ಕರ್ನಾಟಕ

karnataka

ETV Bharat / state

ರಾಜ್ಯದ ಈ ಜಿಲ್ಲೆಗಳಲ್ಲಿ ಇನ್ನೂ 4 ದಿನ ಬಿಸಿ ಗಾಳಿ, ಮೇ 8 ರಿಂದ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ - Karnataka IMD Report - KARNATAKA IMD REPORT

ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮೇ 8 ರಿಂದ 10ರವರೆಗೆ ಮಳೆಯಾಗಲಿದೆ. ಆದರೂ ತಾಪಮಾನ ಇಳಿಕೆ ಸಾಧ್ಯತೆ ಕಡಿಮೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (ANI)

By ETV Bharat Karnataka Team

Published : May 4, 2024, 11:52 AM IST

ಬೆಂಗಳೂರು: ಮೇ 8 ರಿಂದ ಎರಡು ದಿನಗಳ ಕಾಲ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರಲ್ಲಿ ಮೇ 8 ರಿಂದ ಮೇ 10ರವರೆಗೆ ಬಿರುಸಾಗಿ ಮಳೆ ಬೀಳುವ ಸಾಧ್ಯತೆ ಇದೆ. ಇನ್ನು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮೇ 9ರಿಂದ ಮುಂದಿನ ಎರಡು ದಿನ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ.

ವಾಡಿಕೆಗಿಂತ ಹೆಚ್ಚು ತಾಪಮಾನದಿಂದ ಕೆಂಡದಂತಾದ ಕೆಲ ಪ್ರದೇಶಗಳಲ್ಲಿ ಶುಕ್ರವಾರ ವರುಣ ತಂಪೆರೆದಿದ್ದರೂ ರಾಜ್ಯದ ಬಹತೇಕ ಜಿಲ್ಲೆಗಳಲ್ಲಿ ಬಿಸಿಲಿನ ಝಳ ಮುಂದುವರಿದಿದೆ. ದಕ್ಷಿಣ ಒಳನಾಡಿನ ಕೆಲವೆಡೆ ಮಳೆ ಸುರಿದರೆ ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಿದ್ದು, ಒಣಹವೆ ಮುಂದುವರಿದಿದೆ. ಶುಕ್ರವಾರ ರಾಯಚೂರಲ್ಲಿ 46.4 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿದೆ. ಕಲಬುರಗಿ 45.8, ಯಾದಗಿರಿ 44.9, ಬಳ್ಳಾರಿ 44.8, ವಿಜಯಪುರ 44.7, ಕೊಪ್ಪಳ 43.9, ಗದಗ 43.4, ಬಾಗಲಕೋಟೆ 43.5, ಬೆಳಗಾವಿ 43.1, ಬೀದರ್​ 43, ಮಂಡ್ಯ 43, ರಾಮನಗರ 42.6, ಧಾರವಾಡ 42.2, ಚಿತ್ರದುರ್ಗ 42, ಕೋಲಾರ 42, ಹಾವೇರಿ 41.9, ತುಮಕೂರು 41.8, ದಾವಣಗೆರೆ 41.3, ಚಿಕ್ಕಬಳ್ಳಾಪುರ 41.9, ಬೆಂ.ಗ್ರಾಮಾಂತರ 41.3, ಶಿವಮೊಗ್ಗ 40.1, ಬೆಂಗಳೂರು 40.9 ಉಷ್ಣಾಂಶ ದಾಖಲಾಗಿದೆ. ಈ ಜಿಲ್ಲೆಗಳಲ್ಲಿ ಮುಂದಿನ 4 ದಿನ ಉಷ್ಣ ಅಲೆ ಇರಲಿದೆ. ಮಳೆ ಸುರಿದರೂ ಕೆಲ ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಳವಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ:ಬಿಸಿಲ ದಗೆಯಿಂದ ಹೈರಾಣಾಗಿದ್ದೀರಾ?: ಈ ಸಸ್ಯಗಳನ್ನು ನಿಮ್ಮ ಕೋಣೆಯಲ್ಲಿಡಿ, ಅವುಗಳ ಅದ್ಬುತ ಪರಿಣಾಮ ನೋಡಿ - Indoor Plants Cool Room

3ನೇ ದಿನವೂ 40ರ ಗಡಿ ದಾಟಿದ ಉಷ್ಣಾಂಶ:ರಾಜಧಾನಿ ಬೆಂಗಳೂರಿನಲ್ಲಿ ಸತತ 3ನೇ ದಿನವೂ ಉಷ್ಣಾಂಶ 40ರ ಗಡಿ ದಾಟಿದೆ. ಮೇ 1ರಂದು 41.3, ಮೇ 2ರಂದು 41.1, ಮೇ 3ರಂದು 40.9 ಉಷ್ಣಾಂಶ ದಾಖಲಾಗಿದೆ. ಸತತ ಎರಡು ದಿನ ನಗರದ ಕೆಲವೆಡೆ ಮಳೆ ಬಿದ್ದರೂ ಬಿಸಿಲಿನ ಪ್ರಖರತೆ ಹೆಚ್ಚಿದೆ. ವಾಡಿಕೆಯಂತೆ 34 ಡಿಗ್ರಿ ಉಷ್ಣಾಂಶ ದಾಖಲಾಗಬೇಕಿತ್ತು. ಆದರೆ, ವಾಡಿಕೆಗಿಂತ 6.6 ಡಿಗ್ರಿ ಹೆಚ್ಚು ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ತುಂಬೆ ಡ್ಯಾಂನಲ್ಲಿ ನೀರಿನಮಟ್ಟ ಇಳಿಕೆ: ಇನ್ನು ಮಂಗಳೂರಲ್ಲಿ ಎರಡು ದಿನಕ್ಕೊಮ್ಮೆ ಮಾತ್ರವೇ ನೀರು ಪೂರೈಕೆ - Mangaluru Water Rationing

ರಾಜಧಾನಿಯಲ್ಲಿ ಶುಕ್ರವಾರ ತಂಪೆರದಿದ್ದ ವರುಣ:ರಾಜಧಾನಿಯ ಹಲವೆಡೆ ಶುಕ್ರವಾರ ಕೂಡ ಮಳೆ ಮುಂದುವರಿದಿತ್ತು. ನಾಯಂಡಹಳ್ಳಿ, ಕೆಂಗೇರಿ, ಹಂಪೆನಗರ, ರಾಜರಾಜೇಶ್ವರಿನಗರ, ಕೊಡಿಗೆಹಳ್ಳಿ, ಕಡಬಗೆರೆ, ಚಂದಾಪುರ, ಹಂಪಿನಗರ, ವಿದ್ಯಾಪಿಠ, ಬೊಮ್ಮನಹಳ್ಳಿ, ಮಾರುತಿಮಂದಿರ ಸೇರಿ ನಗರದ ವಿವಿಧೆಡೆ ಬಿರುಸಾಗಿ ಮಳೆ ಬಿದ್ದಿತ್ತು. ಸರಾಗವಾಗಿ ನೀರು ಹರಿಯದ ಪರಿಣಾಮ ರಸ್ತೆಯಲ್ಲೇ ನೀರು ನಿಂತಿತ್ತು. ಇದರಿಂದಾಗಿ ವಾಹನ ಸವಾರರಿಗೆ ಅಡಚಣೆಯಾಯಿತು. ಮಳೆಯಿಂದಾಗಿ ಕೃಷ್ಣರಾಜೇಂದ್ರ ಮಾರುಕಟ್ಟೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತಿತ್ತು. ಕೆಲ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಇದ್ದರೂ ಮಳೆ ದರ್ಶನವಾಗಲಿಲ್ಲ.

ನಗರದಲ್ಲಿ ಸುರಿಯುತ್ತಿರುವ ಮಳೆ ಮೇ 8ರಿಂದ ಮೇ 10ರವರೆಗೆ ಬಿರುಸಾಗಿ ಸುರಿಯಲಿದೆ. ಮೇ 4ರಂದು ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾದರೆ ಮೇ 5 ರಿಂದ ಮೇ 6ರವರೆಗೆ ಒಣಹವೆ ಇರಲಿದೆ. ನಂತರ ಮಳೆಯಾಗಲಿದೆ - ಬೆಂಗಳೂರು ಹವಾಮಾನ ಕೇಂದ್ರದ ವಿಜ್ಞಾನಿ ಡಾ.ಎಂ.ರಾಜವೇಲ್

ABOUT THE AUTHOR

...view details