ಕರ್ನಾಟಕ

karnataka

ETV Bharat / state

ಮದುವೆಯಾಗುವುದಾಗಿ ನಂಬಿಸಿ ವಂಚನೆ ಪ್ರಕರಣ: ಕಾನ್ಸ್​ಟೇಬಲ್​​ಗೆ ಮಂಜೂರಾಗಿದ್ದ ಜಾಮೀನು ರದ್ದು - High Court canceled the bail

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ಪೊಲೀಸ್​ ಕಾನ್ಸ್​ಟೇಬಲ್​​ಗೆ ಮಂಜೂರಾಗಿದ್ದ ಜಾಮೀನನ್ನು ಹೈಕೋರ್ಟ್ ರದ್ದುಪಡಿಸಿದೆ.

high-court-canceled-the-bail-granted-to-a-police-constable-who-was-facing-charges-of-rape
ಮದುವೆಯಾಗುವುದಾಗಿ ನಂಬಿಸಿ ವಂಚನೆ: ಪೇದೆಯ ವಶಕ್ಕೆ ಪಡೆಯಲು ಹೈಕೋರ್ಟ್ ಸೂಚನೆ

By ETV Bharat Karnataka Team

Published : Mar 12, 2024, 10:55 PM IST

ಬೆಂಗಳೂರು: ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ಮಹದೇವಪುರ ಪೊಲೀಸ್ ಠಾಣೆಯ ಕಾನ್ಸ್​​ಟೇಬಲ್​ಗೆ ಮಂಜೂರಾಗಿದ್ದ ಜಾಮೀನನ್ನು ಹೈಕೋರ್ಟ್ ರದ್ದುಪಡಿಸಿದೆ. ಬೆಳಗಾವಿ ತಾಲೂಕು ಬೈಲಹೊಂಗಲ ತಾಲೂಕಿನ ನೇಗಿನಹಾಳ ಮೂಲದ ಫಕೀರಪ್ಪ ಹಟ್ಟಿ ಎಂಬುವರಿಗೆ ಮಂಜೂರಾಗಿದ್ದ ಜಾಮೀನು ರದ್ದಾಗಿದೆ. ಅಲ್ಲದೇ, ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿದ ಆರೋಪದಲ್ಲಿ ಆರೋಪಿಯ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಪ್ರಕರಣದಲ್ಲಿ ಸಂತ್ರಸ್ತೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಅವರಿದ್ದ ನ್ಯಾಯಪೀಠ, ಆರೋಪಿಯನ್ನು ವಶಕ್ಕೆ ಪಡೆಯುವಂತೆ ಡಿಸಿಪಿಗೆ ಸೂಚನೆ ನೀಡಿದೆ. ಆರೋಪಿಗೆ 1 ಲಕ್ಷ ರೂ.ಗಳ ದಂಡ ವಿಧಿಸಿದ್ದು, ಮುಂದಿನ ಎರಡು ವಾರಗಳಲ್ಲಿ ದಂಡದ ಮೊತ್ತವನ್ನು ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸುವಂತೆ ಆದೇಶ ನೀಡಿದೆ. ಒಂದು ವೇಳೆ, ದಂಡ ಪಾವತಿ ಮಾಡದಿದ್ದರೆ ರಿಜಿಸ್ಟ್ರಾರ್ ಜನರಲ್ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಎಂದು ಪೀಠ ನಿರ್ದೇಶನ ನೀಡಿದೆ.

ಜತೆಗೆ, ಆರೋಪಿ, ಪೊಲೀಸ್ ಕಾನ್ಸ್​​ಟೇಬಲ್​​​ ಹೆಸರಿನಲ್ಲಿ ಸಂತ್ರಸ್ತೆಯನ್ನು ಬೆದರಿಸಿದ್ದಾರೆ ಮತ್ತು ನಿರಂತರವಾಗಿ ಅತ್ಯಾಚಾರವೆಸಗಿದ್ದಾರೆ. ಆ ನಂತರ ನ್ಯಾಯಾಲಯದ ಆದೇಶವನ್ನು ಪೊಲೀಸರು ಪಾಲಿಸಿಲ್ಲ. ಇದು ಕಾನೂನಿನ ಸ್ಪಷ್ಟ ದುರುಪಯೋಗವಾಗಿದೆ. ಆರೋಪಿ ಬಹಳ ಜಾಣ್ಮೆಯಿಂದ ಕೆಲವು ವಸ್ತು ಸಂಗತಿಗಳನ್ನು ಮುಚ್ಟಿಟ್ಟು ನ್ಯಾಯಾಲಯಗಳ ಹಾದಿ ತಪ್ಪಿಸಿದ್ದಾನೆ. ಹಾಗಾಗಿ ಆರೋಪಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.

