ಬೆಂಗಳೂರು: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ದದ ಭೂ ಕಬಳಿಕೆ ಆರೋಪದಲ್ಲಿ ವಿಶೇಷ ನ್ಯಾಯಾಲಯ ಜಾರಿ ಮಾಡಿರುವ ಸಮನ್ಸ್ ಮತ್ತು ಪ್ರಕರಣಕ್ಕೆ ಹೈಕೋರ್ಟ್ ಇಂದು ಮಧ್ಯಂತರ ತಡೆ ನೀಡಿತು.
ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಜಾರಿಗೊಳಿಸಿದ್ದ ಸಮನ್ಸ್ ಹಾಗೂ ಪ್ರಕರಣ ರದ್ದುಪಡಿಸುವಂತೆ ಕೋರಿ ಸಚಿವ ಚಲುವರಾಯಸ್ವಾಮಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಅಲ್ಲದೆ, 2024ರ ಮಾ.28ರಂದು ಭೂ ಕಬಳಿಕೆ ಕುರಿತಾದ ವಿಶೇಷ ಕೋರ್ಟ್ ಹೊರಡಿಸಿದ್ದ ಸಮನ್ಸ್‌ಗೆ ಹಾಗೂ ಮುಂದಿನ ವಿಚಾರಣಾ ಪ್ರಕ್ರಿಯೆಗಳಿಗೆ ತಡೆ ನೀಡಿ ವಿಚಾರಣೆಯನ್ನು 2025ರ ಜನವರಿಗೆ ಮುಂದೂಡಿತು.
ಅರ್ಜಿದಾರರ ಪರ ವಾದಿಸಿದ ವಕೀಲ ಸಿದ್ದಾರ್ಥ್ ಮುಚ್ಚಂಡಿ, ಭೂಮಿ 1923ರಿಂದಲೂ ಅಸ್ವಿತ್ವದಲ್ಲಿದ್ದು, ಅದನ್ನು ಮೂಲ ಮಾಲೀಕರು ದೇವಾಲಯಕ್ಕೆ ಗಿಫ್ಟ್ ಡೀಡ್ ಮಾಡಿದ್ದರು. ಆನಂತರ ಆ ಜಮೀನನ್ನು ಸರ್ಕಾರ 1982ರಲ್ಲಿ ತಿಮ್ಮರಾಯಪ್ಪ ಅವರಿಗೆ ಮಂಜೂರು ಮಾಡಿದೆ. ಅವರ ಕಡೆಯಿಂದ ಅರ್ಜಿದಾರರು ಖರೀದಿ ಮಾಡಿದ್ದಾರೆ. ಹಾಗಾಗಿ ಇದರಲ್ಲಿ ಒತ್ತುವರಿ ಪ್ರಶ್ನೆಯೇ ಬರುವುದಿಲ್ಲ ಎಂದರು.
ಅಲ್ಲದೆ, ಕಳೆದ ನೂರು ವರ್ಷಗಳ ದಾಖಲೆಗಳಲ್ಲಿ ಆ ಭೂಮಿ ಕರಾಬು ಅಥವಾ ಕೆರೆ ಪ್ರದೇಶ ಎಂದು ಎಲ್ಲೂ ಉಲ್ಲೇಖವಾಗಿಲ್ಲ. ಇದೀಗ ಏಕಾಏಕಿ ಸರ್ವೆ ಮಾಡಿ ಅದು ಕೆರೆ ಜಾಗ ಎಂದು ಹೇಳಲಾಗುತ್ತಿದೆ. ಆದರೆ ಅದಕ್ಕೆ ಯಾವುದೇ ದಾಖಲೆಗಳಿಲ್ಲ ಎಂದು ವಾದಿಸಿದರು.
ಜೊತೆಗೆ, ಮಂಜೂರಾದ ಭೂಮಿಯನ್ನು ಸರ್ಕಾರ ರದ್ದುಗೊಳಿಸಿಲ್ಲ, ಮಂಜೂರಾತಿ ಹಾಗೆಯೇ ಇದೆ. ಆದ್ದರಿಂದ ಒತ್ತುವರಿ ಪ್ರಶ್ನೆ ಉದ್ಭವಿಸುವುದಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯಿದೆ ಅನ್ವಯಿಸಿರುವುದೇ ಕಾನೂನುಬಾಹಿರ ಕ್ರಮವಾಗಿದೆ. ಆದ್ದರಿಂದ ವಿಚಾರಣೆ ಮತ್ತು ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಜಾರಿಗೊಳಿಸಿದ್ದ ಸಮನ್ಸ್ ರದ್ದುಗೊಳಿಸಬೇಕು ಎಂದು ನ್ಯಾಯಾಲಯವನ್ನು ಕೋರಿದ್ದರು.
ಪ್ರಕರಣದ ಹಿನ್ನೆಲೆ: 1923ರಲ್ಲಿ ದಾಸನಪುರ ಹೋಬಳಿಯ ಮಾಕಳಿ ಗ್ರಾಮದ ಸರ್ವೆ ನಂಬರ್ 13ರಲ್ಲಿದ್ದ 3ಎಕರೆ 13 ಗುಂಟೆ ಭೂಮಿಯನ್ನು ಮೂಲ ಮಾಲೀಕರಾದ ಗೌಡಯ್ಯ ಆಂಜನೇಯ ದೇವಾಲಯಕ್ಕೆ ಕೊಡುಗಡೆಯಾಗಿ ಕೊಟ್ಟಿದ್ದರು. 1982ರಲ್ಲಿ ದೇವಾಲಯದ ಹೆಸರಿನಲ್ಲಿಆ ಜಾಗ ನೋಂದಣಿ ಮಾಡಿಕೊಡುವಂತೆ ಭೂ ನ್ಯಾಯಮಂಡಳಿ ಆದೇಶ ನೀಡಿತ್ತು.
2023ರ ಸೆ.23ರಂದು ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯ ಸ್ವಯಂಪ್ರೇರಿತವಾಗಿ ಈ ಬಗ್ಗೆ ದೂರು ದಾಖಲಿಸಿಕೊಂಡು ಪರಿಶೀಲಿಸಿ ವರದಿ ನೀಡುವಂತೆ ತಹಸೀಲ್ದಾರ್‌ಗೆ ನಿರ್ದೇಶನ ನೀಡಿತ್ತು. ಆನಂತರ ಸರ್ವೇ ನಡೆಸಿ ಸುಮಾರು 9 ಗುಂಟೆ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ವರದಿ ಸಲ್ಲಿಸಲಾಗಿತ್ತು. ಅದನ್ನು ಆಧರಿಸಿ ವಿಶೇಷ ನ್ಯಾಯಾಲಯ ಅರ್ಜಿದಾರರಿಗೆ ಸಮನ್ಸ್ ಜಾರಿಗೊಳಿಸಿತ್ತು. ಇದನ್ನು ಪ್ರಶ್ನಿಸಿ ಚಲುವರಾಯಸ್ವಾಮಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ:ಸಾವರ್ಕರ್ ವಿರುದ್ಧ ಮಾನಹಾನಿ ಹೇಳಿಕೆ: ರಾಹುಲ್ ಗಾಂಧಿಗೆ ನಾಸಿಕ್ ಕೋರ್ಟ್ ಸಮನ್ಸ್ - Rahul Gandhi