ಹಾವೇರಿ:ಉತ್ತರ ಕರ್ನಾಟಕದ ಪ್ರಮುಖ ಜಾತ್ರೆ ಮತ್ತು ಆರಂಭಿಕ ಜಾತ್ರೆ ಎಂದು ಕರೆಸಿಕೊಳ್ಳುವ ಹಾವೇರಿ ಹುಕ್ಕೇರಿ ಮಠದ ಜಾತ್ರೆ ವಿಜೃಂಭಣಿಯಿಂದ ನಡೆಯಿತು. ಜಾತ್ರಾ ಮಹೋತ್ಸವದ ಅಂಗವಾಗಿ ಲಿಂಗೈಕ್ಯ ಶಿವಬಸವಶ್ರೀ ಮತ್ತು ಶ್ರೀ ಶಿವಲಿಂಗಶ್ರೀ ಭಾವಚಿತ್ರದ ಮೆರವಣಿಗೆಯ ಉತ್ಸವ ನಡೆಸಲಾಯಿತು. ಉತ್ಸವದ ಮೆರವಣಿಗಿಗೆ ಹುಕ್ಕೇರಿಮಠದ ಸದಾಶಿವ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು ಚಾಲನೆ ನೀಡಿದರು.
ಮಠದಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗಿಯಲ್ಲಿ ಪಾಲ್ಗೊಂಡ ವಿವಿಧ ಕಲಾತಂಡಗಳು ತಮ್ಮ ಕಲಾಪ್ರದರ್ಶನ ಮಾಡುವ ಮೂಲಕ ಗಮನಸೆಳೆದವು. ನಂದಿಕುಣಿತ, ಮಹಿಳೆಯರ ಡೊಳ್ಳುಕುಣಿತ, ಜಾಂಜಮೇಳ, ಪುರವಂತಿಕೆ ಮೇಳಗಳು ಗಮನಸೆಳೆದವು. ಉಡುಪಿಯಿಂದ ಆಗಮಿಸಿದ್ದ ಹುಲಿವೇಷಧಾರಿಗಳ ಕುಣಿತ ನೋಡುಗರ ಮೆಚ್ಚುಗಿಗೆ ಪಾತ್ರವಾಯಿತು.
ಹುಕ್ಕೇರಿಮಠದಿಂದ ಆರಂಭವಾದ ಭಾವಚಿತ್ರಗಳ ಮೆರವಣಿಗೆ ಮೇಲಿನಪೇಟೆ, ಹಳೇಊರು, ದೇಸಾಯಿಗಲ್ಲಿ, ಬಸ್ತಿಬಾವಿ ಸೇರಿದಂತೆ ಹಾವೇರಿ ನಗರದ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಸಂಚರಿಸಿತು. ಉತ್ಸವದಲ್ಲಿ ಲಿಂಗೈಕ್ಯ ಶಿವಬಸವ ಮತ್ತು ಶಿವಲಿಂಗ ಶ್ರೀಗಳ ಭಾವಚಿತ್ರಕ್ಕೆ ಭಕ್ತರು ನಮನ ಸಲ್ಲಿಸಿದರು. ಇಷ್ಟದ ದೈವಕ್ಕೆ ಹಣ್ಣುಕಾಯಿ ಒಡೆದು ಕರ್ಪೂರ ಬೆಳಗಿ, ಆರತಿ ಬೆಳಗಿ ಪೂಜೆ ಸಲ್ಲಿಸಿದರು. ಭಾವಚಿತ್ರದ ಮೆರವಣಿಗೆಯಲ್ಲಿ ಮಕ್ಕಳಿಗೆ ಹಾಕಿದ್ದ ಬಸವೇಶ್ವರ, ಅಕ್ಕಮಹಾದೇವಿ, ಸ್ವಾಮಿ ವಿವೇಕಾನಂದ ಮತ್ತು ಸರ್ವಜ್ಞರ ವೇಷಭೂಷಣಗಳು ಗಮನಸೆಳೆದವು.