ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಿದ್ಧಪಡಿಸಿರುವ ವರದಿಯನ್ನು ಸ್ವೀಕರಿಸಲಾಗಿದೆಯೇ ಎಂಬ ಕುರಿತ ಸತ್ಯಾಂಶಗಳನ್ನು ಪ್ರಮಾಣ ಪತ್ರದ ಮೂಲಕ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೊರ್ಟ್ ನಿರ್ದೇಶನ ನೀಡಿದೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯದಲ್ಲಿ ಜಾತಿ ಸಮೀಕ್ಷೆ ನಡೆಸಲು 2014ರ ಜನವರಿ 23ರಂದು ಸರ್ಕಾರದ ಆದೇಶ ಪ್ರಶ್ನಿಸಿ ಬೀದರ್‌ನ ಶಿವರಾಜ್ ಕಣಶೆಟ್ಟಿ ಮತ್ತಿತರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲರು, 2015ರ ಮೇ 5ರಂದು ಜಾತಿ ಗಣತಿ ಮುಗಿದಿದೆ ಎಂದು ಅರ್ಜಿದಾರರೇ ಹೇಳಿದ್ದಾರೆ. ಈ ವರದಿಯು ಒಂಭತ್ತು ವರ್ಷಗಳಿಂದ ಹಾಗೇ ಉಳಿದಿದೆ. ಈಗ ಯಾವುದೇ ತುರ್ತು ಇಲ್ಲ. ವರದಿ ಸ್ವೀಕರಿಸಿರುವುದುಕ್ಕೆ ಆಕ್ಷೇಪವಿಲ್ಲ. ಆದರೆ, 1931ರ ಬಳಿಕ ಮೊದಲ ಬಾರಿಗೆ ಜಾತಿ ಸಮೀಕ್ಷೆ ನಡೆಸಲಾಗುತ್ತಿದೆ ಎಂದು 2014ರಲ್ಲಿ ಬಜೆಟ್ ಅಧಿವೇಶನದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನಕ್ಕೆ ತಿಳಿಸಿದ್ದರು. ಆದರೆ, ಜಾತಿ ಸಮೀಕ್ಷೆ ನಡೆಸಲು ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರವಿದೆ. 2015ರಲ್ಲಿ ಸಂಗ್ರಹಿಸಿರುವ ದತ್ತಾಂಶವನ್ನು ಹಿಂದುಳಿದ ವರ್ಗದ ವರದಿಗೆ ಮಾತ್ರ ಬಳಕೆ ಮಾಡಲಾಗುತ್ತದೆ. ಇದರಲ್ಲಿ ಜಾತಿ ಉಲ್ಲೇಖಿಸುವುದಿಲ್ಲ ಎಂದು ಸರ್ಕಾರ ಹೇಳಿದರೆ ವಿವಾದವನ್ನು ಬಗೆಹರಿಸಬಹುದು ಎಂದರು.
ಅಲ್ಲದೆ, ಸಂವಿಧಾನದ 245 ಮತ್ತು 246ರ ಪ್ರಕಾರ ಜಾತಿ ಸಮೀಕ್ಷೆ ನಡೆಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ. ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ. ಅಲ್ಲದೆ, ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಜಾತಿ ವಾರು ಸಮೀಕ್ಷೆ ನಡೆಸುವುದಕ್ಕೆ ಅಧಿಕಾರವೇ ಇಲ್ಲ. ಆದರೂ, ಸರ್ಕಾರ ಸಮೀಕ್ಷೆ ನಡೆಸಿದೆ. ಜತೆಗೆ. ಆ ವರದಿಯನ್ನು ಮುಖ್ಯಮಂತ್ರಿಗಳು ಸ್ವೀಕರಿಸಿದ್ದಾರೆ. ಅಲ್ಲದೆ, ಜಾತಿ ಗಣತಿ ವರದಿ ಸಲ್ಲಿಕೆ ಅಥವಾ ಅದರ ಸ್ವೀಕಾರದ ಸಂದರ್ಭದ ಬಗ್ಗೆ ನಾವು ಆಕ್ಷೇಪಿಸುವುದಿಲ್ಲ. ನಾವು ಸಾಂವಿಧಾನಿಕ ಮತ್ತು ಕಾನೂನಾತ್ಮಕ ವಿಚಾರಕ್ಕಷ್ಟೇ ಸೀಮಿತವಾಗಿದ್ದೇವೆ ಎಂದು ನ್ಯಾಯಪೀಠಕ್ಕೆ ಅರ್ಜಿದಾರರ ಪರ ವಕೀಲರು ತಿಳಿಸಿದರು.