ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಹಾಮಳೆ ಅನಾಹುತಗಳನ್ನು ಸೃಷ್ಟಿಸುತ್ತಲೇ ಇದೆ. ವಿಪರೀತ ಮಳೆಯಿಂದಾಗಿ ಫಲ್ಗುಣಿ ನದಿ ಉಕ್ಕಿ ಹರಿದು ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ದೇವಸ್ಥಾನಗಳು ಜಲದಿಗ್ಬಂಧನಕ್ಕೊಳಗಾಗಿದ್ದು, ಹಲವು ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಮತ್ತೊಂದೆಡೆ, ಮನೆ ಕುಸಿದು ಓರ್ವ ಮಹಿಳೆ ಮೃತಪಟ್ಟಿದ್ದು, ಕಟ್ಟಡ ಕುಸಿದು 5 ಸಾವಿರ ಕೋಳಿಗಳು ಸಾವಿಗೀಡಾಗಿವೆ.
ಬುಧವಾರ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಗೆ ಫಲ್ಗುಣಿ ನದಿಯಲ್ಲಿ ಏಕಾಏಕಿ ನೀರಿನ ಹರಿವು ಹೆಚ್ಚಾಗಿದೆ. ಪಶ್ಚಿಮಘಟ್ಟದಲ್ಲಿ ಹುಟ್ಟಿ, ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬಿಸಮುದ್ರ ಸೇರುವ ಫಲ್ಗುಣಿ ನದಿ ತಾನು ಹರಿಯುವ ಜಾಗದಲ್ಲೆಲ್ಲ ಅವಾಂತರ ಸೃಷ್ಟಿ ಮಾಡಿದೆ. ವೇಣೂರು, ಅಂಗರಕರಿಯ, ಹೊಸಂಗಡಿ ಸೇತುವೆ, ಗುರುಪುರ ಸಮೀಪದ ಮರವೂರು, ಪಡುಶೆಡ್ಡೆ ಭಾಗದಲ್ಲಿ 20ಕ್ಕೂ ಅಧಿಕ ಮನೆಗಳು ಜಲಾವೃತವಾಗಿದೆ. ಕೃಷಿ ಭೂಮಿಗಳಿಗೆ ನೀರುನುಗ್ಗಿ ಊರಿಗೇ ಊರೇ ದ್ವೀಪದಂತಾಗಿದೆ.
ಮಂಗಳೂರು ಹೊರವಲಯದ ವಾಮಂಜೂರು ಅಮೃತೇಶ್ವರ ದೇವಸ್ಥಾನಕ್ಕೆ 30 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ನೀರು ನುಗ್ಗಿದೆ. ದೇವಸ್ಥಾನದ ಗದ್ದೆ, ದೇವಸ್ಥಾನದ ಒಳ ಪ್ರಾಂಗಣ ಜಲಾವೃತವಾಗಿದೆ. ಅಮೃತೇಶ್ವರ ದೇವರಿಗೆ ಜಲದಿಗ್ಭಂಧನದ ನಡುವೆಯೂ ತ್ರಿಕಾಲ ಪೂಜೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನ ಗರ್ಭಗುಡಿ ಮತ್ತು ಸುತ್ತು ಪೌಳಿಗೆ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ. ಭಾರಿ ಮಳೆಗೆ ಏಕಾಏಕಿ ದೇವಸ್ಥಾನದ ಮೇಲೆ ಗುಡ್ಡ ಜರಿದು ಬಿದ್ದು ನೀರಿನ ಜೊತೆಗೆ ದೇವಸ್ಥಾನದ ಒಳಗೆ ಮಣ್ಣು ನುಗ್ಗಿದ್ದು, ಮಳೆ ಹೆಚ್ಚಾದರೆ ಮತ್ತಷ್ಟು ಗುಡ್ಡ ಕುಸಿಯುವ ಭೀತಿ ಎದುರಾಗಿದೆ.
ಮನೆ ಕುಸಿದು ಮಹಿಳೆ ಸಾವು:ಭಾರೀ ಗಾಳಿ-ಮಳೆಗೆ ಮೂಡುಬಿದಿರೆಯ ನೆಲ್ಲಿಕಾರ್ ಗ್ರಾಮದ ಬೋರುಗುಡ್ಡೆ ಜನತಾ ಕಾಲೊನಿಯಲ್ಲಿ ಮನೆ ಕುಸಿದು ಮಹಿಳೆ ಗೋಪಿ ( 65) ಎಂಬವರು ಮೃತಪಟ್ಟಿದ್ದಾರೆ. ಮಹಿಳೆ ಮನೆಯ ಒಳಗಿದ್ದಾಗ ಅವರ ನಾಲ್ವರು ಗಂಡು ಮಕ್ಕಳು ಮಳೆಯಿಂದ ರಕ್ಷಣೆಗೆ ಮನೆಯ ಹೊರಗೆ ಟರ್ಪಾಲು ಕಟ್ಟುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿದೆ.