ಬೆಂಗಳೂರು:ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮೋದಿಸುವ ಅಧಿಕಾರ ಮಾತ್ರ ಹೊಂದಿದ್ದಾರೆ, ತನಿಖೆ ನಡೆಸುವ ಅಧಿಕಾರ ಹೊಂದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ನಿರ್ಧಾರ ಕಾನೂನುಬಾಹಿರ ಎಂದು ಅಡ್ವೋಕೇಟ್ ಜನರಲ್ ಶಶಿಕಿರಣ ಶೆಟ್ಟಿ ವಾದ ಮಂಡಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮೂಡಾ)ದಿಂದ ನಿವೇಶನಗಳನ್ನು ಅಕ್ರಮವಾಗಿ ತಮ್ಮ ಪತ್ನಿ ಹೆಸರಿನಲ್ಲಿ ಪಡೆಯಲಾಗಿದೆ ಎಂಬ ಆರೋಪ ಸಂಬಂಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠದ ಮುಂದೆ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು.
ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವುದಕ್ಕೂ ಮುನ್ನ ತನಿಖಾಧಿಕಾರಿಯ ಪ್ರಾಥಮಿಕ ತನಿಖಾ ವರದಿ ಆಧರಿಸಿ ಸಕ್ಷಮ ಪ್ರಾಧಿಕಾರ(ರಾಜ್ಯಪಾಲರು) ನಿರ್ಧರಿಸಬೇಕಿತ್ತು. ಆದರೆ, ಅವರು ತನಿಖಾಧಿಕಾರಿಯ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಭ್ರಷ್ಟಾಚಾರ ನಿಯಂತ್ರಣಾ ಕಾಯಿದೆ ಸೆಕ್ಷನ್ 17ಎ ಅಡಿ ಅನುಮತಿ ನೀಡುವುದಕ್ಕೂ ಮುನ್ನ ತನಿಖಾಧಿಕಾರಿ ಪ್ರಾಥಮಿಕ ತನಿಖೆ ನಡೆಸಬೇಕು ಎಂದು ವಿವರಿಸಿದರು.
ಇದಕ್ಕೆ ಪೀಠ, ಸೆಕ್ಷನ್ 17ಎ ಅಡಿ ಅನುಮತಿಗೂ ಮುನ್ನ ತನಿಖೆ ನಡೆಯಬೇಕು ಎಂದು ನೀವು ಸಲಹೆ ನೀಡುತ್ತಿದ್ದೀರಾ ಎಂದು ಪ್ರಶ್ನಿಸಿತು. ಈ ವೇಳೆ ಅಡ್ವೋಕೇಟ್ ಜನರಲ್, ಸೆಕ್ಷನ್ 17ಎ ಅನುಮತಿಗೂ ಮುನ್ನ ತನಿಖೆ ಅಗತ್ಯ. ದೂರುದಾರರ ಪ್ರಕಾರ 1998ರಲ್ಲಿ ಆಕ್ಷೇಪಾರ್ಹವಾದ 3.16 ಎಕರೆ ಭೂಮಿ ಡಿನೋಟಿಫಿಕೇಶನ್ ಆಗಿದೆ. ಪ್ರಕರಣ ದಾಖಲಿಸುವಾಗ ಅಪಾರ ವಿಳಂಬವಾಗಿದೆ ಎಂದು ತಿಳಿಸಿದರು.
ಖಾಸಗಿ ವ್ಯಕ್ತಿ ಭ್ರಷ್ಟಾಚಾರ ನಿಯಂತ್ರಣಾ ಕಾಯಿದೆಯ ಸೆಕ್ಷನ್ 17ಎ ಅಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಕೋರಿ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ಈ ಕಾಯಿದೆಯನ್ವಯ ಪ್ರಾಥಮಿಕ ತನಿಖೆ ನಡೆಸಬೇಕು ಎಂಬುದಾಗಿ ತಿಳಿಸಲಾಗಿದೆ. ಯಾವುದೇ ತನಿಖೆ ನಡೆದಿಲ್ಲ. ಪ್ರಕರಣದಲ್ಲಿ ಸಾಕಷ್ಟು ವಿಳಂಬವಾಗಿದೆ. 1998ರಲ್ಲಿ ಡಿನೋಟಿಫಿಕೇಷನ್ ಮಾಡಲಾಗಿದೆ. ಬಳಿಕ ನೇರವಾಗಿ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ. ಖಾಸಗಿ ವ್ಯಕ್ತಿ ಅನುಮತಿ ಕೇಳಿದ್ದಾರೆ. ಅಂದರೆ ಅವರು ಪೊಲೀಸ್ ಅಧಿಕಾರಿಗಿಂತ ಉನ್ನತ ಸ್ಥಾನದಲ್ಲಿ ಊಹಿಸಿಕೊಳ್ಳುವುದಕ್ಕೆ ಅವಕಾಶವಿಲ್ಲ. ಪ್ರಕರಣ ಸಂಬಂಧ ಮೊದಲು ಪೊಲೀಸರಿಗೆ ದೂರು ನೀಡಬೇಕಾಗುತ್ತದೆ. ಆರೋಪ ಸಂಬಂಧ ಪ್ರಾಸಿಕ್ಯೂಷನ್‌ಗೆ ಅನುಮತಿ ಪಡೆಯುವ ಕುರಿತ ಅಭಿಪ್ರಾಯವನ್ನು ಪೊಲೀಸ್ ಅಧಿಕಾರಿ ಮಾತ್ರ ಮಾಡಬೇಕಾಗುತ್ತದೆ. ಪ್ರಕರಣ ಸಂಬಂಧ ತನಿಖಾಧಿಕಾರಿಯಿಂದ ಮಾಹಿತಿ ನೀಡುವಂತೆ ಕೇಳುವುದಕ್ಕೆ ಅವಕಾಶವಿತ್ತು. ಅಲ್ಲದೆ, ಸಕ್ಷಮ ಪ್ರಾಧಿಕಾರವಾಗಿರುವ (ರಾಜ್ಯಪಾಲರು) ಪ್ರಾಥಮಿಕ ವಿಚಾರಣೆ ನಡೆಸುವುದಕ್ಕೆ ಅವಕಾಶವಿಲ್ಲ ಎಂದು ವಿವರಿಸಿದರು.