ಕರ್ನಾಟಕ

karnataka

ETV Bharat / state

ಹಿಟ್ ಅಂಡ್ ರನ್ ಮುಖ್ಯಮಂತ್ರಿ: ಸಿದ್ದರಾಮಯ್ಯ ವಿರುದ್ಧ ಹೆಚ್​.ಡಿ‌.ಕುಮಾರಸ್ವಾಮಿ ಕಿಡಿ - HD KUMARASWAMY

ಹಿಟ್ ಅಂಡ್ ರನ್ ಮುಖ್ಯಮಂತ್ರಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ಎಕ್ಸ್​ ಖಾತೆಯಲ್ಲಿ ದೂರಿದ್ದಾರೆ.

ಕೇಂದ್ರ ಸಚಿವ ಹೆಚ್​.ಡಿ‌.ಕುಮಾರಸ್ವಾಮಿ
ಕೇಂದ್ರ ಸಚಿವ ಹೆಚ್​.ಡಿ‌.ಕುಮಾರಸ್ವಾಮಿ (ETV Bharat)

By ETV Bharat Karnataka Team

Published : Jan 6, 2025, 9:17 PM IST

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಲಂಚ ಪ್ರಮಾಣ ಶೇ.60ಕ್ಕೆ ತಲುಪಿದೆ ಎಂಬ ಆರೋಪಕ್ಕೆ ದಾಖಲೆ ಕೊಡಿ ಎಂದ ಸಿಎಂ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ, "ಶೇ.60 ಕಮಿಷನ್ ಆಧಾರವಿಲ್ಲದೇ ಆರೋಪದ ಮಾತೆಲ್ಲಿ ಬಂತು ಮುಖ್ಯಮಂತ್ರಿಗಳೇ? ನಿಮ್ಮ ಪಕ್ಷದ ಪರವೇ ಇರುವ ಗುತ್ತಿಗೆದಾರರು, ತುಮಕೂರಿನ ನಿಮ್ಮ ಕಾಂಗ್ರೆಸ್ ಪಕ್ಷದ ಮುಖಂಡರೇ ಮಾಡಿರುವ ಆರೋಪವಿದು. ನಮ್ಮ ಪಕ್ಷದ ಸರ್ಕಾರಕ್ಕಿಂತ ಹಿಂದಿನ ಬಿಜೆಪಿ ಸರ್ಕಾರವೇ ವಾಸಿ ಇತ್ತು ಎಂದು ಅವರು ಅಲವತ್ತುಕೊಂಡಿದ್ದರು. ನಿಮ್ಮ ಪಕ್ಷದ ಗುತ್ತಿಗೆದಾರರು! ಕಾಂಗ್ರೆಸ್ ಸರ್ಕಾರದಲ್ಲೂ ಶೇ.40 ಕಮಿಷನ್ ಸುಲಿಗೆ ಮಾಡಲಾಗುತ್ತಿದೆ ಎಂಬುದು ಅವರ ನೇರ ಆರೋಪ" ಎಂದು ಟಾಂಗ್ ಕೊಟ್ಟಿದ್ದಾರೆ.

ಹೆಚ್​.ಡಿ‌.ಕುಮಾರಸ್ವಾಮಿ ಪೋಸ್ಟ್ (ETV Bharat)

ನೀವು ಎಂದಾದರೂ ದಾಖಲೆ ಕೊಟ್ಟು ಆರೋಪ ಮಾಡಿದ್ದೀರಾ?:"ಕಮಿಷನ್ ವ್ಯವಹಾರ ಇಲ್ಲ ಎಂದಾದರೆ, 'ಯಾಕಪ್ಪಾ ಹಾಗೆ ಹೇಳಿದಿರಿ?' ಎಂದು ಅವರನ್ನೇ ಕರೆದು ಕೇಳಬೇಕಿತ್ತು. ಕೇಳಲಿಲ್ಲ ಯಾಕೆ? ಪ್ರತಿ ಆರೋಪಕ್ಕೂ ಈಗ ದಾಖಲೆ ಕೇಳುವ ನೀವು, ಬಿಜೆಪಿ ಸರ್ಕಾರದ ಮೇಲೆ ಶೇ.40 ಕಮಿಷನ್ ಆರೋಪ ಮಾಡಿ, ಪುಟಗಟ್ಟಲೇ ಜಾಹೀರಾತು ಕೊಟ್ಟರಲ್ಲಾ. ಆಗ ಎಷ್ಟು ದಾಖಲೆ ನೀಡಿದ್ದೀರಿ? ನಿಮ್ಮ ರಾಜಕೀಯ ಜೀವನದಲ್ಲಿ ಎಂದಾದರೂ ದಾಖಲೆ ಇಟ್ಟು ಆರೋಪ ಮಾಡಿದ್ದೀರಾ?" ಎಂದು ಪ್ರಶ್ನೆ ಮಾಡಿದ್ದಾರೆ.

