ಬೆಂಗಳೂರು: ನಗರದ ಹಲವೆಡೆ ಇಂದು ಸಂಜೆ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಾಗಿರುವ ವರದಿಯಾಗಿದೆ. ಮಧ್ಯಾಹ್ನದ ವೇಳೆಗೆ ಮೋಡ ಮುಸುಕಿದ ವಾತಾವರಣ ಕಂಡುಬಂದಿತ್ತು. ಅದರ ಪರಿಣಾಮ ಸಂಜೆ ವೇಳೆಗೆ ಗುಡುಗು ಮತ್ತು ಮಿಂಚು ಸಹಿತ ಭಾರೀ ಮಳೆ ಸುರಿಯಿತು.
ಮಾದನಾಯಕನಹಳ್ಳಿ, ಮಾಕಳಿ, ಮಾಚೋಹಳ್ಳಿ, ಟೌನ್ ಹಾಲ್, ಕೆ.ಆರ್.ಮಾರ್ಕೆಟ್, ಲಾಲ್ ಬಾಗ್, ಚಾಲುಕ್ಯ ಸರ್ಕಲ್, ವಿಧಾನಸೌಧ, ಆರ್‌ಆರ್ ನಗರ, ಉತ್ತರಹಳ್ಳಿ ಸುತ್ತಮುತ್ತ ಗಾಳಿ ಸಹಿತ ಮಳೆ ಆಗಿದ್ದು, ವಾಹನ ಸವಾರರು ಪರದಾಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಸುರಿದ ಜೋರು ಮಳೆಗೆ ಬೆಂಗಳೂರು ತತ್ತರಿಸಿತ್ತು. ಧಾರಾಕಾರ ಮಳೆಗೆ ಅವಾಂತರಗಳು ಸೃಷ್ಟಿಯಾಗಿದ್ದವು. ಇದೀಗ ಮತ್ತೆ ಅದೇ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ.
ದೂರುಗಳಿದ್ದರೆ ಹೆಲ್ಪ್ ಲೈನ್ಗೆ ಕರೆ ಮಾಡಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ 3 ದಿನದ ಹಿಂದೆ ಬಿದ್ದ ಜೋರು ಮಳೆಯಿಂದಾಗಿ ಸಾಕಷ್ಟು ಮರ, ರೆಂಬೆ, ಕೊಂಬೆಗಳು ಬಿದ್ದಿವೆ. ಪಾಲಿಕೆ ಅರಣ್ಯ ವಿಭಾಗದ ತಂಡಗಳು ಧರೆಗುರುಳಿರುವ ಮರಗಳ ತೆರವು ಮಾಡುತ್ತಿದೆ. ಈ ಸಂಬಂಧ ದೂರುಗಳಿದ್ದರೆ ಪಾಲಿಕೆಯ ಹೆಲ್ಪ್ ಲೈನ್ ಸಂಖ್ಯೆ 1533ಕ್ಕೆ ಕರೆ ಮಾಡುವಂತೆ ಮನವಿ ಮಾಡಲಾಗಿದೆ.
ಅರಣ್ಯ ವಿಭಾಗದ ಮರ ತೆರವು ತಂಡಗಳ ಜೊತೆಗೆ ವಲಯವಾರು ಹೆಚ್ಚುವರಿ ಮರ ತೆರವು ತಂಡ, ವಾಹನಗಳನ್ನು ನಿಯೋಜಿಸಿಕೊಂಡು ಕಾರ್ಯಾರಂಭಿಸಿದೆ. ಬೃಹತ್ ಮರಗಳು ಧರೆಗುರುಳಿರುವ ಕಡೆ ಮರ ಕಟಾವು ಯಂತ್ರದ ಮೂಲಕ ಕತ್ತರಿಸಿ ತೆರವು ಮಾಡಲಾಗುತ್ತದೆ. ರೆಂಬೆ, ಕೊಂಬೆಗಳು ರಸ್ತೆ ಬದಿ, ಪಾದವಾರಿ ಮಾರ್ಗದಲ್ಲಿದ್ದರೆ ಪಾಲಿಕೆ ಉಚಿತ ಸಹಾಯವಾಣಿ ಸಂಖ್ಯೆಗೆ ನಾಗರಿಕರು ಕರೆ ಮಾಡಿ ದೂರು ನೀಡಬಹುದು. ದೂರು ನೀಡಿದ ಕೂಡಲೇ ಅರಣ್ಯ ವಿಭಾಗದ ತಂಡ ಅವುಗಳ ತೆರವುಗೊಳಿಸಲಿದೆ.
