ಕರ್ನಾಟಕ

karnataka

ETV Bharat / state

ಬಿಜೆಪಿಗೆ 'ಪಂಚ'ಜನ್ಯವೋ, ಕಾಂಗ್ರೆಸ್​ ತೆಕ್ಕೆಗೋ ಬೆಂಗಳೂರು ಉತ್ತರ ಕ್ಷೇತ್ರ?: ಈ ಕಣದಲ್ಲಿ ಒಕ್ಕಲಿಗರೇ ನಿರ್ಣಾಯಕರು! - Bengaluru North

ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್​ ಮತ್ತು ಬಿಜೆಪಿ-ಜೆಡಿಎಸ್​ ಮೈತ್ರಿಕೂಟದ ಅಭ್ಯರ್ಥಿಗಳು ಅಂತಿಮವಾಗಿದ್ದು, ಚುನಾವಣಾ ಅಖಾಡ ರಂಗೇರುತ್ತಿದೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಇತಿಹಾಸ ಇಲ್ಲಿದೆ.

here-is-complete-details-about-bengaluru-north-lok-sabha-constituency
ಬಿಜೆಪಿಗೆ 'ಪಂಚ'ಜನ್ಯವೋ, ಕಾಂಗ್ರೆಸ್​ ತೆಕ್ಕೆಗೋ ಬೆಂಗಳೂರು ಉತ್ತರ ಕ್ಷೇತ್ರ?

By ETV Bharat Karnataka Team

Published : Apr 3, 2024, 9:44 PM IST

ಬೆಂಗಳೂರು: ರಾಜ್ಯದಲ್ಲಿ ರಣಬಿಸಿಲಿನೊಂದಿಗೆ ಲೋಕಸಭೆ ಚುನಾವಣಾ ಕಾವೂ ಜೋರಾಗುತ್ತಿದೆ. 28 ಲೋಕಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ನಗರದ ಮೂರು ಕ್ಷೇತ್ರಗಳು ಪ್ರಮುಖವಾಗಿದ್ದು, ಅದರಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವೂ ಒಂದು. ವ್ಯಾಪ್ತಿ ಮತ್ತು ಅತೀ ಹೆಚ್ಚು ಮತದಾರರನ್ನು ಹೊಂದಿರುವ ಹೆಗ್ಗಳಿಕೆಯೂ ಈ ಕ್ಷೇತ್ರದ್ದು.

ಕಾಂಗ್ರೆಸ್​ ಅಭ್ಯರ್ಥಿ ಪ್ರೊ.ರಾಜೀವ್ ಗೌಡ ಮತ್ತು ಬಿಜೆಪಿಯ ಅಭ್ಯರ್ಥಿ ಶೋಭಾ ಕರಂದಾಜ್ಲೆ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಕೆ.ಆರ್.ಪುರ, ಬ್ಯಾಟರಾಯನಪುರ, ಹೆಬ್ಬಾಳ, ಯಶವಂತಪುರ, ಮಹಾಲಕ್ಷ್ಮಿಲೇಔಟ್, ದಾಸರಹಳ್ಳಿ, ಮಲ್ಲೇಶ್ವರ ಹಾಗೂ ಪುಲಕೇಶಿನಗರ ಕ್ಷೇತ್ರಗಳಿದ್ದು, ಈ ಪೈಕಿ ಐದರಲ್ಲಿ ಬಿಜೆಪಿ ಶಾಸಕರಿದ್ದರೆ, ಮೂರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಬಿಜೆಪಿಯಿಂದ ಆಯ್ಕೆಯಾದರೂ, ಪಕ್ಷದ ಅವರ ಬೆಂಬಲ ನಿರೀಕ್ಷಿಸುವಂತಿಲ್ಲ.

ಕಳೆದ ಎರಡು ದಶಕಗಳಿಂದ ಕ್ಷೇತ್ರದ ಮೇಲೆ ಬಿಜೆಪಿ ಹಿಡಿತ ಸಾಧಿಸಿದೆ. ಈ ಕ್ಷೇತ್ರದಲ್ಲಿ ಹೊರಗಿನ ಅಭ್ಯರ್ಥಿಗಳೇ ಗೆಲುವು ಸಾಧಿಸಿರುವುದು ವಿಶೇಷ. ನಗರದ ಜತೆಗೆ ಗ್ರಾಮೀಣ ಭಾಗವೂ ಸೇರಿರುವ ಉತ್ತರ ಕ್ಷೇತ್ರ ವೈಶಿಷ್ಟ್ಯತೆಯಿಂದ ಕೂಡಿದೆ. ಇತರ ಎರಡು ಲೋಕಸಭಾ ಕ್ಷೇತ್ರಗಳಿಗೆ ಹೋಲಿಸಿದರೆ, ಇಲ್ಲಿ ಅಭಿವೃದ್ದಿ ಹಿಂದೆಬಿದ್ದಿದೆ. ಗಾರ್ಮೆಂಟ್ಸ್‌, ಗುಡಿ ಕೈಗಾರಿಕೆ, ಅರೆ ಕೈಗಾರಿಕೆ ಪ್ರದೇಶವಾಗಿರುವ ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರು ಕಾರ್ಮಿಕರೇ ಆಗಿದ್ದಾರೆ.

ಬೆಂಗಳೂರು ಉತ್ತರ ಕ್ಷೇತ್ರದ ಮತದಾರರ ಪ್ರಮಾಣ

ಅಪಾರ್ಟ್​ಮೆಂಟ್ ಹಾಗೂ ವಸತಿ ಸೌಲಭ್ಯಗಳಿಗೆ ಹೆಚ್ಚಿನ ಭೂ ಭಾಗ ಬಳಕೆಯಾಗುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ ಬಂದ ಜನರು ಬದುಕು ಕಟ್ಟಿಕೊಂಡಿರುವ ಪ್ರದೇಶವೇ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಚಿತ್ರಣವಾಗಿದೆ. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಕಳೆದ ಎರಡು ಸಲ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸಿರುವ ಸದಾನಂದ ಗೌಡರು ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ. ಆದರೆ, ಈ ಬಾರಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಅವರ ಬದಲಿಗೆ ಹಾಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಣದಲ್ಲಿದ್ಧಾರೆ. ಕಾಂಗ್ರೆಸ್​ನಿಂದ ಪ್ರೊ.ರಾಜೀವ್ ಗೌಡ ಸ್ಪರ್ಧಿಸಲಿದ್ದಾರೆ. ಇಬ್ಬರೂ ಸಹ ಒಕ್ಕಲಿಗ ಸಮುದಾಯದವರು.

ಪುರುಷ, ಮಹಿಳೆಯರ ಮತ ಪ್ರಮಾಣ

ಉತ್ತರ ಕ್ಷೇತ್ರದ ಇತಿಹಾಸ: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಸ್ವಾತಂತ್ರ್ಯ ಬಂದಾಗಿನಿಂದಲೂ ಅಸ್ತಿತ್ವದಲ್ಲಿದೆ. 17 ಲೋಕಸಭಾ ಚುನಾವಣೆಗಳನ್ನು ಕಂಡಿದೆ. ಈ ಪೈಕಿ 12 ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರೆ, ಒಂದು ಬಾರಿ ಜನತಾ ದಳ ಗೆದ್ದಿದೆ. ಸತತವಾಗಿ ನಾಲ್ಕು ಬಾರಿ ಬಿಜೆಪಿ ಗೆದ್ದು ಹಿಡಿತ ಸಾಧಿಸಿದೆ.

1951ರಲ್ಲಿ ಮೊದಲ ಬಾರಿಗೆ ಕೇಶವ ಐಯ್ಯಂಗಾರ್ ಕಾಂಗ್ರೆಸ್ ಪಕ್ಷದಿಂದ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದರು. ನಂತರ ವಿಧಾನಸೌಧ ನಿರ್ಮಾತೃ ದಿ.ಕೆಂಗಲ್ ಹನುಮಂತಯ್ಯ ಪ್ರತಿನಿಧಿಸಿದ್ದರು. ಇದೇ ಕ್ಷೇತ್ರದಲ್ಲಿ ಸಿ.ಕೆ.ಜಾಫರ್ ಶರೀಫ್ ಏಳು ಬಾರಿ ಗೆದ್ದ ಇತಿಹಾಸ ಹೊಂದಿದ್ದಾರೆ. 1996ರಲ್ಲಿ ಜನತಾ ದಳದ ಸಿ.ನಾರಾಯಣ ಸ್ವಾಮಿ ಎದುರು ಜಾಫರ್ ಷರೀಫ್ ಸೋಲು ಕಂಡಿದ್ದರೂ, ಬಳಿಕ ಮತ್ತೆ 1998 ಹಾಗೂ 1999ರಲ್ಲಿ ಮರು ಆಯ್ಕೆಯಾಗಿದ್ದರು.

