ಕರ್ನಾಟಕ

karnataka

ETV Bharat / state

85 ವರ್ಷದ ವೃದ್ದೆಗೆ ವರ್ಷಕ್ಕೆ ತಲಾ ₹7 ಲಕ್ಷ ಪಾವತಿಸಲು ಹೈಕೋರ್ಟ್ ಸೂಚನೆ - High Court - HIGH COURT

ವೃದ್ಧೆಯ ಜೀವನ ನಿರ್ವಹಣೆಗೆ ವಾರ್ಷಿಕ 7 ಲಕ್ಷ ರೂ. ಪಾವತಿಸಲು ಸೂಚಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶವನ್ನು ದ್ವಿಸದಸ್ಯ ಪೀಠ ಎತ್ತಿ ಹಿಡಿದಿದೆ.

high-court
ಹೈಕೋರ್ಟ್​ (ETV Bharat)

By ETV Bharat Karnataka Team

Published : Oct 3, 2024, 10:53 PM IST

ಬೆಂಗಳೂರು: ಸುಮಾರು 85 ವರ್ಷದ ಅಪ್ಪರಂಡ ಶಾಂತಿ ಬೋಪಣ್ಣ ಎಂಬವರ ಜೀವನ ನಿರ್ವಹಣೆಗೆ ವಾರ್ಷಿಕ ತಲಾ 7 ಲಕ್ಷ ರೂ. ಪಾವತಿಸಲು ಶಾಂತಿ ಬೋಪಣ್ಣ ಅವರ ಪುತ್ರ ಮತ್ತು ಮೊಮ್ಮಗಳಿಗೆ ನಿರ್ದೇಶಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ದ್ವಿಸದಸ್ಯ ಪೀಠ ಇಂದು ಎತ್ತಿ ಹಿಡಿಯಿತು.

ಏಕಸದಸ್ಯ ಪೀಠದ ಆದೇಶ ರದ್ದತಿ ಕೋರಿ ಶಾಂತಿ ಬೋಪಣ್ಣ ಅವರ ಪುತ್ರ ಎ.ಬಿ.ಗಣಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್‌ ಅವರಿದ್ದ ನೇತೃತ್ವದ ವಿಭಾಗೀಯ ಪೀಠ ತಿರಸ್ಕರಿಸಿದೆ.

ಅಪ್ಪರಂಡ ಶಾಂತಿ ಬೋಪಣ್ಣರ ಜೀವನಾಂಶಕ್ಕೆ ಸಂಬಂಧಿಸಿದಂತೆ ಮಗ ಮತ್ತು ಮೊಮ್ಮಗಳು ವರ್ಷವೊಂದಕ್ಕೆ ತಲಾ 7 ಲಕ್ಷ ಪಾವತಿಸಬೇಕು ಎಂಬ ಏಕಸದಸ್ಯ ಪೀಠದ ಆದೇಶದಲ್ಲಿ ಮಧ್ಯ ಪ್ರವೇಶಿಸುವ ಅವಶ್ಯಕತೆ ಇಲ್ಲ ಎಂದು ವಿಭಾಗೀಯ ಪೀಠ ಹೇಳಿತು.

ಪ್ರಕರಣದ ಹಿನ್ನೆಲೆ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರದ ಹೆರೂರು ಎಸ್ಟೇಟ್‌ ನಿವಾಸಿಯಾದ ಅಪ್ಪರಂಡ ಶಾಂತಿ ಬೋಪಣ್ಣ ತಾವು ಹೊಂದಿದ್ದ 22 ಎಕರೆ ಕಾಫಿ ಎಸ್ಟೇಟ್‌ ಅನ್ನು ತಮ್ಮ ಪುತ್ರ ಎ.ಬಿ.ಗಣಪತಿ ಹಾಗೂ ಮೊಮ್ಮಗಳಾದ ಪೂಜಾ ಅಲಿಯಾಸ್ ಸಂಜನಾ ಸುಬ್ಬಯ್ಯ ಅವರಿಗೆ 2016ರಲ್ಲಿ ದಾನ ಮಾಡಿದ್ದರು.

ಈ ಸಂದರ್ಭದಲ್ಲಿ ಶಾಂತಿ ಬೋಪಣ್ಣರ ಜೀವನ ನಿರ್ವಹಣೆಗೆ ವಾರ್ಷಿಕ ತಲಾ 7 ಲಕ್ಷ ಮೊತ್ತವನ್ನು ಬ್ಯಾಂಕಿನಲ್ಲಿ ಠೇವಣಿ ಇರಿಸುವುದಾಗಿ ಗಣಪತಿ ಹಾಗೂ ಸಂಜನಾ ಭರವಸೆ ನೀಡಿದ್ದರು. ಅಂತೆಯೇ, 2016ರಿಂದ 2019ರವರೆಗೆ ಹಣ ಪಾವತಿಸಿದ್ದರು. ತದನಂತರ ಹಣ ನೀಡಿರಲಿಲ್ಲ.

ಗಣಪತಿ ಹಾಗೂ ಸಂಜನಾ ಆಸ್ತಿ ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಸಂಗತಿ ಶಾಂತಿ ಬೋಪಣ್ಣ ಅವರ ಅರಿವಿಗೆ ಬಂದಿತ್ತು. ಹೀಗಾಗಿ, ದಾನಪತ್ರ ರದ್ದುಪಡಿಸಬೇಕು ಎಂದು ಕೋರಿ ಅವರು ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಮಂಡಳಿಯ ಪ್ರತಿನಿಧಿಯೂ ಆದ ಕೊಡಗು ಜಿಲ್ಲೆ ಮಡಿಕೇರಿಯ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ್ದ ಉ‍ಪವಿಭಾಗಾಧಿಕಾರಿ 2021ರ ಸೆಪ್ಟೆಂಬರ್ 15ರಂದು ದಾನಪತ್ರ ರದ್ದುಗೊಳಿಸಿ ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ಗಣಪತಿ ಹಾಗೂ ಸಂಜನಾ ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸಿದ್ದರು. 2023ರ ಮಾರ್ಚ್‌ 23ರಂದು ಉಪವಿಭಾಗಾಧಿಕಾರಿ ಆದೇಶವನ್ನು ರದ್ದುಪಡಿಸಿದ್ದ ಜಿಲ್ಲಾಧಿಕಾರಿ, ಪುತ್ರ ಹಾಗೂ ಮೊಮ್ಮಗಳ ಆಸ್ತಿ ಹಕ್ಕನ್ನು ಮರು ಸ್ಥಾಪಿಸಲು ಆದೇಶಿಸಿದ್ದರು. ಜೀವನದ ಸಂಧ್ಯಾ ಕಾಲದಲ್ಲಿರುವ ವೃದ್ಧ ತಾಯಿಯ ಜೀವಿತಾವಧಿವರೆಗೆ ವಾರ್ಷಿಕ ಜೀವನಾಂಶ ಪಾವತಿಸಿ ಎಂದು ಮಗ ಮತ್ತು ಮೊಮ್ಮಗಳಿಗೆ ನಿರ್ದೇಶಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ:ಪತ್ನಿಗೆ ಜೀವನಾಂಶ ಪಾವತಿಸುವವರೆಗೂ ವಿಚಾರಣೆಗೆ ತಡೆಯಾಜ್ಞೆ ನೀಡಬಹುದು: ಹೈಕೋರ್ಟ್ - High Court

ABOUT THE AUTHOR

...view details