ರಾಜಧಾನಿಯಲ್ಲಿ ಧಾರಾಕಾರ ಮಳೆ (ETV Bharat) ಮಳೆಯಾಗುವ ವೇಳೆ ಪಾಲಿಕೆಯ ಮರ ತೆರವು ತಂಡ ಸದಾ ಸನ್ನದ್ಧವಾಗಿದ್ದು, ಮರ ಬಿದ್ದ ದೂರುಗಳು ಬಂದ ಕೂಡಲೇ ತೆರವುಗೊಳಿಸುವ ಕೆಲಸ ಮಾಡುತ್ತಿದೆ. ಪಾಲಿಕೆಯು ಸದಾ ನಾಗರಿಕರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸುವ ಕೆಲಸ ಮಾಡುತ್ತಿದೆ. ಯಾವುದೇ ಸಮಸ್ಯೆ ಇದ್ದಲ್ಲಿ ಕರೆ ಮಾಡಿ ದೂರು ದಾಖಲಿಸಬಹುದು ಎಂದು ತಿಳಿಸಿದೆ.
ಮುಂದಿನ 3 ಗಂಟೆಯಲ್ಲಿ ಮತ್ತೆ ಮಳೆ:ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಧಾರವಾಡ, ಬಾಗಲಕೋಟೆ, ಬೆಳಗಾವಿ, ಗದಗ, ಬೀದರ್, ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ತುಮಕೂರು, ಮೈಸೂರು, ರಾಮನಗರ, ಮಂಡ್ಯ, ಶಿವಮೊಗ್ಗ ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಯಲ್ಲಿ 30 ರಿಂದ 40 ಕಿ.ಮೀ. ವೇಗದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ಹಲವೆಡೆ ಮಳೆ: ಕರಾವಳಿಯ ಉತ್ತರ ಕನ್ನಡದಲ್ಲಿಯೂ ಇಂದು ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಿದೆ. ಅಲ್ಲದೇ ಬಾಗಲಕೋಟೆ, ಗದಗ, ಕೊಪ್ಪಳ, ರಾಯಚೂರು, ವಿಜಯಪುರ, ಬಳ್ಳಾಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಭಾಗರದಲ್ಲಿಯೂ ಗುಡುಗು ಸಹಿತ ಉತ್ತಮ ಮಳೆ ಸುರಿದಿದೆ. ಸದ್ಯ ಗಾಳಿಯ ವೇಗ 30-40 ಕಿಮೀ ಅಷ್ಟು ಇದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಹವಾಮಾನ ಮುನ್ಸೂಚನೆ:ನಾಳೆ ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರಗಿ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಾಪುರ, ಹಾಸನ, ಕೊಡಗು, ಕೋಲಾರ, ಮಂಡ್ದ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳ ಹೆಚ್ಚಿನ ಸ್ಥಳಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂಗಾರಿಗೆ ಅನುಕೂಲಕರ ವಾತಾವರಣ:ನೈರುತ್ಯ ಮಾನ್ಸೂನ್ ದಕ್ಷಿಣ ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ, ತೆಲಂಗಾಣ ಮತ್ತು ಕರಾವಳಿ ಆಂಧ್ರಪ್ರದೇಶ, ದಕ್ಷಿಣ ಛತ್ತೀಸ್‌ಗಢ ಮತ್ತು ದಕ್ಷಿಣ ಒಡಿಶಾದಲ್ಲಿ ಸಕ್ರಿಯವಾಗಿದೆ. ಕೆಲವು ಭಾಗಗಳಿಗೆ ನೈರುತ್ಯ ಮಾನ್ಸೂನ್ ಮತ್ತಷ್ಟು ಮುನ್ನಡೆಯಲು ಅನುಕೂಲಕರ ಪರಿಸ್ಥಿತಿ ಇದೆ. ಮುಂದಿನ ದಿನಗಳಲ್ಲಿ ಪಶ್ಚಿಮ, ಕೇಂದ್ರ ಮತ್ತು ವಾಯುವ್ಯ ಬಂಗಾಳ ಕೊಲ್ಲಿಯನ್ನು ಕೂಡಾ ಆವರಿಸಲಿದೆ. ಸೈಕ್ಲೋನಿಕ್ ಪರಿಚಲನೆಯು ಕರಾವಳಿ ಮತ್ತು ನೆರೆಹೊರೆಯಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 4.5 ಕಿಮೀ ಮತ್ತು 5.8 ಕಿಮೀ ನಡುವೆ ಇದೆ ಎಂದು ಇಲಾಖೆ ತಿಳಿಸಿದೆ.
ಇದನ್ನೂ ಓದಿ:ಮುಂಗಾರು ಅಬ್ಬರ: ರಾಜ್ಯದ 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ - Yellow Alert