ದಾವಣಗೆರೆ: 20 ವರ್ಷಗಳ ಹಿಂದೆ ಸಾಕಷ್ಟು ವಿರೋಧದ ನಡುವೆ ಸ್ಥಾಪಿಸಿದ್ದ ಘನತ್ಯಾಜ್ಯ ಸಂಸ್ಕರಣೆ ಹಾಗೂ ವಿಲೇವಾರಿ ಘಟಕ ಇದೀಗ ಗ್ರಾಮದ ಜನರ ಆರೋಗ್ಯ ಕೆಡಿಸುತ್ತಿದೆ. ಈ ಘಟಕ ಅಪಾಯಕಾರಿ ಹೊಗೆ ಹೊರಸೂಸುತ್ತಿದ್ದು ದಾವಣಗೆರೆ ತಾಲೂಕಿನ ಅವರಗೋಳ ಗ್ರಾಮಸ್ಥರ ಪ್ರಾಣಕ್ಕೆ ಸಂಚಕಾರ ಎದುರಾಗಿದೆ.
ತ್ಯಾಜ್ಯದಿಂದ ಬರುವ ದಟ್ಟ ಹೊಗೆ ವಿವಿಧ ಬೆಳೆಗಳ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಗ್ರಾಮದಿಂದ ಅರ್ಧ ಕಿ.ಮೀ ದೂರದಲ್ಲಿರುವ ಘಟಕಕ್ಕೆ ನಿತ್ಯ ಬೆಂಕಿ ಆವರಿಸಿಕೊಳ್ಳುತ್ತಿದೆ. ಘಟಕದಲ್ಲಿ ಬೃಹತ್ ಕಸದ ರಾಶಿಯನ್ನು ಗುಡ್ಡದಂತೆ ಶೇಖರಿಸಲಾಗುತ್ತಿದೆ. ಈ ಘಟಕವನ್ನು ಸ್ಥಳಾಂತರಿಸಿ ಎಂದು ಇಲ್ಲಿನ ಜನರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹೊಗೆಯಿಂದಾಗಿ ಅಕ್ಕಪಕ್ಕ ಜಮೀನುಗಳಲ್ಲಿ ಬೆಳೆದಿರುವ ಭತ್ತ, ಅಡಿಕೆ, ತೆಂಗು ಬೆಳೆ ಹಾನಿಯಾಗುತ್ತಿದೆ ಎಂದು ರೈತರು ತಿಳಿಸಿದ್ದಾರೆ.
"ಇಪ್ಪತ್ತು ವರ್ಷಗಳಿಂದ ಈ ಘಟಕದಲ್ಲಿ ತ್ಯಾಜ್ಯ ವಿಲೇವಾರಿ ಆಗುತ್ತಿದ್ದು, ಅಪಾಯಕಾರಿ ತ್ಯಾಜ್ಯ ತಂದು ಗುಡ್ಡದ ರೀತಿ ಡಂಪ್ ಮಾಡುತ್ತಿದ್ದಾರೆ. ಮೂಡುಗಾಳಿ ಎದ್ದರೆ ನಮ್ಮ ಗ್ರಾಮ ಉಳಿಯಲ್ಲ, ಅಧಿಕಾರಿಗಳು ಮಡ್ ಕ್ಯಾಪಿಂಗ್ ಮಾಡಿಸುತ್ತೇವೆ ಎಂದರೂ ಯಾರೂ ಇತ್ತ ಬಂದಿಲ್ಲ. ಪುಟ್ಟ ಮಕ್ಕಳಿಗೆ ಉಸಿರಾಟದ ತೊಂದರೆ, ಅಸ್ತಮಾ ಖಾಯಿಲೆ ಬಾಧಿಸುವ ಅಪಾಯವಿದೆ. ರೈತರ ಜಮೀನುಗಳಲ್ಲಿರುವ ತೆಂಗಿನ ಮರಗಳು ಸುಟ್ಟುಹೋಗಿವೆ. ಬೆಂಕಿಯ ಬೂದಿ ಭತ್ತದ ಗದ್ದೆಗಳಿಗೆ ಹರಡಿ ಹೂವಾಡುವ ಬೆಳೆ ಮೇಲೆ ಬಿದ್ದು ಕಾಳುಕಟ್ಟದ ಪರಿಸ್ಥಿತಿ ಇದೆ" ಎಂದು ಗ್ರಾಮದ ಮುಖಂಡ ಬಿ.ಎಂ.ಷಣ್ಮುಖಯ್ಯ ಆಕ್ರೋಶ ವ್ಯಕ್ತಪಡಿಸಿದರು.