ಬೆಂಗಳೂರು :ಗರ್ಭಕಂಠದ ಕ್ಯಾನ್ಸರ್ಗೆ ಹೆಚ್.ವಿ.ವಿ ವ್ಯಾಕ್ಸಿನ್ ಕೊಡುವ ಕುರಿತು ಕೇಂದ್ರ ಸರ್ಕಾರ ಬಜೆಟ್ನಲ್ಲಿ ಯಾವ ರೀತಿಯ ನಿರ್ಧಾರ ಪ್ರಕಟಿಸಲಿದೆ ಎನ್ನುವುದನ್ನು ನೋಡಿ ರಾಜ್ಯ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ವಿಧಾನ ಪರಿಷತ್ನಲ್ಲಿ ಗರ್ಭಕಂಠದ ಕ್ಯಾನ್ಸರ್ ಕುರಿತಂತೆ ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಮ್ಮಲ್ಲಿ ಬರುವವರಿಗೆ ಚಿಕಿತ್ಸೆ ಕೊಡ್ತಾ ಇದ್ದೇವೆ. ಹೆಚ್ವಿವಿ ವ್ಯಾಕ್ಸಿನ್ ಕೊಡುವ ಬಗ್ಗೆ ಕೇಂದ್ರ ಘೋಷಣೆ ಮಾಡಿದೆ. ನಾವು ಕೂಡ ಈಗಾಗಲೇ ಪತ್ರ ಬರೆದಿದ್ದೇವೆ. ನಾಳೆ ಬಜೆಟ್ ಇದೆ, ಅದರಲ್ಲಿ ಈ ಬಗ್ಗೆ ಏನಾದರೂ ಅನೌನ್ಸ್ ಮಾಡ್ತಾರಾ ನೋಡಬೇಕು. ನಾವು ಒಂದು ಬಾರಿ ವ್ಯಾಕ್ಸಿನ್ ಶುರು ಮಾಡಿದರೆ ಎಲ್ಲ ಕಡೆ ಮಾಡಬೇಕು. ಇದನ್ನ ಒಂದು ಬಾರಿ ಕೊಟ್ಟು ನಿಲ್ಲಿಸಲು ಆಗಲ್ಲ. ಇದಕ್ಕೆ ಎಷ್ಟು ಬಜೆಟ್ ಏನು ಅಂತ ನೋಡಬೇಕು. ಕೇಂದ್ರದಿಂದ ತೀರ್ಮಾನ ಬಂದ ನಂತರ ನಾವು ಅನುಷ್ಠಾನ ಮಾಡುತ್ತೇವೆ ಎಂದರು.
ನಕಲಿ ವೈದ್ಯರ ಹಾವಳಿ ತಡೆ : ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ತಡೆಗೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಲಬುರಗಿಯಲ್ಲಿ ನಕಲಿ ವೈದ್ಯರ ಹಾವಳಿ ಕುರಿತು ತಿಪ್ಪಣ್ಣ ಕಮಕನೂರು ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಲಬುರಗಿಯಲ್ಲಿ ನೂರಾರು ಜನ ತೀರಿ ಹೋಗಿದ್ದಾರೆ ಎಂದು ಸದಸ್ಯ ಕಮಕನೂರು ಆರೋಪಿಸಿದ್ದಾರೆ, ನಕಲಿ ವೈದ್ಯರ ಕಾರಣದಿಂದ ನೂರಾರು ಜನ ಸತ್ತಿದ್ದಾರೆ ಎನ್ನುವಾಗ ದಾಖಲೆ ಇಟ್ಟು ಹೇಳಬೇಕು. ಈಗ ನಾವು ನಕಲಿ ವೈದ್ಯರ ಮಟ್ಟ ಹಾಕಲು ಪೂರಕವಾಗಿ ಯಾವ ಆಸ್ಪತ್ರೆಯಲ್ಲಿ ಯಾವ ಪದ್ದತಿಯ ಚಿಕಿತ್ಸೆ ಸಿಗಲಿದೆ ಎನ್ನುವ ಕುರಿತು ಮಾಹಿತಿ ಪ್ರಕಟಿಸಲು ಕಲರ್ ಕೋಡ್ ರೂಪಿಸಿದ್ದೇವೆ. ವೈದ್ಯರು ಯಾವ ಯಾವ ಕೆಟಗರಿಯವರು ಎಂದು ಟಿಕ್ ಹಾಕುತ್ತಿದ್ದೇವೆ. ಆಯುರ್ವೇದದಲ್ಲಿ ಪ್ರಾಕ್ಟೀಸ್ ಮಾಡಿದ್ದರೆ ಅಂತಹ ವೈದ್ಯರು ಗ್ರೀನ್ ಬಣ್ಣದ ನಾಮಫಲಕ ಹಾಕಬೇಕು. ಅಲೋಪತಿ ವೈದ್ಯರಾದರೆ ಬ್ಲ್ಯೂ ಬಣ್ಣದ ಬೋರ್ಡ್ ಹಾಕಬೇಕು ಎಂದರು.