ಪುರುಷ, ಮಹಿಳಾ ಅಭ್ಯರ್ಥಿಗಳ ಸಂಖ್ಯೆ

ಇದರ ನಂತರ ಕ್ಷೇತ್ರದಲ್ಲಿ ಆರಂಭವಾಗಿದ್ದು ಬಿಜೆಪಿಯ ಪರ್ವ. 2004ರಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಎಚ್.ಟಿ ಸಾಂಗ್ಲಿಯಾನ, 2009ರಲ್ಲಿ ಡಿ.ಬಿ ಚಂದ್ರೇಗೌಡ, ನಂತರ 2014, 2019ರಲ್ಲಿ ಎರಡು ಬಾರಿ ಸದಾನಂದಗೌಡ ಜಯ ದಾಖಸಿದ್ದರು. 2019ರಲ್ಲಿ ಸಚಿವರಾಗಿ ಸಾಕಷ್ಟು ಹೆಸರು ಮಾಡಿದ್ದ ಕೃಷ್ಣಭೈರೇಗೌಡ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಆದರೆ, ಒಂದೂವರೆ ಲಕ್ಷಕ್ಕೂ ಅಧಿಕ ಮತಗಳಿಂದ ಸದಾನಂದ ಗೌಡರು ಎರಡನೇ ಬಾರಿ ಅಭೂತಪೂರ್ವ ಗೆಲುವನ್ನು ಸಾಧಿಸಿ ಕೇಂದ್ರದಲ್ಲಿ ಸಚಿವರೂ ಆಗಿದ್ದರು.

ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಹಣಾಹಣಿ:ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗರ ಸಮುದಾಯದ ಮತದಾರರೇ ಹೆಚ್ಚಿದ್ದಾರೆ. ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳು ಜಾತಿ ಲೆಕ್ಕಾಚಾರ ಹಾಕಿ ಒಕ್ಕಲಿಗ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುತ್ತಾ ಬಂದಿವೆ. ಈ ಸಲವೂ ಎರಡೂ ಪಕ್ಷಗಳು ಅದನ್ನೇ ಮಾಡಿವೆ. ಸಚಿವ ಕೃಷ್ಣ ಭೈರೇಗೌಡ ಅವರನ್ನು ಮತ್ತೆ ಕಣಕ್ಕೆ ಇಳಿಸುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮಾಡಿದ್ದರು. ಅದು ಸಾಧ್ಯವಾಗದೇ ಇದ್ದಾಗ, ಗೋವಿಂದರಾಜ ನಗರದ ಶಾಸಕ ಪ್ರಿಯಕೃಷ್ಣ ಅವರನ್ನೂ ಕಣಕ್ಕಿಳಿಸಲು ಯತ್ನ ನಡೆಸಲಾಗಿತ್ತು. ಅವರೂ ಒಪ್ಪದ ಹಿನ್ನೆಲೆಯಲ್ಲಿ ಪ್ರೊ.ರಾಜೀವ್ ಗೌಡರಿಗೆ ಮಣೆಹಾಕಲಾಗಿದೆ ಎಂದು ಹೇಳಲಾಗುತ್ತಿದೆ.

ಗೆದ್ದ ಮತ್ತು ಸೋತ ಅಭ್ಯರ್ಥಿಗಳ ವಿವರ

ಮತ್ತೊಂದೆಡೆ, ಬಿಜೆಪಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆಯಾಗಿದ್ದ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಿದೆ. ಶೋಭಾ, ರಾಜೀವ್ ಗೌಡ ಇಬ್ಬರೂ ಸಹ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆ. ಈ ಬಾರಿ ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಸತತವಾಗಿ ಗೆಲುವು ಸಾಧಿಸುತ್ತಾ ಬಂದಿರುವ ಬಿಜೆಪಿಗೆ ಮತ್ತಷ್ಟು ಹೆಚ್ಚಿನ ಮತ ಬೀಳುವ ನಿರೀಕ್ಷೆ ಇದೆ.

ಕ್ಷೇತ್ರದ ಲೆಕ್ಕಾಚಾರ:ಕ್ಷೇತ್ರದ ಇತಿಹಾಸವನ್ನೊಮ್ಮೆ ಅವಲೋಕಿಸಿದರೆ, ಬಹುತೇಕ ಹೊರಗಿನವರಿಗೇ ಇಲ್ಲಿನ ಮತದಾರ ಮಣೆ ಹಾಕಿದ್ದಾನೆ. ಈಗಿನ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಕೂಡ ದಕ್ಷಿಣ ಕನ್ನಡ ಮೂಲದವರು. ಆದರೆ, ಈ ಕ್ಷೇತ್ರದ ವ್ಯಾಪ್ತಿಯ ಯಶವಂತಪುರ ವಿಧಾನಸಭೆಯಲ್ಲಿ 2008ರ ಚುನಾವಣೆಯಲ್ಲಿ ಅವರು ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ ಪಿಎಚ್‌ಡಿ ಪದವೀಧರರು. ಇವರು ಮೂಲತಃ ಕೋಲಾರ ಜಿಲ್ಲೆ ವೇಮಗಲ್​ನವರು. ಆದರೆ, ಬೆಂಗಳೂರಿನಲ್ಲೇ ಬೆಳೆದು ವಿದ್ಯಾಭ್ಯಾಸ ಪೂರೈಸಿದ್ದಾರೆ. ಹೀಗಾಗಿ ಈ ಬಾರಿ ಸಹ ಕ್ಷೇತ್ರದ ಹೊರಗಿನವರನ್ನೇ ಆಯ್ಕೆ ಮಾಡಬೇಕಾದ ಸನ್ನಿವೇಶ ಇಲ್ಲಿನ ಮತದಾರರು ಮುಂದೆ ನಿರ್ಮಾಣವಾಗಿದೆ.