"ದಾವಣಗೆರೆ ಗುತ್ತಿಗೆದಾರನೊಬ್ಬ ದಯಾಮರಣ ಕರುಣಿಸಿ ಎಂದು ನಿಮ್ಮ ಸನ್ನಿಧಾನಕ್ಕೆ ಹಾಗೂ ಮಾನ್ಯ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಅವರಿಗೆ ಬಾಕಿ ಹಣ ಕೊಡಿಸುತ್ತೀರೋ ಅಥವಾ ದಯಾಮರಣ ಕರುಣಿಸುತ್ತೀರೋ..? ಕಮಿಷನ್ ದುರಾಸೆ ಬಿಟ್ಟು ಮೊದಲು ಆ ಗುತ್ತಿಗೆದಾರನನ್ನು ರಕ್ಷಿಸಿ; ಮುಖ್ಯಮಂತ್ರಿ ಹಿಟ್ ಅಂಡ್ ರನ್" ಎಂದು ಹೆಚ್​.ಡಿ.ಕುಮಾರಸ್ವಾಮಿ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ನಿನ್ನೆ ಮೈಸೂರಲ್ಲಿ ಮಾತನಾಡಿದ್ದ ಹೆಚ್​ಡಿಕೆ, ಕಾಂಗ್ರೆಸ್ ಸರ್ಕಾರದಲ್ಲಿ ಮನೆ ಹಂಚಿಕೆಯಲ್ಲಿಯೂ ಲಂಚ ಪಡೆಯಲಾಗುತ್ತಿದೆ. ಲಂಚದ ಪ್ರಮಾಣ ಶೇ. 60 ತಲುಪಿದೆ ಎಂದು ಆರೋಪಿಸಿದ್ದರು. ಕಾಂಗ್ರೆಸ್ ಸರ್ಕಾರದಲ್ಲಿ ಶೇ.60 ರಷ್ಟು ಲಂಚ, ಕಮಿಷನ್ ವಸೂಲಿ ಮಾಡುತ್ತಿರುವುದನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದರು.

ರಾಜ್ಯದ ಗುತ್ತಿಗೆದಾರರ ಸ್ಥಿತಿ ಸೋಚನೀಯ: ರಾಜ್ಯದ ಗುತ್ತಿಗೆದಾರರ ಪರಿಸ್ಥಿತಿ ಶೋಚನೀಯವಾಗಿದೆ. ಇವತ್ತಿನ ಪರಿಸ್ಥಿತಿ ನೋಡಿದರೆ ಹಿಂದಿನ ಬಿಜೆಪಿ ಸರ್ಕಾರವೇ ಚೆನ್ನಾಗಿತ್ತು ಎನ್ನುತ್ತಿದ್ದಾರೆ ಕಾಂಗ್ರೆಸ್ ಪರವಾಗಿರುವ ಗುತ್ತಿಗೆದಾರರು. ಇದಕ್ಕೆಲ್ಲಾ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ ಬೆಲೆ ತರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

ಬಳಿಕ ದಾವಣಗೆರೆಯಲ್ಲಿ ಪ್ರತಿಕ್ರಿಯೆ ನೀಡಿದ್ದ ಸಿಎಂ ಸಿದ್ದರಾಮಯ್ಯ, ಬರೀ ಆರೋಪ ಮಾಡುವುದಲ್ಲ, ದಾಖಲೆ ಕೊಡಲಿ ಎಂದಿದ್ದರು.

ಇದನ್ನೂ ಓದಿ: ಕಾಂಗ್ರೆಸ್​ ಸರ್ಕಾರದಲ್ಲಿ ಲಂಚದ ಪ್ರಮಾಣ ಶೇ. 60ಕ್ಕೆ ತಲುಪಿದೆ; ಹೆಚ್​ ಡಿ ಕುಮಾರಸ್ವಾಮಿ

ಇದನ್ನೂ ಓದಿ: ಶೇ.60 ಕಮಿಷನ್ ಆರೋಪಕ್ಕೆ ಹೆಚ್​ಡಿಕೆ ದಾಖಲೆ ಕೊಡಲಿ, ಎಲ್ಲ ಸರ್ಕಾರಗಳ ಕಾಲದಲ್ಲೂ ಬಸ್ ದರ ಜಾಸ್ತಿ ಆಗಿದೆ: ಸಿಎಂ

ABOUT THE AUTHOR

...view details