ಬೆಂಗಳೂರು: ಶೈಕ್ಷಣಿಕ ಧನಸಹಾಯಕ್ಕಾಗಿ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಗೆ ಅರ್ಜಿ ಸಲ್ಲಿಸಿರುವ ಎಲ್ಲ ವಿದ್ಯಾರ್ಥಿಗಳಿಗೆ 2021ರ ಅಧಿಸೂಚನೆಯಂತೆ ಬಾಕಿ ಇರುವ ಮೂರು ವರ್ಷಗಳ ಶೈಕ್ಷಣಿಕ ಧನಸಹಾಯ ವಿತರಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿದೆ.
ಕಟ್ಟಡ ಕಾರ್ಮಿಕರ ಮಕ್ಕಳಿಗೆ ಮೀಸಲಾದ ವರ್ಗದಲ್ಲಿ ಶೈಕ್ಷಣಿಕ ಸಹಾಯಧನ ಒದಗಿಸಲು ಕೋರಿ ಕಾರ್ಮಿಕರ ಮಕ್ಕಳಾದ ಎಂ.ಅಮೃತಾ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಕೆ.ಮಹಂತೇಶ್ ಹಾಗೂ ಇತರ ಮೂವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಅಲ್ಲದೇ, ವಿದ್ಯಾರ್ಥಿಗಳು 2020-21, 2021-22 ಹಾಗೂ 2022-23ನೇ ಸಾಲಿನಲ್ಲಿ ಕೋರಿರುವ ಶೈಕ್ಷಣಿಕ ಸಹಾಯಧನವನ್ನು 2021ರ ಅಧಿಸೂಚನೆ ಅನ್ವಯವೇ ಬಿಡುಗಡೆ ಮಾಡಬೇಕು. ಈ ಆದೇಶವನ್ನು ಜಾರಿಗೊಳಿಸಲು ಅಗತ್ಯ ಕ್ರಮವಹಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ.