ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ಇಂದೂ ಕೂಡ ರೆಡ್ ಅಲರ್ಟ್ ಎಚ್ಚರಿಕೆಯನ್ನು ಹವಮಾನ ಇಲಾಖೆ ನೀಡಿದೆ. ಈ ಹಿನ್ನೆಲೆಯಲ್ಲಿ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಮಂಗಳೂರಿನಲ್ಲಿ ಭಾರೀ ಮಳೆ (ETV Bharat) ಕಳೆದ ಮೂರು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ನದಿಗಳು ತುಂಬಿವೆ. ಹಲವೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಇನ್ನು ನದಿ ತೀರ ಪ್ರದೇಶಗಳಲ್ಲಿ ನೆರೆ ಭೀತಿ ಕಾಣಿಸಿಕೊಂಡಿದೆ. ಇಂದು ಬಂಟ್ವಾಳದಲ್ಲಿ ನೇತ್ರಾವತಿ ನದಿ 5.9 ಮೀಟರ್ ಎತ್ತರದಲ್ಲಿ ಹರಿಯುತ್ತಿದೆ. ಹಲವೆಡೆ ಆಸ್ತಿ ಹಾನಿಯಾಗಿದೆ. ನಿನ್ನೆ ಬೆಳಗ್ಗೆ ಉಳ್ಳಾಲದಲ್ಲಿ ಮನೆ ಕುಸಿದು ನಾಲ್ವರು ಸಾವನ್ನಪ್ಪಿದ್ದಾರೆ.
ಮಂಗಳೂರಿನಲ್ಲಿ ಭಾರೀ ಮಳೆ (ETV Bharat) ಬಂಟ್ವಾಳ ತಾಲೂಕಿನ ಹಲವೆಡೆ ಆಸ್ತಿ ಹಾನಿ:ಬಂಟ್ವಾಳ ತಾಲೂಕಿನ ವಿವಿಧೆಡೆ ಮನೆ, ಕೃಷಿ ಹಾಗೂ ಗುಡ್ಡ ಜರಿತದಿಂದಾಗಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ. ಕೆದಿಲ ಗ್ರಾಮದ ಗಾಂಧಿ ನಗರ ನಿವಾಸಿ ಪೂವಕ್ಕ ಅವರ ವಾಸ್ತವ್ಯದ ಮನೆ ಮೇಲೆ ಮರ ಬಿದ್ದು ಹಂಚುಗಳ ಜೊತೆ ಸಿಮೆಂಟ್ ಸೀಟುಗಳು ಜಖಂಗೊಂಡಿದೆ. ನೆಟ್ಲ ನಿಟಿಲೇಶ್ವರ ದೇವಾಲಯದ ಬಳಿಯ ಮನೆಯ ಕಂಪೌಂಡ್ಗೆ ಮರಬಿದ್ದು ಹಾನಿಯಾಗಿದೆ.
ಮಂಗಳೂರಿನಲ್ಲಿ ಭಾರೀ ಮಳೆ (ETV Bharat) ಗೋಳ್ತಮಜಲು ಗ್ರಾಮದ ನೆಟ್ಲ ಧನಂಜಯ ಗಟ್ಟಿಯವರ ವಾಸ್ತವ್ಯದ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದ್ದಲ್ಲದೇ ಮನೆಯ ಕಂಪೌಂಡ್ಗೂ ಹಾನಿಯಾಗಿದೆ. ನರಿಕೊಂಬು ಗ್ರಾಮದ ಮಾಣಿಮಜಲು ಎಂಬಲ್ಲಿ ರಾಮಚಂದ್ರ ಗೌಡ ಎಂಬವರ ಮನೆಯ ಸಮೀಪದ ಗುಡ್ಡದ ಮಣ್ಣು ಜರಿದು ಶೌಚಾಲಯದ ಪಿಟ್ ಗುಂಡಿಯ ಮೇಲೆ ಮಣ್ಣು ಬಿದ್ದು ಹಾನಿಯಾಗಿದೆ. ನರಿಕೊಂಬು ಗ್ರಾಮದ ಮರ್ಲಿಮಾರು ಎಂಬಲ್ಲಿ ಭತ್ತದ ಗದ್ದೆಯಲ್ಲಿ ನೀರು ಶೇಖರಣೆಯಾಗಿ ಕೃಷಿಗೆ ಹಾನಿಯಾಗಿದೆ.
ಮಂಗಳೂರಿನಲ್ಲಿ ಭಾರೀ ಮಳೆ (ETV Bharat) ಮನೆಗಳು ಜಲಾವೃತ:ಜಪ್ಪಿನಮೊಗರು ದೊಂಪದಬಲಿ ಗದ್ದೆ ಸಮೀಪ ಮನೆಗಳು ಜಲಾವೃತ ಬಿರುಸಿನ ಮಳೆ ಹಿನ್ನೆಲೆಯಲ್ಲಿ ಮಂಗಳೂರು ನಗರ ಜಪ್ಪಿನಮೊಗರು ಪ್ರದೇಶದ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ದೊಂಪದ ಬಲಿ ಗದ್ದೆಯ ಸಮೀಪದ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ ಪ್ರಕರಣವೂ ನಡೆದಿದೆ.
ಹಿಂದೆ ಗದ್ದೆಗಳಿದ್ದ ಪ್ರದೇಶ ಪ್ರಸಕ್ತ ಲೇಔಟ್ ಆಗಿ ಮಾರ್ಪಟ್ಟಿದೆ. ಈ ಪ್ರದೇಶದಲ್ಲಿನ ಮುಖ್ಯ ರಸ್ತೆಯೂ ಕಾಂಕ್ರೀಟೀಕರಣಗೊಳಿಸಲಾಗಿದ್ದು, ನೀರು ಹರಿದುಹೋಗಲು ಸೂಕ್ತ ವ್ಯವಸ್ಥೆಯಾಗದೆ ತಗ್ಗು ಪ್ರದೇಶಗಳು ಜಲಾವೃತಗೊಳ್ಳುತ್ತವೆ ಎಂಬ ಆರೋಪ ಸ್ಥಳೀಯರಿಂದ ವ್ಯಕ್ತವಾಗಿದೆ.
ಅತ್ತಾವರದಲ್ಲಿ ಮಳೆಗೆ ಧರೆಗುರುಳಿದ ಬೃಹತ್ ಮರ ಭಾರಿ ಮಳೆ ಹಿನ್ನೆಲೆಯಲ್ಲಿ ಅತ್ತಾವರ ಕಾಪ್ರಿಗುಡ್ಡದ ಬ್ರಿಟ್ಟೋಲೇನ್ ಬಳಿ ವಾಣಿಜ್ಯ ಸಂಕೀರ್ಣದ ತಳಪಾಯದ ಕಾಮಗಾರಿ ನಡೆಯುತ್ತಿದ್ದ ಜಾಗಕ್ಕೆ ಮೇಲ್ಭಾಗದಲ್ಲಿದ್ದ ಬೃಹತ್ ಮರವೊಂದು ಬುಡ ಸಹಿತ ಉರುಳಿ ಬಿದ್ದಿದೆ. ಪಡೀಲ್ ಅಂಡರ್ ಪಾಸ್ನಲ್ಲಿ ತುಂಬಿದ ನೀರು ಪಡೀಲ್ನಲ್ಲಿರುವ ರೈಲ್ವೆ ಅಂಡರ್ ಪಾಸ್ನಲ್ಲಿ ನೀರು ತುಂಬಿ ರಸ್ತೆ ಸಂಚಾರಕ್ಕೆ ತೊಡಕಾಗಿದೆ. ಪ್ರತಿ ಬಾರಿ ಮಳೆಗಾಲದ ಸಂದರ್ಭದಲ್ಲಿ ಪಡೀಲ್ ಅಂಡರ್ ಪಾಸ್ನಲ್ಲಿ ನೀರು ತುಂಬಿ ಸಂಚಾರಕ್ಕೆ ತೊಡಕುಂಟಾಗುತ್ತದೆ.
