ಬೆಂಗಳೂರು: ಉದ್ಯಮಿ ಹಾಗೂ ಜೆಡಿಎಸ್ ಮಾಜಿ ಮುಖಂಡ ವಿಜಯ್ ಟಾಟಾಗೆ ಬೆದರಿಕೆಯೊಡ್ಡಿದ ಆರೋಪ ಸಂಬಂಧ ವಿಧಾನಪರಿಷತ್ ಮಾಜಿ ಸದಸ್ಯ ಹೆಚ್.ಎಂ. ರಮೇಶ್ ಗೌಡ ವಿರುದ್ಧ ಮೊದಲಿಗೆ ಸಂಜ್ಞೆರಹಿತ ಅಪರಾಧ ವರದಿ (ಎನ್‌ಸಿಆರ್) ದಾಖಲಿಸಿ ಹಿಂಬರಹ ನೀಡಿದ ಬಳಿಕ, ಯಾಕೆ ಎಫ್‌ಐಆರ್ ದಾಖಲಿಸಲಾಗಿದೆ ಎಂಬುದಕ್ಕೆ ಬೆಂಗಳೂರಿನ ಅಮೃತಹಳ್ಳಿ ಠಾಣಾಧಿಕಾರಿ ವಿವರಣೆ ನೀಡಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ.
ಅಮೃತಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದುಗೊಳಿಸಬೇಕು ಎಂದು ಕೋರಿ ಜೆಡಿಎಸ್ ಮುಖಂಡ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಹೆಚ್.ಎಂ. ರಮೇಶ್ ಗೌಡ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ನಡೆಸಿತು.
ದುರುದ್ದೇಶಪೂರಿತ ಕ್ರಮ ಕೈಗೊಳ್ಳಬಾರದು: ''ಅಮೃತಹಳ್ಳಿ ಠಾಣಾಧಿಕಾರಿಯು ಕುಮಾರಸ್ವಾಮಿ ಅವರು 50 ಕೋಟಿ ರೂ. ಬೇಡಿಕೆ ಇಟ್ಟಿದ್ದಾರೆ ಎಂಬ ದೂರಿಗೆ ಸಂಬಂಧಿಸಿದಂತೆ ಮೊದಲಿಗೆ ಎನ್‌ಸಿಆರ್ ದಾಖಲಿಸಿ, ಆನಂತರ ಎಫ್‌ಐಆರ್ ಮಾಡಿರುವುದು ಏಕೆ ಎಂಬುದಕ್ಕೆ ಮುಂದಿನ ವಿಚಾರಣೆ ವೇಳೆಗೆ ವಿವರಣೆ ಸಲ್ಲಿಸಬೇಕು. ಇಲ್ಲಿ ಠಾಣಾಧಿಕಾರಿಯು ತಪ್ಪಾಗಿ ನಡೆದುಕೊಂಡಿರುವಂತಿದೆ. ಅಲ್ಲಿಯವರೆಗೆ ಅರ್ಜಿದಾರರ ವಿರುದ್ಧ ಯಾವುದೇ ದುರುದ್ದೇಶಪೂರಿತ ಕ್ರಮ ಕೈಗೊಳ್ಳಬಾರದು'' ಎಂದು ರಾಜ್ಯ ಸರ್ಕಾರಕ್ಕೆ ಆದೇಶಿಸಿ, ವಿಚಾರಣೆಯನ್ನು ಅಕ್ಟೋಬರ್ 29ಕ್ಕೆ ಮುಂದೂಡಿತು.
ರಾಜ್ಯ ಸರ್ಕಾರ ವಿವರಣೆ ನೀಡಲಿ:ವಿಚಾರಣೆ ವೇಳೆ ಅರ್ಜಿದಾರ ರಮೇಶ್‌ಗೌಡ ಪ್ರತಿನಿಧಿಸಿದ್ದ ಹಿರಿಯ ವಕೀಲರು, ''ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಮನೆಗೆ ಊಟಕ್ಕೆ ಹೋದಾಗ ದೂರುದಾರ ವಿಜಯ್ ಟಾಟಾ ಅವರನ್ನು ಉಪಚುನಾವಣೆಗೆ 50 ಕೋಟಿ ರೂಪಾಯಿ ಹಣ ಕೇಳಿದ್ದಾರೆ ಎಂದು ಆರೋಪಿಸಲಾಗಿದೆ. 23 ದಿನಗಳ ವಿಳಂಬದ ಬಳಿಕ ವಿಜಯ್ ಅವರು ಕುಮಾರಸ್ವಾಮಿ ಮತ್ತು ರಮೇಶ್ ಗೌಡ ವಿರುದ್ಧ ದೂರು ನೀಡಿದ್ದಾರೆ. ಮೊದಲಿಗೆ ಸಂಜ್ಞೆಯೇತರ ಅಪರಾಧ ವರದಿ (ಎನ್‌ಸಿಆರ್) ಎಂದು ಪೊಲೀಸರು ಹಿಂಬರಹ ನೀಡಿದ್ದಾರೆ. ಆನಂತರ ಸುಲಿಗೆ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಈ ನಡುವೆ ಏನಾಗಿದೆ ಎಂದು ರಾಜ್ಯ ಸರ್ಕಾರ ವಿವರಣೆ ನೀಡಬೇಕಿದೆ'' ಎಂದರು.