ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದು 2024-25ನೇ ಸಾಲಿನ ಬಜೆಟ್ ಮಂಡನೆ ಮಾಡುತ್ತಿದ್ದಾರೆ. 3,71, 383 ಕೋಟಿ ರೂ. ಮೊತ್ತದ ಬಜೆಟ್ ಇದಾಗಿದ್ದು, ಆರೋಗ್ಯ ಕ್ಷೇತ್ರಕ್ಕೂ ಸಂಪೂರ್ಣ ಗಮನ ಹರಿಸಿದ್ದಾರೆ.
- ರಾಜ್ಯದಲ್ಲಿ ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿರುವ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಿ ಪ್ರಾಣ ಉಳಿಸುವ ಉದ್ದೇಶದಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಆಧುನಿಕ ಕ್ರಿಟಿಕಲ್ ಕೇರ್ ಬ್ಲಾಕ್ಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಪ್ರಕಟಿಸಿದ್ದಾರೆ.
- ಈಗಾಗಲೇ 15 ಜಿಲ್ಲೆಗಳಲ್ಲಿ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಉಡುಪಿ, ದಾವಣಗೆರೆ, ವಿಜಯಪುರ, ಮೈಸೂರು, ಮಂಡ್ಯ, ಧಾರವಾಡ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ 187 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು. ಮುಂದಿನ ಸಾಲಿನಲ್ಲಿ ಉಳಿದ 9 ಜಿಲ್ಲೆಗಳಲ್ಲಿಯೂ ಕ್ರಿಟಿಕಲ್ ಕೇರ್ ಬ್ಲಾಕ್ಗಳನ್ನು ಸ್ಥಾಪಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ.
- ತಾಲೂಕು ಆಸ್ಪತ್ರೆಗಳಿಲ್ಲದ ಆನೇಕಲ್, ನೆಲಮಂಗಲ, ಹೊಸಕೋಟೆ, ಶೃಂಗೇರಿ, ಖಾನಾಪುರ, ಶಿರಹಟ್ಟಿ ಮತ್ತು ಯಳಂದೂರು ತಾಲೂಕುಗಳಲ್ಲಿ ಪ್ರಸಕ್ತ ಸಾಲಿನಲ್ಲಿ 100 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆಗಳನ್ನು 280 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು.
- ಆರೋಗ್ಯ ಇಲಾಖೆಯ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ದುರಸ್ತಿ ಮತ್ತು ಉನ್ನತೀಕರಣಕ್ಕೆ 75 ಕೋಟಿ ರೂ.ಗಳ ಅನುದಾನ ನೀಡಲಾಗುವುದು.
- ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆ ಆವರಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ, ಮತ್ತಿತರೆ ಮೂಲಸೌಕರ್ಯ ಕಾಮಗಾರಿಗಳನ್ನು 150 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗುವುದು ಎಂದು ಸಿದ್ದರಾಮಯ್ಯ ಬಜೆಟ್ ಭಾಷಣದಲ್ಲಿ ಘೋಷಿಸಿದರು.
- ಗ್ರಾಮೀಣ ಪ್ರದೇಶದ ಜನರಿಗೆ 24x7 ತುರ್ತು ಆರೋಗ್ಯ ಸೇವೆಯನ್ನು ನೀಡಲು ಮುಂದಿನ 2 ವರ್ಷಗಳಲ್ಲಿ 350 ಕೋಟಿ ರೂ. ವೆಚ್ಚದಲ್ಲಿ 25 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ 15 ಸಮುದಾಯ ಆರೋಗ್ಯ ಕೇಂದ್ರಗಳನ್ನು ಮಾನವ ಸಂಪನ್ಮೂಲದೊಂದಿಗೆ ಕಾರ್ಯಗತಗೊಳಿಸಲಾಗುವುದು.
- ಕಲ್ಯಾಣ ಕರ್ನಾಟಕ ಭಾಗದಲ್ಲಿ 46 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 221 ಕೋಟಿ ರೂ.ಗಳ ವೆಚ್ಚದಲ್ಲಿ ಕೆಕೆಆರ್ಡಿಬಿ ಮೂಲಕ ಸ್ಥಾಪನೆ ಮಾಡಲಾಗುವುದು.
- ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡಲು 6,493 ಆರೋಗ್ಯ ಕ್ಷೇಮ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 199 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಕಟ್ಟಡ ಕಾಮಗಾರಿಗಾಗಿ 130 ಕೋಟಿ ರೂ. ಅನುದಾನ ನೀಡಲಾಗುವುದು.
- ಜಿಲ್ಲಾ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿರುವ ಮಕ್ಕಳ ತಜ್ಞರು ಮತ್ತು ಕ್ರಿಟಿಕಲ್ ಕೇರ್ ಮೆಡಿಸಿನ್ ತಜ್ಞ, ಮತ್ತಿತರೆ ತಜ್ಞ ವೈದ್ಯರುಗಳ ಸೇವೆಯನ್ನು ಟೆಲಿ-ಐಸಿಯು ವ್ಯವಸ್ಥೆಯ ಮೂಲಕ ತಾಲೂಕು ಆಸ್ಪತ್ರೆಗಳಿಗೆ ಒದಗಿಸಲಾಗುವುದು.
- ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ಮತ್ತು ನಿರಂತರ ಅನುಸರಣೆಗಾಗಿ ಬಹುತೇಕ ಜಿಲ್ಲೆಗಳಲ್ಲಿ ಕಿಮೋಥೆರಪಿ ಚಿಕಿತ್ಸಾ ಕೇಂದ್ರಗಳು ಲಭ್ಯವಿರದ ಕಾರಣ, ಸರ್ಕಾರ 20 ಕೋಟಿ ರೂ. ವೆಚ್ಚದಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಒಂದು ಡೇ - ಕೇರ್ ಕಿಮೋಥೆರಪಿ ಕೇಂದ್ರವನ್ನು ಸ್ಥಾಪಿಸಲಾಗುವುದು.
- ಮಹಿಳೆಯರಲ್ಲಿ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್ ಅನ್ನು ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು 20 ಜಿಲ್ಲಾಸ್ಪತ್ರೆಗಳಲ್ಲಿ Digital Mammography ಯಂತ್ರಗಳನ್ನು ಮತ್ತು ಕೆ.ಸಿ. ಜನರಲ್ ಆಸ್ಪತ್ರೆ ಬೆಂಗಳೂರು ಹಾಗೂ ಉಡುಪಿ, ಕೋಲಾರ ಮತ್ತು ದಾವಣಗೆರೆ ಜಿಲ್ಲಾ ಆಸ್ಪತ್ರೆಗಳಿಗೆ Colposcopy ಉಪಕರಣಗಳ ಖರೀದಿಗೆ ಒಟ್ಟಾರೆಯಾಗಿ 21 ಕೋಟಿ ರೂ.ಗಳ ಅನುದಾನ ಒದಗಿಸಲಾಗುವುದು.
- ರಾಜ್ಯದ ಜಿಲ್ಲಾ ಆಸ್ಪತ್ರೆಗಳನ್ನು ಅಗ್ನಿ ಅವಘಡಗಳಿಂದ ರಕ್ಷಿಸಲು 13 ಜಿಲ್ಲಾ ಆಸ್ಪತ್ರೆಗಳಲ್ಲಿ ಅಗ್ನಿಶಾಮಕ ವ್ಯವಸ್ಥೆಯನ್ನು 6 ಕೋಟಿ ರೂ.ಗಳ ವೆಚ್ಚದಲ್ಲಿ ಅಳವಡಿಸಲಾಗುವುದು.
- 2025 ರೊಳಗೆ ಕ್ಷಯರೋಗ ನಿರ್ಮೂಲನೆಗೊಳಿಸಲು 87 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕ್ಷಯರೋಗ ತಪಾಸಣೆಗಾಗಿ True-Nat Machines ಖರೀದಿಗಾಗಿ 6 ಕೋಟಿ ರೂ. ಗಳ ಅನುದಾನ ಒದಗಿಸಲಾಗುವುದು.
- ಕಲ್ಯಾಣ ಕರ್ನಾಟಕದಲ್ಲಿ Haemophilia & Thalassemia ರೋಗಿಗಳಿಗೆ ಸೂಕ್ತ ಚಿಕಿತ್ಸಾ ಸೌಲಭ್ಯಗಳ ಕೊರತೆ ಇರುವುದರಿಂದ ಕಲಬುರಗಿ ಮತ್ತು ಕೊಪ್ಪಳದ ICDT ಕೇಂದ್ರಗಳ ಬಲವರ್ಧನೆಗೆ 7 ಕೋಟಿ ರೂ.ಗಳನ್ನು ಒದಗಿಸಲಾಗುವುದು.
- ಬೆಂಗಳೂರಿನಲ್ಲಿ ಬಡಜನತೆಗೆ ಉಚಿತ ಪ್ರಯೋಗಾಲಯ ಸೇವೆಯನ್ನು ಒದಗಿಸಲು Hub and Spoke ಮಾದರಿಯಲ್ಲಿ 430 ಪ್ರಯೋಗಾಲಯಗಳ ಸ್ಥಾಪನೆಗೆ ಮುಂದಿನ ಎರಡು ವರ್ಷಗಳಲ್ಲಿ 20 ಕೋಟಿ ರೂ. ಗಳ ಅನುದಾನ ನೀಡಲಾಗುವುದು.
- ಮಧುಮೇಹ ನಿಯಂತ್ರಣಕ್ಕಾಗಿ ಸಾರ್ವಜನಿಕರಿಗೆ ಆಯುಷ್ ಚಿಕಿತ್ಸೆ ನೀಡಲು ರಾಜ್ಯದ ನಾಲ್ಕು ವಿಭಾಗಗಳಲ್ಲಿ ತಲಾ ಒಂದು ಆಯುರ್ವೇದ ಮಧುಮೇಹ ಘಟಕವನ್ನು ಸ್ಥಾಪಿಸಲಾಗುವುದು.
- ಕೋವಿಡ್-19 ಸಾಂಕ್ರಾಮಿಕ ರೋಗದ ನಿವಾರಣೆ ಹಾಗೂ ತಡೆಗಟ್ಟುವಿಕೆ ಸಂಬಂಧವಾಗಿ 2021ರಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ನೀಡಿರುವ ವರದಿಯಲ್ಲಿನ ಗಂಭೀರವಾದ ಆರೋಪಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ವಿಚಾರಣಾ ಆಯೋಗವನ್ನು ನೇಮಿಸಿದೆ. ಆಯೋಗವು ನೀಡುವ ವರದಿಯನ್ನಾಧರಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.