ಬೆಳಗಾವಿ: "ಬೆಳಗಾವಿಯಲ್ಲಿ ಇವತ್ತಿನಿಂದ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಆರೋಗ್ಯ ಇಲಾಖೆಯ ಕುರಿತು ಗಂಭೀರ ಚರ್ಚೆ ನಡೆಯಲಿ. ಅದಕ್ಕೆ ಉತ್ತರ ನೀಡಲು ನಾವು ಸಿದ್ಧರಿದ್ದೇವೆ. ನಡೆದ ಘಟನೆಗಳ ಕುರಿತು ಸತ್ಯಾಂಶ ಸಹಿತ ಮಾತನಾಡಲಿ" ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಿಜೆಪಿ ನಾಯಕರಿಗೆ ಸವಾಲು ಎಸೆದರು.
ಅವರು ಬೆಳಗಾವಿ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತ, "ರಾಜ್ಯದಲ್ಲಿ ಬಾಣಂತಿಯರ ಮರಣಗಳಾಗುತ್ತವೆ. ಅವು ವೈದ್ಯಕೀಯ ಕಾರಣದಿಂದ ಅಂತ ಹೇಳಲು ಆಗುವುದಿಲ್ಲ. ವಿರೋಧ ಪಕ್ಷಗಳು ನಿಜವಾದ ಲೋಪದೋಷಗಳ ಬಗ್ಗೆ ಮಾತನಾಡಲಿ. ದೇಶದ ಆರೋಗ್ಯ ಸೇವೆಗಳಲ್ಲಿ ಕರ್ನಾಟಕ ಉತ್ತಮ ಸ್ಥಾನದಲ್ಲಿದೆ. ಬಾಣಂತಿಯರ ಮರಣ ವೈದ್ಯಕೀಯ ಕಾರಣಗಳಿಂದ ಆಗಿರಬಹುದು. ನಮ್ಮ ಸರ್ಕಾರ ಯಾವುದೇ ಮಾಫಿಯಾದಲ್ಲಿ ಸಿಲುಕಿಕೊಂಡಿಲ್ಲ. ಕೋವಿಡ್ ಹಗರಣದ ಕುರಿತು ಮೊದಲು ಉತ್ತರ ನೀಡಲಿ" ಎಂದರು.
"ಗರ್ಭಿಣಿಯರು ಬಳ್ಳಾರಿ ಆಸ್ಪತ್ರೆಗೆ ಮತ್ತೆ ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲ ಕಡೆಗಳಲ್ಲೂ ವೈದ್ಯರ ಕೊರತೆಯಿದೆ. ನಾವು ವೈದ್ಯಕೀಯ ನೇಮಕಾತಿಯಲ್ಲಿ ಯಾವುದೇ ರಾಜಕೀಯಕ್ಕೆ ಆಸ್ಪದ ನೀಡದೆ ಪಾರದರ್ಶಕತೆಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ವೈದ್ಯಕೀಯ ಸಿಬ್ಬಂದಿಗಳು, ಸ್ಟಾಫ್ ನರ್ಸ್ಗಳ ನೇಮಕಾತಿ ಪ್ರಕ್ರಿಯೆಗೆ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ. ಶೀಘ್ರದಲ್ಲೇ ಕ್ರಮ ಕೈಗೊಳ್ಳುತ್ತೇವೆ" ಎಂದು ಭರವಸೆ ನೀಡಿದರು.