಲ್ಲಿಸುವಂತೆ ಸಿಬಿಐಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

VALMIKI CORPORATION SCAM
ಹೈಕೋರ್ಟ್ (ETV Bharat)

By ETV Bharat Karnataka Team

Published : Jan 23, 2025, 10:34 PM IST

ಬೆಂಗಳೂರು:ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಣ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಸಂಪೂರ್ಣ ಸ್ಥಿತಿಗತಿ ವರದಿ ಸಲ್ಲಿಸಿದಲ್ಲಿ ಎಲ್ಲ ಅಂಶಗಳು ಬೆಳಕಿಗೆ ಬರಲಿವೆ ಎಂದು ಮೌಖಿಕವಾಗಿ ತಿಳಿಸಿರುವ ಹೈಕೋರ್ಟ್​ ನ್ಯಾಯಪೀಠ, ಮುಂದಿನ ವಿಚಾರಣೆ ವೇಳೆ ತನಿಖಾ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ.

ಕೆಎಂವಿಎಸ್ಟಿಡಿಸಿಎಲ್ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಕೆಲವು ಅಧಿಕಾರಿಗಳ ವಿರುದ್ಧ ಕೇಂದ್ರೀಯ ತನಿಖಾ ದಳವು (ಸಿಬಿಐ) ದಾಖಲಿಸಿರುವ ಎಫ್‌ಐಆರ್ ಕುರಿತಂತೆ ತನಿಖೆ ನಡೆಸಿ, ಸಕ್ಷಮ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲು ಆದೇಶಿಸುವಂತೆ ಕೋರಿ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಶಾಸಕರಾದ ಅರವಿಂದ್ ಲಿಂಬಾವಳಿ ಮತ್ತು ಕುಮಾರ ಬಂಗಾರಪ್ಪ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ವಾಲ್ಮೀಕಿ ನಿಗಮದ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ ವರದಿ ಸಲ್ಲಿಸಿದ್ದು, ಅಕ್ರಮ ಹಣವನ್ನು ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಸುಮಾರು 20 ಕೋಟಿ ರೂ.ಗಳು ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಕೆ ಮಾಡಲಾಗಿದೆ. ಅಂದಿನ ಹಣಕಾಸು ಇಲಾಖೆ ಮತ್ತು ಹಣಕಾಸು ಸಚಿವರ ಸಹಮತಿ ಇಲ್ಲದೇ ಇಂಥ ಹಗರಣ ನಡೆಯುವುದಕ್ಕೆ ಅವಕಾಶವಿಲ್ಲ'' ಎಂದು ಪೀಠಕ್ಕೆ ತಿಳಿಸಿದರು.

''ಅಲ್ಲದೇ, ಭ್ರಷ್ಟಾಚಾರ ನಿಯಂತ್ರಣಾ ಕಾಯಿದೆ ಅಡಿ ಸಿಬಿಐ ಎಲ್ಲವನ್ನೂ ತನಿಖೆ ನಡೆಸಲು ಸ್ವತಂತ್ರವಾಗಿದೆ ಎಂದು ಇದೇ ಪೀಠ ಆದೇಶಿಸಿದೆ'' ಎಂದರು.

ಸಿಬಿಐ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್, ''ಜನವರಿ 15ರವರೆಗೂ ನಡೆದಿರುವ ತನಿಖೆಯ ಸ್ಥಿತಿಗತಿ ವರದಿ ಸಲ್ಲಿಸಿದ್ದೇವೆ. ರಾಜ್ಯ ಸರ್ಕಾರವು ನೇಮಿಸಿದ್ದ ವಿಶೇಷ ತನಿಖಾ ದಳ (ಎಸ್‌ಐಟಿ)ಕ್ಕೆ ಗೊತ್ತಾಗದ ಹಲವು ಬ್ಯಾಂಕ್ ಖಾತೆಗಳನ್ನು ಪತ್ತೆ ಮಾಡಲಾಗಿದೆ'' ಎಂದು ವಿವರಿಸಿದರು.

ಇದಕ್ಕೆ ಪೀಠ, ಮುಚ್ಚಿದ ಲಕೋಟೆಯಲ್ಲಿ ಸಿಬಿಐ ಸಲ್ಲಿಸಿದ್ದ ತನಿಖಾ ವರದಿಯನ್ನು ಪರಿಶೀಲಿಸಿತು. ಆನಂತರ ಪ್ರಕರಣದ ಮೇಲೆ ನ್ಯಾಯಾಲಯ ನಿಗಾ ಇರಿಸಿದೆ. ಸಂಪೂರ್ಣ ಸ್ಥಿತಿಗತಿ ವರದಿ ಬರಲಿ, ಎಲ್ಲವೂ ಬೆಳಕಿಗೆ ಬರಲಿದೆ ಎಂದು ತಿಳಿಸಿ ವಿಚಾರಣೆ ಮುಂದೂಡಿತು.

ಇದನ್ನೂ ಓದಿ:ಮತ್ತೊಮ್ಮೆ ಕೆಎಎಸ್​ ಪೂರ್ವಭಾವಿ ಪರೀಕ್ಷೆಗೆ ಕೋರಿ ಅರ್ಜಿ: ಸರ್ಕಾರ, ಕೆಪಿಎಸ್​ಸಿಗೆ ಹೈಕೋರ್ಟ್ ನೋಟಿಸ್

ABOUT THE AUTHOR

...view details