ಬೆಂಗಳೂರು:ಇದು ನನಗೆ ಮರುಜನ್ಮ. ನಾಡಿನಾದ್ಯಂತ ಜನ ನನ್ನ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಿದ್ರು. ಆ ದೇವರ ಅನುಗ್ರಹ, ಜನರ ಪ್ರಾರ್ಥನೆ ಫಲ ಕೊಟ್ಟಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಚೆನ್ನೈನಲ್ಲಿಹೃದಯ ಸಂಬಂಧಿ ಶಸ್ತ್ರಚಿಕಿತ್ಸೆ ಪಡೆದು ಬೆಂಗಳೂರಿಗೆ ಆಗಮಿಸಿದ ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಎರಡು ಬಾರಿ ನನಗೆ ಹೃದಯ ಶಸ್ತ್ರಚಿಕಿತ್ಸೆ ಆಗಿತ್ತು. ಅದರಲ್ಲಿ ಲೋಪದೋಷಗಳಾಗಿದ್ದವು. ಚಿಕಿತ್ಸೆ ಮೂಲಕ ಸರಿಪಡಿಸಲಾಗಿದೆ. ಇಂದಿನ ಟೆಕ್ನಾಲಜಿಯಿಂದ ನನ್ನ ಜೀವ ಉಳಿಯಿತು. ಇಲ್ಲದಿದ್ದರೆ ಕಷ್ಟ ಆಗಿರುವುದು. ನನಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಸಹ ಸಾಯಿಬಾಬಾ ಭಕ್ತರು. ಅವರೂ ಕೂಡ ನನಗಾಗಿ ದೇವರಲ್ಲಿ ಪ್ರಾರ್ಥಿಸಿದರು. ಸಾಯಿ ಬಾಬಾ ಬಂದು ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ಆ ವೈದ್ಯರು ಹೇಳಿದ್ದಾಗಿ ಹೆಚ್ಡಿಕೆ ತಿಳಿಸಿದರು.
ಮೂರ್ನಾಲ್ಕು ದಿನ ವಿಶ್ರಾಂತಿ: ಮುಂದಿನಮೂರ್ನಾಲ್ಕು ದಿನ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತೇನೆ. ನಂತರ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತೇನೆ. 25 ದಿನಗಳ ಕಾಲ ನನ್ನ ಕೈಲಾದಷ್ಟು ಪ್ರಚಾರ ಮಾಡಿ ಎನ್ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸುವ ಕೆಲಸ ಮಾಡ್ತೀನಿ ಎಂದರು.
ರಾಜ್ಯ ಸರ್ಕಾರದ ವಿರುದ್ಧ ಕಿಡಿ:ಬರ ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರದಿಂದ ರಿಟ್ ಅರ್ಜಿ ವಿಚಾರವಾಗಿ ಕುಮಾರಸ್ವಾಮಿ ಪ್ರತಿಕ್ರಿಯಿಸುತ್ತಾ, ಅದೆಲ್ಲ ಸ್ಟಂಟ್ ಅಷ್ಟೇ. ಸುಪ್ರೀಂ ಕೋರ್ಟ್‌ಗೆ ಹೋಗೋದು, ನಮ್ಮ ದುಡ್ಡು, ನಮ್ಮ ತೆರಿಗೆ ನಮ್ಮ ಹಕ್ಕು ಇದೆಲ್ಲ ಡ್ರಾಮ ಬಿಟ್ಟು ಕೆಲಸ ಮಾಡಬೇಕು ಎಂದು ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದರು.