ಬೆಂಗಳೂರು: ಸುಪ್ರೀಂಕೋರ್ಟ್ ನಿರ್ದೇಶನದ ಹೊರತಾಗಿಯೂ ಗೋಕರ್ಣದ ಶ್ರೀಮಹಾಬಲೇಶ್ವರ ದೇವಸ್ಥಾನದ ಆಡಳಿತ ನಿರ್ವಹಣೆಗೆ ರಚಿಸಿದ್ದ ಮೇಲ್ವಿಚಾರಣಾ ಸಮಿತಿಗೆ ನಾಮ ನಿರ್ದೇಶನ ಮಾಡಿದ್ದ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. ಅಲ್ಲದೆ, ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸಿ ಆದೇಶವನ್ನು ಪಡೆದು ಮೇಲ್ವಿಚಾರಣಾ ಸಮಿತಿಯ ಸದಸ್ಯರನ್ನು ನಾಮ ನಿರ್ದೇಶನ ಮಾಡಲು ಸರ್ಕಾರಕ್ಕೆ ಸಂಪೂರ್ಣ ಅಧಿಕಾರವಿರಲಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಮಹಾಬಲೇಶ್ವರ ದೇವಾಲಯದ ಮೇಲ್ವಿಚಾರಣಾ ಸಮಿತಿಯ ಉಪಾಧಿವಂತರು ಹಾಗೂ ಪರಿಣಿತರನ್ನು ಬದಲಾವಣೆ ಮಾಡಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ರಾಮಚಂದ್ರಾಪುರ ಮಠ ಮತ್ತು ಮಠದ ಪೀಠಾಧಿಪತಿಗಳಾದ ರಾಘವೇಶ್ವರ ಭಾರತೀ ಸ್ವಾಮಿಗಳು ಹಾಗೂ ನಾಮ ನಿರ್ದೇಶನದಿಂದ ವಜಾಗೊಂಡಿದ್ದ ಸದಸ್ಯರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ದೇವಾಲಯ ಸಮಿತಿಗೆ ನಾಮ ನಿರ್ದೇಶನ ಮಾಡುವುದಕ್ಕೆ ಸರ್ಕಾರಕ್ಕೆ ಅಧಿಕಾರವಿದ್ದರೂ, ಮೇಲ್ವಿಚಾರಣಾ ಸಮಿತಿ ರಚನೆ ಮಾಡುವ ಸಂಬಂಧ ಸುಪ್ರೀಂಕೋರ್ಟ್ ಮುಂದಿನ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ತಿಳಿಸಿದೆ. ಆದ್ದರಿಂದ ಈ ಹಿಂದೆ ಇದ್ದ ಸಮಿತಿಯ ಸದಸ್ಯರ ಬದಲಾವಣೆ ಮಾಡಬೇಕಾದರೆ ಅದಕ್ಕೂ ಮುನ್ನ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸಿ ಹೊಸ ಸದಸ್ಯರ ನೇಮಕಕ್ಕೆ ಅನುಮತಿ ಪಡೆಯಬೇಕಾಗಿತ್ತು.
ಆದರೆ, ರಾಜ್ಯ ಸರ್ಕಾರ ಈ ಕಾರ್ಯ ಮಾಡದೆ ಇತರೆ ಸದಸ್ಯರನ್ನು ನಾಮ ನಿರ್ದೇಶನ ಮಾಡಿದೆ. ಹೀಗೆ ಮಾಡುವುದಕ್ಕೆ ರಾಜ್ಯ ಸರ್ಕಾರಕ್ಕೆ ಅವಕಾಶವಿಲ್ಲ ಎಂದು ಪೀಠ ತಿಳಿಸಿದೆ. ಅರ್ಜಿದಾರರೇ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಬಹುದಿತ್ತು ಎಂಬ ರಾಜ್ಯ ಸರ್ಕಾರದ ವಾದ ತಳ್ಳಿಹಾಕಿದ ನ್ಯಾಯಪೀಠ, ದೋಷಪೂರಿತ ಆದೇಶವನ್ನು ಅರ್ಜಿದಾರರು ಜಾರಿ ಮಾಡಿಲ್ಲ. ಇದು ಸರ್ಕಾರದಿಂದ ಆಗಿರುವುದಾಗಿದ್ದು, ಸರ್ಕಾರವೇ ಸುಪ್ರೀಂಕೋರ್ಟ್‌ನ ಅನುಮತಿ ಪಡೆಯಬೇಕಾಗಿತ್ತು. ಆದರೆ, ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಆದೇಶವನ್ನು ಮೀರಲು ಪ್ರಯತ್ನ ಮಾಡಿದೆ ಎಂದು ನ್ಯಾಯಪೀಠ ತಿಳಿಸಿದೆ.
ಜತೆಗೆ ಸರ್ಕಾರಗಳು ಬರಬಹುದು, ಹೋಗಬಹುದು ಸಾಂವಿಧಾನಿಕ ನ್ಯಾಯಾಲಯಗಳು ಎಲ್ಲ ಸಮುಯದಲ್ಲಿಯೂ ಕಾರ್ಯನಿರ್ವಹಿಸುತ್ತವೆ. ಸರ್ಕಾರ ಬದಲಾವಣೆಯಾಗಿದೆ ಎಂಬ ಕಾರಣದಿಂದ ಸುಪ್ರೀಂಕೋರ್ಟ್‌ನ ಆದೇಶ ಉಲ್ಲಂಘಿಸುವ ಪ್ರಯತ್ನ ಮಾಡಲಾಗಿದೆ. ಅಲ್ಲದೆ, ಹಿಂದಿನ ಸರ್ಕಾರ ಮಾಡಿದ ನಾಮ ನಿರ್ದೇಶನವನ್ನು ಒಂದು ಆದೇಶದ ಮೂಲಕ ಸಂಪೂರ್ಣವಾಗಿ ರದ್ದುಪಡಿಸುವ ಅಧಿಕಾರ ಹೊಸ ಸರ್ಕಾರಕ್ಕೆ ಇರುವುದಿಲ್ಲ. ಆದರೆ, ಹಿಂದಿನ ಸರ್ಕಾರ ಮಾಡಿರುವ ನಿರ್ಧಾರಗಳು ಕಾನೂನಿಗೆ ವಿರುದ್ಧವಾಗಿವೆ ಎಂಬುದು ಗೊತ್ತಾದಲ್ಲಿ ಮಾತ್ರ ಬದಲಾವಣೆ ಮಾಡಬಹುದು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.