ಕ್ಷೇತ್ರದ ಜಾತಿ ಲೆಕ್ಕಾಚಾರ ನೋಡುವುದಾದರೆ, ನಿರ್ಣಾಯಕ ಪಾತ್ರವಹಿಸುವುದು ಒಕ್ಕಲಿಗ ಸಮುದಾಯ. ಅಂದಾಜು 13.5 ಲಕ್ಷ ಒಕ್ಕಲಿಗರಿದ್ದಾರೆ. ಈ ಕಾರಣಕ್ಕಾಗಿಯೇ ಇಲ್ಲಿ ಎರಡೂ ಪಕ್ಷಗಳು ಒಕ್ಕಲಿಗರನ್ನೇ ಅಭ್ಯರ್ಥಿಯನ್ನಾಗಿ ಮಾಡಿದೆ. ಎಸ್‌ಸಿ/ಎಸ್‌ಟಿ - 6.5 ಲಕ್ಷ, ಮುಸ್ಲಿಮರು - 7 ಲಕ್ಷ, ಕುರುಬ 5.5 ಲಕ್ಷ, ಲಿಂಗಾಯತ-5 ಲಕ್ಷ ಹಾಗೂ ಇತರ ಸಮುದಾಯದವರು ಅಂದಾಜು 2ಲಕ್ಷ ಮತದಾರರಿದ್ದಾರೆ.

ಕ್ಷೇತ್ರದ ಮತದಾರರ ಮಾಹಿತಿ:ಅತೀಹೆಚ್ಚು ಮತದಾರರನ್ನು ಹೊಂದಿರುವ ಈ ಲೋಕಸಭಾ ಕ್ಷೇತ್ರದಲ್ಲಿದ್ದಾರೆ. ಒಟ್ಟು 31,74,098 ಮತದಾರರಿದ್ದು, ಅದರಲ್ಲಿ 16,29,089 ಪುರುಷರು, 15,44,415 ಮಹಿಳೆಯರು ಹಾಗೂ 594 ಜನ ಇತರರಿದ್ದಾರೆ. 85ಕ್ಕೂ ಹೆಚ್ಚಿನ ವಯಸ್ಸಿನ ಮತದಾರರ ಸಂಖ್ಯೆಯೂ ಅಧಿಕವಿದೆ. 18,023 ಪುರುಷರು, 15,152 ಮಹಿಳೆಯರು ಸೇರಿ ಒಟ್ಟು 33,175 ಮಂದಿ ಹಿರಿಯ ಮತದಾರರಿದ್ದಾರೆ.

ದಿವ್ಯಾಂಗ ಮತದಾರರು: ಪುರುಷರು 5,206, ಮಹಿಳೆಯರು 4,612. ತೃತೀಯ ಲಿಂಗಿ 12 = ಒಟ್ಟು 9,830.

ಎನ್​ಆರ್​ಐ ಮತದಾರರು: ಪುರುಷರು 438, ಮಹಿಳೆಯರು 186, ತೃತೀಯ ಲಿಂಗ 1 = ಒಟ್ಟು 625.

ಯುವ ಮತದಾರರು: ಪುರುಷರು 23,381, ಮಹಿಳೆಯರು 21,080, ತೃತೀಯ ಲಿಂಗ 3 = ಒಟ್ಟು 44,464.

ಇದನ್ನೂ ಓದಿ:ಶೋಭಾ ಕರಂದ್ಲಾಜೆ ₹13.88 ಕೋಟಿ ಆಸ್ತಿ ಒಡತಿ: ಇವರ ಬಳಿ ಇದೆ 1 ಕೆಜಿ ಚಿನ್ನದ ಬಿಸ್ಕೆಟ್!

ABOUT THE AUTHOR

...view details