ಬೆಂಗಳೂರು:ರಾಜ್ಯ ಒಕ್ಕಲಿಗರ ಸಂಘ ಪದೇ ಪದೆ ಅವಿಶ್ವಾಸ ನಿರ್ಣಯವನ್ನು ಮಂಡಿಸುವುದನ್ನು ತಡೆಯಲು ಕಾರ್ಯಕಾರಿ ಸಮಿತಿ ಆಯ್ಕೆಯಾದ ಬಳಿಕ ಒಂದು ವರ್ಷದ ಕಾಲ ಅವಿಶ್ವಾಸ ನಿರ್ಣಯ ಕೈಗೊಳ್ಳಲು ಅವಕಾಶವಿಲ್ಲದಂತೆ ಬೈಲಾಗೆ ತಿದ್ದುಪಡಿ ತರುವುದು ಉತ್ತಮ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೆ, ಹಾಲಿ ಪದಾಧಿಕಾರಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಾದರೆ ಸಂಘದ ಕಾರ್ಯದರ್ಶಿಗೆ ನೋಟಿಸ್ ನೀಡಿದ ಬಳಿಕ ಆ ಪ್ರಕ್ರಿಯೆಯನ್ನು ಹೊಸದಾಗಿ ಕೈಗೊಳ್ಳಬೇಕು ಎಂದು ಆದೇಶಿಸಿದೆ.
ಸಂಘದಲ್ಲಿನ ಎರಡೂ ಬಣಗಳು ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ಸಿವಿಲ್ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಕೆ.ವಿ.ರೇಣುಕಾಪ್ರಸಾದ್ ಮತ್ತಿತರರು ಸಲ್ಲಿಸಿದ್ದ ಹಲವು ಅರ್ಜಿಗಳನ್ನು ಆಲಿಸಿದ ನ್ಯಾ.ಆರ್.ದೇವದಾಸ್ ಅವರಿದ್ದ ಏಕಸದಸ್ಯಪೀಠ ಮಂಗಳವಾರ ಈ ಆದೇಶ ನೀಡಿದೆ.
ಅಲ್ಲದೆ, ಅರ್ಜಿದಾರರು ಅಥವಾ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಲಿ ಪದಾಧಿಕಾರಿಗಳ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಲು ಸ್ವತಂತ್ರರು. ಆದರೆ ಅವರು ಹಾಗೆ ಮಂಡಿಸುವ ಮುನ್ನ ಮೊದಲು ಸಂಘದ ಕಾರ್ಯದರ್ಶಿಗೆ ನೋಟಿಸ್ ನೀಡಬೇಕು, ಆ ಅವಿಶ್ವಾಸ ನಿರ್ಣಯದ ಪ್ರಸ್ತಾವವನ್ನು ಸರ್ವ ಸದಸ್ಯರ ಸಭೆಯ ಮುಂದಿಟ್ಟು ಸೂಕ್ತ ನಿರ್ಣಯ ಕೈಗೊಳ್ಳಬೇಕು. ಸಭೆಯಲ್ಲಿ ಚರ್ಚೆ ಹಾಗೂ ಮತದಾನದ ಹಕ್ಕು ಸಂಘದ ಸದಸ್ಯರಿಗೆ ಮಾತ್ರ ಲಭ್ಯವಿರುತ್ತದೆ ಎಂದು ನ್ಯಾಯಪೀಠ ಆದೇಶಿಸಿದೆ.