ಹಾವೇರಿ: ಧಾರಾಕಾರ ಮಳೆಗೆ ಬುಧವಾರ ಕೊಚ್ಚಿ ಹೋಗಿದ್ದ ಆಟೋ ರಿಕ್ಷಾವನ್ನು ಚರಂಡಿಯಿಂದ ನಗರಸಭೆ ಸಿಬ್ಬಂದಿ ಜೆಸಿಬಿ ಮೂಲಕ ಇಂದು ಹೊರತೆಗೆದರು. ಸಾಲ ಮಾಡಿ ಆಟೋ ಖರೀದಿಸಿದ್ದ ಚಾಲಕ ನಾಗರಾಜ ನಿಟ್ಟುಸಿರುಬಿಟ್ಟರು.
ನಗರದ ನಾಗೇಂದ್ರನಮಟ್ಟಿ ರೈಲು ಕೇಳಸೇತುವೆ ಸಮೀಪ ಬುಧವಾರ ಆಟೋ ಕೊಚ್ಚಿ ಹೋಗಿತ್ತು. ನಗರಸಭೆ ಸಿಬ್ಬಂದಿ ಕಾರ್ಯಾಚರಣೆ ಮಾಡಿದರೂ ಸಿಕ್ಕಿರಲಿಲ್ಲ. 15 ಗಂಟೆಗಳ ಆಟೋ ಮೇಲ್ಭಾಗ ಕಾಣಿಸಿದ್ದರಿಂದ ಹೊರತೆಗೆಯಲು ಸಾಧ್ಯವಾಗಿದೆ. ಆಟೋ ಹೊರತೆಗೆಯುವಂತೆ ಚಾಲಕ ನರಸಭೆಗೆ ಒತ್ತಾಯಿಸಿದ್ದರು. ನಗರಸಭೆ ಸಿಬ್ಬಂದಿ ಆಟೋ ಹೊರತೆಗೆಯುತ್ತಿದ್ದಂತೆ ನಾಗರಾಜ ಆಟೋದಲ್ಲಿ ತುಂಬಿದ್ದ ಕಸಕಡ್ಡಿ ಕೆಸರು ಹೊರತೆಗೆದು ಗ್ಯಾರೇಜ್‌ಗೆ ತೆಗೆದುಕೊಂಡು ಹೋದರು.
ಕೊಚ್ಚಿಹೋಗಿದ್ದ ಆಟೋ ಹೊರತೆಗೆದ ನಗರಸಭೆ ಸಿಬ್ಬಂದಿ (ETV Bharat) "ಬ್ಯಾಂಕ್‌ನಲ್ಲಿ ಲೋನ್ ಮಾಡಿ ಆಟೋ ಖರೀದಿಸಿ ಜೀವನ ಸಾಗಿಸುತ್ತಿದ್ದೇನೆ. ಬುಧವಾರ ರಾತ್ರಿ ಕತ್ತಲಲ್ಲಿ ಈ ರೀತಿ ಅವಘಡವಾಗಿದೆ. ನೀರಿನಿಂದ ಆದಷ್ಟು ಬೇಗ ಹೊರಗೆ ತೆಗೆದುಕೊಟ್ಟರೆ ದುರಸ್ತಿಪಡಿಸಿಕೊಂಡು ಚಾಲನೆ ಮಾಡುತ್ತೇನೆ" ಎಂದು ಆಟೋ ಮಾಲೀಕ ನಾಗರಾಜ್ ಕೇಳಿಕೊಂಡಿದ್ದರು.
ರಾಣೇಬೆನ್ನೂರಲ್ಲಿ ಭಾರಿ ಮಳೆ:ಹಾವೇರಿ ಜಿಲ್ಲೆಯ ವಿವಿಧೆಡೆ ಇಂದೂ ಕೂಡಾ ಮಳೆರಾಯನ ಆರ್ಭಟ ಜೋರಾಗಿತ್ತು. ರಾಣೇಬೆನ್ನೂರು ನಗರದಲ್ಲಿ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿದಿದೆ. ಚರಂಡಿ ನೀರು ತುಂಬಿ ರಸ್ತೆಯ ಮೇಲೆ ಹರಿದು ವಾಹನ ಸವಾರರು ಮತ್ತು ಪಾದಚಾರಿಗಳು ಸಂಚರಿಸಲು ಪರದಾಡಿದರು.
ದಸರಾ, ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಹೂವು ಹಣ್ಣು ಖರೀದಿಗೆ ಜನರು ಬಂದಿದ್ದು, ಕೆರೆಯಂತಾದ ರಸ್ತೆಗಳಲ್ಲಿ ಸಂಚರಿಸಲು ಹರಸಾಹಸಪಟ್ಟರು. ತಗ್ಗು ಪ್ರದೇಶಗಳಿಗೆ ಮಳೆನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು. ಇನ್ನೊಂದೆಡೆ ಕಟಾವಿಗೆ ಬಂದ ಮೆಕ್ಕೆಜೋಳ, ಹತ್ತಿ ಸೇರಿದಂತೆ ವಿವಿಧ ಬೆಳೆಗಳು ಹಾಳಾಗುವ ಆತಂಕದಲ್ಲಿ ರೈತರಿದ್ದಾರೆ.
ರಾಣೇಬೆನ್ನೂರಲ್ಲಿ ಧಾರಾಕಾರ ಮಳೆ (ETV Bharat) ಹಿಂಗಾರು ಮಳೆ ಚುರುಕು: ರಾಜ್ಯದಲ್ಲಿ ಹಿಂಗಾರು ಮಳೆ ಅಬ್ಬರ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ತುಮಕೂರು ಜಿಲ್ಲೆಗಳಿಗೆ ಮುಂದಿನ 24 ಗಂಟೆ ಯೆಲ್ಲೋ ಅಲರ್ಟ್ ಘೋಷಿಸಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: ಹಿಂಗಾರು ಮತ್ತಷ್ಟು ಚುರುಕು: ಮುಂದಿನ 24 ಗಂಟೆ ಈ 10 ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