ಕರ್ನಾಟಕ

karnataka

ETV Bharat / state

ಒಬ್ಬರಿಗೆ 22 ನಕಲಿ ಖಾತೆ ಆರೋಪ: ಬಿಬಿಎಂಪಿಗೆ ವಿವರಣೆ ಕೇಳಿದ ಹೈಕೋರ್ಟ್ - High Court - HIGH COURT

ಓರ್ವ ಮಹಿಳೆಗೆ 22 ನಕಲಿ ಜಮೀನು ಖಾತೆ ವಿತರಣೆ ಮಾಡಿರುವ ಆರೋಪ ಕುರಿತಂತೆ ವರದಿ ಸಲ್ಲಿಕೆ ಮಾಡುವಂತೆ ಬಿಬಿಎಂಪಿ ಆಯುಕ್ತರಿಗೆ ಹೈಕೋರ್ಟ್‌ ತಿಳಿಸಿದೆ.

high court
ಹೈಕೋರ್ಟ್ (ETV Bharat)

By ETV Bharat Karnataka Team

Published : Jun 20, 2024, 6:49 AM IST

ಬೆಂಗಳೂರು: ರಾಜರಾಜೇಶ್ವರಿ ನಗರದ ಪಟ್ಟಣಗೆರೆಯ ಹೆಮ್ಮಿಗೆಪುರದಲ್ಲಿ ಸರ್ಕಾರದಿಂದ ಪುಟ್ಟಮ್ಮ ಎಂಬುವರಿಗೆ 22 ಖಾತೆ ವಿತರಿಸಲಾಗಿದೆಯೇ ಎಂಬುದರ ಕುರಿತು ವರದಿ ಸಲ್ಲಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

ಸ್ಥಿರಾಸ್ತಿ ಕುರಿತಂತೆ ನಕಲಿ ಖಾತೆ ಸೃಷ್ಟಿಸಿ ವಿತರಿಸಲಾಗಿದೆ ಎಂದು ಆರೋಪಿಸಿ ಸರ್ಕಾರದಿಂದ ಭೂಮಿ ಪಡೆದಿರುವ ನರಸಮ್ಮ ಪರವಾಗಿ ಆರ್‌. ದೀಪಕ್‌ (ಜಿಪಿಎ ಪಡೆದಿರುವ) ಎಂಬುವರು ತಕರಾರು ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್‌ ಪ್ರಸಾದ್‌ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.

ಅಲ್ಲದೆ, ಕೆಲವರಿಗೆ ಸರ್ಕಾರದಿಂದ ಮಂಜೂರು ಮಾಡಲಾಗಿದ್ದ ಜಮೀನು ಕುರಿತಂತೆ ನಕಲಿ ಖಾತೆ ಸೃಷ್ಟಿಸಲಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಹೆಮ್ಮಿಗೆಪುರ ವಾರ್ಡ್‌-198ರಲ್ಲಿ ಸ್ಥಿರಾಸ್ತಿ ಸಂಖ್ಯೆ 23/81/10-23 ರಲ್ಲಿ ಪುಟ್ಟಮ್ಮ ಎಂಬುವರ ಹೆಸರಿಗೆ 22 ಖಾತೆ ವಿತರಿಸಲಾಗಿದೆಯೇ ಎಂಬ ಬಗ್ಗೆ ವರದಿ ಸಲ್ಲಿಸಬೇಕು. ಹಾಗೆಯೇ, ಈ 22 ಖಾತೆಗಳ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು ಎಂದು ಆದೇಶದಲ್ಲಿ ನ್ಯಾಯಪೀಠ ಆಯುಕ್ತರಿಗೆ ನಿರ್ದೇಶಿಸಿದೆ.