ಹರೇಕಳ:ನ್ಯೂಪಡ್ಪು ಮಸೀದಿ ತಡೆಗೋಡೆ ಕುಸಿತ ಹರೇಕಳ ಗ್ರಾಮದ ಹೃದಯ ಭಾಗವಾದ ನ್ಯೂಪಡ್ಪುವಿನ ರಾಜರಸ್ತೆಗೆ ತಾಗಿಕೊಂಡಿರುವ ತ್ವಾಹ ಜುಮಾ ಮಸೀದಿಯ ತಡೆಗೋಡೆ - ಕಂಪೌಂಡ್ ಗೋಡೆ ಕುಸಿದು ಬಿದ್ದಿದೆ. ಎಡೆಬಿಡದೇ ಸುರಿಯುತ್ತಿರುವ ಧಾರಕಾರ ಮಳೆಗೆ ತಡೆಗೋಡೆ ಗೋಡೆ ಶಿಥಿಲಗೊಂಡು ಬುಧವಾರ ರಾತ್ರಿ 8.45ರ ಆಸುಪಾಸು ಸಮಯದಲ್ಲಿ ತಡೆಗೋಡೆ ಕುಸಿದು ಬಿದ್ದಿದೆ. ತಡೆಗೋಡೆ ಕುಸಿದ ಸಂದರ್ಭದಲ್ಲಿ ಯಾವುದೇ ವಾಹನ ಸಂಚಾರ, ಜನ ಸಂಚಾರವಿರದೇ ಸಂಭಾವ್ಯ ಬಾರಿ ದೊಡ್ಡ ಅನಾಹುತ ತಪ್ಪಿದೆ.
ಬಪ್ಪನಾಡು ದೇವಸ್ಥಾನದ ಒಳಭಾಗಕ್ಕೆ ನೀರುಭಾರಿ ಮಳೆಗೆ ಬಪ್ಪನಾಡು ದೇವಸ್ಥಾನದ ಒಳಗಡೆ ನೀರು ನುಗ್ಗಿದೆ. ಮುಲ್ಕಿಯ ಕಾರ್ನಾಡ್ ತಹಶೀಲ್ದಾರ್ ಕಚೇರಿ ಆವರಣ ಗೋಡೆಯೊಳಗೆ ನೀರು ನುಗ್ಗಿ ಕೃತಕ ನೆರೆ ಉಂಟಾಯಿತು. ಶಿಮಂತೂರು ದೇವಸ್ಥಾನದ ಗ್ರಾಮೀಣ ಭಾಗದ ರಸ್ತೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ನೆರೆ ನೀರಿನಿಂದ ಮುಳುಗಿದೆ. ಕಿನ್ನಿಗೋಳಿ ಪರಿಸರದ ಗುತ್ತಗಾಡು ಬಳಿ ಕೃತಕ ನೆರೆ ಉಂಟಾಗಿದ್ದು, ತೋಕೂರು ಬಳಿ ಹಳೆಯ ಕಾಲದ ಕಾಲು ಸಂಕ ಕುಸಿದಿದೆ.
ಇಬ್ಬರ ಮಕ್ಕಳ ರಕ್ಷಣೆ:ಪುತ್ತೂರು ತಾಲೂಕಿನ ಬನ್ನೂರಿನ ಜೈನರಗುರಿ ಸಮೀಪ ಮಜೀದ್ ಎಂಬುವವರ ಮನೆ ಕುಸಿದ ಪರಿಣಾಮ ನಿದ್ದೆಯಲ್ಲಿದ್ದ ಮಕ್ಕಳು ಮಣ್ಣಿನಡಿಯಲ್ಲಿ ಸಿಲುಕಿದ್ದ ಘಟನೆ ಇಂದು ನಸುಕಿನ ಜಾವ ನಡೆದಿದೆ. ಕೂಡಲೇ ಸ್ಥಳಿಯ ನಿವಾಸಿ ಮಣ್ಣು ತೆರವು ಮಾಡಿ ಸಿಲುಕಿದ್ದ ಇಬ್ಬರು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ:ಉಳ್ಳಾಲ ಮನೆ ಕುಸಿದ ಸ್ಥಳಕ್ಕೆ ಸಚಿವ ಕೃಷ್ಣ ಬೈರೇಗೌಡ ಭೇಟಿ: ಅಪಾಯಕಾರಿ ಪಾಯಿಂಟ್ ಸರ್ವೆಗೆ ಸೂಚನೆ - Ullal house collapsed