ಬೆಂಗಳೂರು: ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಚಿವ ಜಮೀರ್ ಅಹ್ಮದ್ ಬಹಳ ಸ್ನೇಹಿತರು, ಗಳಸ್ಯ ಕಂಠಸ್ಯ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು. ಸದಾಶಿವನಗರದಲ್ಲಿ ಮಾತನಾಡಿದ ಅವರು, ಹೆಚ್‌ಡಿಕೆ ವಿರುದ್ಧ ಸಚಿವ ಜಮೀರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರಿಬ್ಬರು ಬಹಳ ಸ್ನೇಹಿತರು, ಗಳಸ್ಯ ಕಂಠಸ್ಯ. ಒಬ್ಬರಿಗೊಬ್ಬರು ಪರಸ್ಪರ ಮಾತನಾಡಿಕೊಳ್ಳುವುದು ಹೊಸದೇನಲ್ಲ. ಜಮೀರ್ ಅವರೇ ಹೇಳಿಕೊಂಡಿದ್ದಾರೆ. ನಾನು ಅವರನ್ನು ಕರಿಯಣ್ಣ ಅಂತಿದ್ದೆ. ಅವರು ಕುಳ್ಳ ಅಂತಿದ್ದರು ಅಂತಾ. ಅವರ ಹೇಳಿಕೆಗಳು ವೈಯುಕ್ತಿಕ ವಿಚಾರಗಳು. ಹೀಗಾಗಿ ಹೆಚ್ಚು ಚರ್ಚೆ ಅಗತ್ಯವಿಲ್ಲ ಎಂದರು.
ಮೂರು ಕ್ಷೇತ್ರಗಳ ಉಪಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮ ವರದಿ ಪ್ರಕಾರ ಮೂರು ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕೆಕೆಆರ್ಡಿಬಿಯಲ್ಲಿ ಅಕ್ರಮ ವಿಚಾರವಾಗಿ ಪ್ರತಿಕ್ರಿಯಿಸಿ, ಮೇಲ್ನೋಟಕ್ಕೆ ದುರ್ಬಳಕೆ ಆಗಿರೋದು ಬಂದಿದೆ. ಹಣ ದರ್ಬಳಕೆ ಆಗಿದೆ. ವರ್ಷಕ್ಕೆ ನೂರು ಕೋಟಿಯಂತೆ ದುರ್ಬಳಕೆ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಮೂರು ವರ್ಷಕ್ಕೆ 300 ಕೋಟಿ ಆಗಲಿದೆ. ತನಿಖೆಯ ಬಳಿಕ ಎಲ್ಲವೂ ಗೊತ್ತಾಗಲಿದೆ ಎಂದು ತಿಳಿಸಿದರು.
ಅಸಮರ್ಥ ಸರ್ಕಾರ ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ, ಅದು ಅವರ ಅಭಿಪ್ರಾಯ ಅಷ್ಟೇ. ನಮ್ಮ ಅಭಿಪ್ರಾಯ ಬೇರೆಯೇ ಇದೆ. ನಮ್ಮದು ಸಮರ್ಥ ಸರ್ಕಾರ, ಸಮರ್ಥ ಮುಖ್ಯಮಂತ್ರಿ ಎಂದು ತಿರುಗೇಟು ನೀಡಿದರು.