ಇದನ್ನೂ ಓದಿ:ಲೈಂಗಿಕ ದೌರ್ಜನ್ಯ ಪ್ರಕರಣ: ಪ್ರಜ್ವಲ್ ರೇವಣ್ಣ ಮತ್ತೆ ಎಸ್‌ಐಟಿ ವಶಕ್ಕೆ - Prajwal Revanna

ಪಟ್ಟಣಗೆರೆ ಗ್ರಾಮದಲ್ಲಿ ಸರ್ವೇ ನಂಬರ್​​ 10ರಲ್ಲಿನ 10 ಎಕರೆ ಜಾಗವನ್ನು ನರಸಮ್ಮ ಅವರ ಪತಿ ಸಿ.ಎಲ್‌. ಮುನಿಯಪ್ಪ ಸೇರಿದಂತೆ ಒಟ್ಟು 5 ಮಂದಿಗೆ 1979ರ ಮೇ 19ರಂದು ಜಿಲ್ಲಾಧಿಕಾರಿ ಮಂಜೂರು ಮಾಡಿದ್ದರು. ಅದರಲ್ಲಿ ಎರಡು ಎಕರೆ ಜಮೀನು ಮುನಿಯಪ್ಪ ಎಂಬುವರಿಗೆ ಮಂಜೂರಾಗಿತ್ತು. 1979ರ ಜುಲೈ 20ರಂದು ಮುನಿಯಪ್ಪ ಹೆಸರಿಗೆ ಸಾಗುವಳಿ ಚೀಟಿ ಸಹ ನೀಡಲಾಗಿದೆ. ಮುನಿಯಪ್ಪ ಮರಣಾನಂತರ ಕಂದಾಯ ದಾಖಲೆಗಳಲ್ಲಿ ಅವರ ಪತ್ನಿ ನರಸಮ್ಮ ಹೆಸರು ಸೇರಿಸಲಾಗಿತ್ತು. ಈ ಭೂಮಿ ಅವರ ಸ್ವಾಧೀನದಲ್ಲಿದೆ ಎಂದು ಅರ್ಜಿಯಲ್ಲಿ ಅರ್ಜಿದಾರರು ತಿಳಿಸಿದ್ದಾರೆ.

ಆದರೆ, ಪಟ್ಟಣಗೆರೆಯ ಸರ್ವೇ ನಂಬರ್‌ 10ಕ್ಕೆ (ಹೆಮ್ಮಿಗೆಪುರ ವಾರ್ಡ್‌ ನಂಬರ್‌ -198 ಸ್ಥಿರಾಸ್ತಿ ಸಂಖ್ಯೆ 23/81/10-23) ಸಂಬಂಧಿಸಿದಂತೆ ಆಸ್ತಿ ಕುರಿತಂತೆ ಲೇಟ್‌ ಮುನಿಯಪ್ಪ ಅವರ ಪತ್ನಿ ಪುಟ್ಟಮ್ಮ ಎಂಬುವರ ಹೆಸರಿಗೆ 22 ನಕಲಿ ಖಾತೆ ಸೃಷ್ಟಿಸಿ ವಿತರಿಸಲಾಗಿದೆ. ಈ ವಿಚಾರವು 2022ರಲ್ಲಿ ತಿಳಿದು ಬಂದಿದೆ. ಆ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದಾಗ ಪುಟ್ಟಮ್ಮ ಅವರ ಹೆಸರಿನಲ್ಲಿ ಯಾವುದೇ ಖಾತೆ ವಿತರಣೆಯಾಗಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ ನಕಲಿ ಖಾತೆ ಸೃಷ್ಟಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಆದೇಶಿಸಬೇಕು ಎಂದು ಕೋರಿ ಅರ್ಜಿದಾರರು ಅರ್ಜಿಯಲ್ಲಿ ಕೋರಿದ್ದಾರೆ.

ಇದನ್ನೂ ಓದಿ:15 ವರ್ಷ ಅರೆಕಾಲಿಕ ಸೇವೆ ಸಲ್ಲಿಸಿದ್ದ ಉಪನ್ಯಾಸಕಿಯನ್ನು ಖಾಯಂಗೊಳಿಸಲು ಹೈಕೋರ್ಟ್ ಆದೇಶ - High Court

ABOUT THE AUTHOR

...view details