ಅಲ್ಲದೇ, ಈ ಪ್ರಕರಣದಲ್ಲಿ ತನಿಖಾಧಿಕಾರಿ ಆರೋಪಿ ವಿರುದ್ಧ ವಿಚಾರಣಾ ನ್ಯಾಯಾಲಯದಲ್ಲಿ ಕೆಲವು ಮಾಹಿತಿಗಳನ್ನು ಮುಚ್ಚಿಟ್ಟಿದ್ದಾರೆ. ಏಕೆಂದರೆ ಈ ಪ್ರಕರಣ ಪೊಲೀಸರಿಗೆ ಸಂಬಂಧಿಸಿದ್ದು ಎಂಬ ಕಾರಣಕ್ಕೆ. ಹಾಗಾಗಿ ಈ ಹಿಂದೆ ಪಡೆದಿರುವ ಜಾಮೀನು ರದ್ದು ಗೊಳಿಸಲು ಪ್ರಕರಣ ಎಲ್ಲ ರೀತಿಯಲ್ಲೂ ಅರ್ಹವಾಗಿದೆ. ಆರೋಪಿ ವಿಚಾರಣೆಯನ್ನು ಎದುರಿಸಲಿ ಎಂದು ನ್ಯಾಯಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ?: ಮಹದೇವಪುರ ಠಾಣೆಯಲ್ಲಿ ಫಕೀರಪ್ಪ ಹಟ್ಟಿ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಮನೆ ಖಾಲಿ ಮಾಡಿಸುವ ವಿಚಾರದಲ್ಲಿ ಪೊಲೀಸ್ ಠಾಣೆಗೆ ತೆರಳಿದಾಗ ಪೇದೆಗೆ ಸಂತ್ರಸ್ತೆ ಪರಿಚಯವಾದರು. ಆನಂತರ ತಾನು ವಿವಾಹವಾಗುವುದಾಗಿ ಆಕೆಯನ್ನು ನಂಬಿಸಿ 2019 ರಿಂದ 2022 ರವರೆಗೆ ನಿರಂತರ ಅತ್ಯಾಚಾರವೆಸಗಿದ್ದರು ಎಂದು ಆರೋಪಿಸಲಾಗಿದೆ. ಆ ಬಗ್ಗೆ ಪೊಲೀಸ್ ಠಾಣೆ, ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದರೂ ಎಫ್‌ಐಆರ್ ದಾಖಲಿಸಿರಲಿಲ್ಲ. ಕೊನೆಗೆ ಸಂತ್ರಸ್ತೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ಆನಂತರ ಆರೋಪಿ ನಿರೀಕ್ಷಣಾ ಜಾಮೀನು ಪಡೆದಿದ್ದನು. ಆರೋಪಿ ಸೆಷನ್ಸ್ ಕೋರ್ಟ್​ನಿಂದ ಪಡೆದಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ರದ್ದುಪಡಿಸಿತ್ತು. ಆದರೆ, ಆರೋಪಿ ಜಾಮೀನು ರದ್ದಾದ ವಿಚಾರ ಕೋರ್ಟ್ ಗಮನಕ್ಕೂ ತರದೆ ಆರೋಪಿ ಹೊರಗಿದ್ದರು. ಆ ಹಿನ್ನೆಲೆಯಲ್ಲಿ ಮಹಿಳೆ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯನ್ನು ಆಲಿಸಿದ ನ್ಯಾಯಾಲಯ ಕಾನ್ಸ್​ಟೇಬಲ್​ ಫಕೀರಪ್ಪನನ್ನು ಕೂಡಲೇ ವಶಕ್ಕೆ ಪಡೆಯಲು ಡಿಸಿಪಿಗೆ ಸೂಚನೆ ನೀಡಿದೆ.

ಇದನ್ನೂ ಓದಿ:ರಾಜ್ಯದಲ್ಲಿ ಹುಕ್ಕಾ ನಿಷೇಧ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ABOUT THE AUTHOR

...view details