ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ತಮ್ಮ ಕುಟುಂಬಸ್ಥರಿಗೆ ನಿವೇಶನಗಳ ಬದಲಿ ಹಂಚಿಕೆ ಸಂಬಂಧಿಸಿದಂತೆ ಅಧಿಕಾರ ದುರ್ಬಳಕೆ ಮತ್ತು ಭ್ರಷ್ಟಾಚಾರ ನಡೆಸಿರುವ ಆರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ನಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ಇಂದು ಹೈಕೋರ್ಟ್‌ನಲ್ಲಿ ನಡೆಯಿತು.
ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ವಿಚಾರಣೆ ನಡೆಸಿದರು. ಮುಖ್ಯಮಂತ್ರಿಗಳ ಪರವಾಗಿ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು.
"ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾಗಿದೆ. ಶಾಸನಬದ್ಧ ಆದೇಶಗಳನ್ನು ಉಲ್ಲಂಘಿಸಲಾಗಿದೆ ಮತ್ತು ಸಚಿವ ಸಂಪುಟದ ಸಲಹೆಯನ್ನು ನಿರಾಕರಿಸಲಾಗಿದೆ. ಯಾವ ಕಾರಣಕ್ಕೆ ಅನುಮತಿ ನೀಡಲಾಗಿದೆ ಎಂಬ ಅಂಶವನ್ನು ವಿವರಿಸಿಲ್ಲ. ಈ ಅನುಮತಿ ರಾಜಕೀಯ ದುರುದ್ಧೇಶಗಳಿಂದ ಕೂಡಿದೆ. ರಾಜ್ಯ ಸರ್ಕಾರವನ್ನು ಅಸ್ಥಿರತೆ ಗೊಳಿಸುವ ಉದ್ದೇಶದಿಂದ ಕೂಡಿದೆ" ಎಂದು ಸಿಂಘ್ವಿ ನ್ಯಾಯಪೀಠಕ್ಕೆ ವಿವರಿಸಿದರು.
ಮುಂದುವರೆದು, "ರಾಜ್ಯಪಾಲರು ಸಚಿವ ಸಂಪುಟದ ನಿರ್ಧಾರಕ್ಕೆ ಬದ್ಧರಾಗಿರಬೇಕು. ಆದರೆ, ಎರಡು ಪುಟಗಳ ಸಣ್ಣ ಆದೇಶದಲ್ಲಿ ಒಂದು ಅಂಶವನ್ನು ಪ್ರಾಸಿಕ್ಯೂಷನ್‌ಗೆ ನೀಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಆ ಮೂಲಕ ಜನರಿಂದ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗಿದ್ದಾರೆ" ಎಂದರು.
ಇದಕ್ಕೆ ನ್ಯಾಯಪೀಠ, "ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಪಾತ್ರವಿಲ್ಲವೇ" ಎಂದು ಪ್ರಶ್ನಿಸಿತು. ಇದಕ್ಕೆ ಸಿಂಘ್ವಿ, "ನಿವೇಶನಗಳ ಮರು ಹಂಚಿಕೆ ಮಾಡಿರುವ ಪ್ರಕ್ರಿಯೆ ಈ ಹಿಂದಿನ ಸರ್ಕಾರದಲ್ಲಿ ನಡೆದಿದೆ. ಸಿದ್ದರಾಮಯ್ಯ ವಿರುದ್ದ ಯಾವುದೇ ದಾಖಲೆಗಳು ಕಂಡು ಬಂದಿಲ್ಲ. ಸಿದ್ದರಾಮಯ್ಯ ವಿರುದ್ಧ ಯಾವುದೇ ಪಾತ್ರವಿಲ್ಲ. ಅಲ್ಲದೆ, ಬಿಎನ್‌ಎಸ್‌ಎಸ್ ಸೆಕ್ಷನ್ 218ರ ಅಡಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ. ಆದರೆ, ಈ ಸೆಕ್ಷನ್ ಅಡಿಯಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕಾದಲ್ಲಿ ನಿರ್ದಿಷ್ಟ ಅಪರಾಧವನ್ನು ಒಳಗೊಂಡಿರಬೇಕು. ಅಲ್ಲದೆ, ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ನಡೆದಿರಬೇಕು" ಎಂದು ಹೇಳಿದರು.
"ಅಲ್ಲದೆ, ಶೋಕಾಸ್ ನೋಟಿಸ್ ಜಾರಿ ಮಾಡಿರುವುದು ಅಬ್ರಾಹಂ ನೀಡಿರುವ ಅರ್ಜಿಗೆ ಸಂಬಂಧಿಸಿದ್ದಾಗಿದೆ. ಈ ಕುರಿತ ಸಚಿವ ಸಂಪುಟ ನಿರ್ಣಯ ತೆಗೆದುಕೊಂಡು ಮನವಿಯನ್ನು ತಿರಸ್ಕರಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ. ಜತೆಗೆ, ಇನ್ನಿಬ್ಬರು ನೀಡಿರುವ ಮನವಿಗೆ ಸಂಬಂಧಿಸಿದಂತೆ ಶೋಕಾಸ್ ನೋಟಿಸ್‌ನಲ್ಲಿ ಉಲ್ಲೇಖಿಸಿಲ್ಲ. ಆದರೆ, ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಸಂದರ್ಭದಲ್ಲಿ ಇತರೆ ಇಬ್ಬರು ದೂರುದಾರರಿಗೆ ಅನುಮತಿ ನೀಡಲಾಗಿದೆ. ಅಬ್ರಾಹಂ ದೂರು ಸಲ್ಲಿಸಿದ ದಿನವೇ ರಾಜ್ಯಪಾಲರು ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ, ರಾಜ್ಯಪಾಲರ ಮುಂದೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸುಮಾರು 12 ಅರ್ಜಿಗಳು ಬಾಕಿಯಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ರಾಜಕೀಯ ಉದ್ದೇಶವಾಗಿದೆ" ಎಂದು ವಿವರಿಸಿದರು.
"ಮುಖ್ಯಮಂತ್ರಿಗಳು ಗೈರಾಗಿರುವ ಸಚಿವ ಸಂಪುಟದಲ್ಲಿ ಕಾನೂನು ಬದ್ಧವಾಗಿ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ರಾಜ್ಯಪಾಲರು ಸ್ವತಂತ್ರ್ಯವಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಆದರೆ, ಇದೆಲ್ಲವೂ ಸತ್ಯಕ್ಕೆ ದೂರವಾದ ಅಂಶಗಳಾಗಿವೆ" ಎಂದು ಪೀಠಕ್ಕೆ ವಿವರಿಸಿದರು.