ಬೆಂಗಳೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಅಕ್ರಮವಾಗಿ ತಮ್ಮ ಕುಟುಂಬದ ಸದಸ್ಯರಿಗೆ ನಿವೇಶನಗಳ ಹಂಚಿಕೆ ಆರೋಪ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿರುವ ಅರ್ಜಿ ವಿಚಾರಣೆ ಹೈಕೋರ್ಟ್ನಲ್ಲಿ ನಡೆಯುತ್ತಿದೆ.
ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠವು ವಿಚಾರಣೆ ನಡೆಸುತ್ತಿದೆ. ರಾಜ್ಯಪಾಲರ ಕಾರ್ಯದರ್ಶಿ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡನೆ ಮಾಡುತ್ತಿದ್ದಾರೆ.
''ಯಾವುದೇ ಆರೋಪ ಸಂಬಂಧ ಅನುಮತಿ ಬಂದ ಬಳಿಕ ಅದರ ಕುರಿತಂತೆ ಮೇಲ್ನೋಟಕ್ಕೆ ಸತ್ಯ ಎಂಬುದಾಗಿ ಗೊತ್ತಾದ ನಂತರ ತಹಶೀಲ್ದಾರ್ ಇಲ್ಲವೇ, ರಾಜ್ಯಪಾಲರು ಸಹ ಅನುಮತಿ ನೀಡಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ರಾಜಕೀಯ ಉದ್ದೇಶ ಅಡಗಿದೆ ಎಂಬುದಾಗಿ ಆರೋಪಿಸಲಾಗದು'' ಎಂದು ತುಷಾರ್ ಮೆಹ್ತಾ ವಾದಿಸಿದರು.
''ಪ್ರಕರಣ ಸಂಬಂಧ ಟಿ.ಜೆ. ಅಬ್ರಾಹಂ ಅವರು ದಾಖಲೆಗಳ ಮೂಲಕ ರಾಜ್ಯಪಾಲರಿಗೆ ಅನುಮತಿ ಕೇಳಿ ಮನವಿ ಮಾಡಿದ್ದರು. ಅದೇ ಆರೋಪ ಸಂಬಂಧ ಇನ್ನಿಬ್ಬರು ಮನವಿ ಮಾಡಿದ್ದಾರೆ. ಹೀಗಾಗಿ, ಅಬ್ರಾಹಂ ಅವರ ಅರ್ಜಿ ಸಂಬಂಧ ಸಿಎಂಗೆ ಶೋಕಾಸ್ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ಕೇಳಲಾಗಿದೆ. ಇನ್ನಿಬ್ಬರ ಅರ್ಜಿಗೆ ಸಂಬಂಧಿಸಿದಂತೆ ಶೋಕಾಸ್ ನೋಟಿಸ್ ನೀಡಿರಲಿಲ್ಲ ಎಂಬ ಅಂಶ ಮುಖ್ಯವಾಗಲಿದೆ. ರಾಜ್ಯಪಾಲರು ವಿವೇಚನೆ ಬಳಸಿಯೇ ಅನುಮತಿ ನೀಡಿದ್ದಾರೆ. ಹೀಗಾಗಿ, ತನಿಖೆ ನಡೆದು ಸತ್ಯಾಂಶ ಹೊರ ಬರಬೇಕಾಗಿದೆ'' ಎಂದರು.
ಸ್ವಾತಂತ್ರ್ಯದ ಬಳಿಕ ದೊಡ್ಡ ಪ್ರತಿಕ್ರಿಯೆ:ವಾದ ಮುಂದುವರೆಸಿದ ಮೆಹ್ತಾ, ''ಮುಖ್ಯಮಂತ್ರಿಗಳ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವ ಸಂಬಂಧ ಸಚಿವ ಸಂಪುಟವು ತನ್ನ ನಿರ್ಧಾರ ತಿಳಿಸಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತ್ರತ್ವದಲ್ಲಿ ಸಂಪುಟ ಸಭೆ ನಡೆಸಿ, ಸುಮಾರು 91 ಪುಟಗಳ ಪ್ರತಿಕ್ರಿಯೆ ನೀಡಲಾಗಿದೆ. ಇದು ಸ್ವಾತಂತ್ರ್ಯ ಭಾರತದಲ್ಲಿಯೇ ಅತಿದೊಡ್ಡ ಪ್ರತಿಕ್ರಿಯೆ'' ಎಂದು ವಿವರಿಸಿದರು.