ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಕೈದಿಗಳಿಗೆ ಜೀವ ಭಯವಿರುವುದು ಹಾಗೂ ತಮ್ಮ ವಕೀಲರೊಂದಿಗೆ ಚರ್ಚೆ ನಡೆಸಲು ಒಂದೇ ಕಾರಾಗೃಹಕ್ಕೆ ಸ್ಥಳಾಂತರಿಸಲು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್, ರಾಜ್ಯದ ಎಲ್ಲ ಜೈಲುಗಳಲ್ಲಿ ಕೈದಿಗಳೊಂದಿಗೆ ವಕೀಲರು ಸಂಭಾಷಣೆ ನಡೆಸಲು ಅತ್ಯುತ್ತಮ ವಿಡಿಯೋ ಕಾನ್ಫರೆನ್ಸಿಂಗ್ ವ್ಯವಸ್ಥೆ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ವಕೀಲರು ಹಾಗೂ ಕುಟುಂಬ ಸದಸ್ಯರೊಂದಿಗೆ ನಡೆಸುವ ಸಂಭಾಷಣೆ ಮತ್ತೊಬ್ಬರಿಗೆ ತಿಳಿಯದಂತೆ ಗೌಪ್ಯತೆ ಕಾಪಾಡಲು ಹೆಡ್‌ಫೋನ್‌ಗಳನ್ನು ಒದಗಿಸಬೇಕು. ಆಗ ಮಾತ್ರ ಗೌಪ್ಯತೆ ಉಲ್ಲಂಘನೆಯಾಗುವ ಆರೋಪ ಎದುರಾಗುವುದಿಲ್ಲ. ಹೀಗಾಗಿ ಈ ಸೌಲಭ್ಯ ಇಲ್ಲದ ಜೈಲುಗಳಲ್ಲಿ ಶೀಘ್ರದಲ್ಲೇ ಸರ್ಕಾರ ಸೌಲಭ್ಯ ಒದಗಿಸಬೇಕು. ಇರುವಲ್ಲಿ ದೋಷವಿಲ್ಲದಂತೆ ಕಾರ್ಯನಿರ್ವಹಿಸಲು ನಿರ್ದೇಶನ ನೀಡಬೇಕು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ಪ್ರವೀಣ್ ನೆಟ್ಟಾರು ಕೊಲೆ ಆರೋಪದಲ್ಲಿ ರಾಜ್ಯದ ವಿವಿಧ ಜೈಲುಗಳಲ್ಲಿರುವ ಅಬ್ದುಲ್ ಬಷೀರ್ ಸೇರಿದಂತೆ 10 ಮಂದಿ ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಅರ್ಜಿದಾರರ ಮನವಿ ತಿರಸ್ಕರಿಸಿತು. ಅಲ್ಲದೆ, ಕೈದಿಗಳನ್ನು ಸುರಕ್ಷಿತರನ್ನಾಗಿಡುವುದು ಸರ್ಕಾರದ ಕರ್ತವ್ಯ. ಒಂದು ವರ್ಷದ ಹಿಂದೆ ನಡೆದ ಅಹಿತಕರ ಘಟನೆಯ ಕಾರಣದಿಂದ ಅರ್ಜಿದಾರರನ್ನು ಒಂದೇ ಜೈಲಿನಲ್ಲಿರಿಸುವುದಕ್ಕೆ ಕಾರಣವಾಗುವುದಿಲ್ಲ. ಆ ರೀತಿಯ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದು ಮತ್ತು ಅವರ ಜೀವಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಭರವಸೆ ನೀಡಿದ್ದಾರೆ.
ಈ ಪ್ರಕರಣಲ್ಲಿ ಬಂಧನಕ್ಕೊಳಗಾಗಿರುವ ಎಲ್ಲ ಆರೋಪಿಗಳು ನಿಷೇಧಿತ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯರಾಗಿದ್ದಾರೆ. ಒಬ್ಬರು ಈಗಾಗಲೇ ತಪ್ಪೊಪ್ಪಿಕೊಂಡಿರುವುದರಿಂದ ಇನ್ನಿತರರನ್ನು ಒಂದೇ ಕಡೆ ಇಡುವುದು ಸೂಕ್ತವಲ್ಲ. ಆದ ಕಾರಣ ಸ್ಥಳಾಂತರ ಅನಗತ್ಯ. ಹಾಗಾಗಿ ಅರ್ಜಿ ವಜಾಗೊಳಿಲಾಗುತ್ತಿದೆ ಎಂದು ಪೀಠ ಹೇಳಿತು.
ಪ್ರಕರಣದ ಹಿನ್ನೆಲೆ:ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಮೂರು ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದ ಬಳಿಕ ಹಲವು ಆರೋಪಿಗಳನ್ನು ಬಂಧಿಸಲಾಗಿತ್ತು. 2023ರ ಜನವರಿಯಲ್ಲಿ ಪ್ರಕರಣದ ಆರೋಪಿಯಾಗಿರುವ ಮಹಮ್ಮದ್ ಜಬೀರ್ ಎಂಬವರು ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ತಪ್ಪೊಪ್ಪಿಕೊಳ್ಳುವುದಾಗಿ ತಿಳಿಸಿ ಕ್ಷಮಾಪಣೆ ಕೋರಿದ್ದರು. ಇದೇ ಕಾರಣದಿಂದ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿ, ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರ ಮಾಡುವುದಕ್ಕೆ ಮನವಿ ಮಾಡಿತ್ತು. ಇದನ್ನು ನ್ಯಾಯಾಲಯ ಪರಿಗಣಿಸಿದ್ದು, ಎಲ್ಲ ಆರೋಪಿಗಳನ್ನು ವಿವಿಧ ನ್ಯಾಯಾಲಯಗಳಿಗೆ ಸ್ಥಳಾಂತರ ಮಾಡುವುದಕ್ಕೆ ಅನುಮೋದನೆ ನೀಡಿತ್ತು.