ಬೆಂಗಳೂರು: ನಗರದ ಹಿರಿಯ ವೃದ್ಧೆಯೊಬ್ಬರ ಕೋಟ್ಯಂತರ ರೂಪಾಯಿ ಹಾಗೂ ಭಾರಿ ಬೆಲೆಯ ಆಸ್ತಿಯನ್ನು ವಂಚಿಸಿದ ಆರೋಪ ಎದುರಿಸುತ್ತಿರುವ ತನ್ನ ಸಿಬ್ಬಂದಿ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಅಲ್ಲದೇ, ಮೇಲ್ನೋಟಕ್ಕೆ ಆರೋಪಗಳಲ್ಲಿ ಹುರುಳಿದೆ ಎಂದು ಕಂಡುಬರುತ್ತಿದೆ. ಹಾಗಾಗಿ ತನಿಖೆ ಎದುರಿಸಲೇಬೇಕು ಎಂದು ಆದೇಶ ನೀಡಿದೆ.
47 ವರ್ಷದ ಹೈಕೋರ್ಟ್ ಸಿಬ್ಬಂದಿ ಎನ್.ವೆಂಕಟೇಶ್, ಆತನ ಪತ್ನಿ ಹಾಗೂ ಮಗ ಮತ್ತು ಸೊಸೆ ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಸಿವಿಲ್ ವ್ಯಾಜ್ಯಕ್ಕೆ ಅಪರಾಧದ ಬಣ್ಣ ಹಚ್ಚಲಾಗಿದೆ ಎಂಬ ಅರ್ಜಿದಾರರ ವಾದವನ್ನು ತಳ್ಳಿ ಹಾಕಿರುವ ನ್ಯಾಯಾಲಯ, ಇದು ಮೇಲ್ನೋಟಕ್ಕೆ ಸಿವಿಲ್ ವ್ಯಾಜ್ಯದಂತೆ ಕಂಡರೂ ಸಹ ದೂರಿನ ಆಳಕ್ಕೆ ಇಳಿದಾಗ ಅದರಲ್ಲಿ ಸ್ವಲ್ಪ ಸತ್ಯಾಂಶವಿದೆ ಎಂದು ಕಂಡುಬರುತ್ತದೆ. ಅರ್ಜಿದಾರರ ವಿರುದ್ಧದ ಆರೋಪಗಳಲ್ಲಿ ಪುಷ್ಠಿ ನೀಡುವ ವಿಚಾರಗಳಿವೆ ಎನಿಸುತ್ತದೆ. ಹಾಗಾಗಿ ತನಿಖೆಯನ್ನು ಎದುರಿಸಲಿ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅಲ್ಲದೇ, ಅರ್ಜಿದಾರರ ವಿರುದ್ಧ ವಿಶ್ವಾಸ ದ್ರೋಹ, ವಂಚನೆ, ನಕಲಿ ದಾಖಲೆ ಸೃಷ್ಟಿ ಮತ್ತು ಕ್ರಿಮಿನಲ್ ಪಿತೂರಿ ಆರೋಪಗಳಿವೆ. ಈ ಬಗ್ಗೆ ತನಿಖೆಯಿಂದ ಮಾತ್ರ ಸಂಪೂರ್ಣ ಸತ್ಯಾಂಶ ಹೊರ ಬೀಳಬೇಕಿದೆ. ಮೇಲ್ನೋಟಕ್ಕೆ ವ್ಯಾಜ್ಯ ಸಿವಿಲ್ ಸ್ವರೂಪದಂತೆ ಕಂಡು ಬಂದರೂ ಸಹ ಅದರಲ್ಲಿ ಬೇರೆ ಕ್ರಿಮಿನಲ್ ಅಂಶಗಳಿರುವುದರಿಂದ ತನಿಖೆ ಆಗಲೇಬೇಕಿದೆ ಎಂದು ನ್ಯಾಯಾಲಯ ಹೇಳಿದೆ.