ದೇವಗಿರಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರಕ್ಕೆ ಡಿಜಿಟಲ್ ಸ್ಪರ್ಶ ಹಾವೇರಿ:ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳಿಗೆ ಮೊದಲು ಅಕ್ಷರ ಕಲಿಕೆ ಶುರುವಾಗುವುದು ಅಂಗನವಾಡಿ ಕೇಂದ್ರಗಳಿಂದ. ಹಾಗಾಗಿ ಅಂಗನವಾಡಿ ಎಲ್ ಕೆ ಜಿ ಮತ್ತು ಯುಕೆಜಿ ತರಗತಿಗಳು ಚಿಣ್ಣರನ್ನು ಸೆಳೆಯುವಂತಿರಬೇಕು. ಆದರೆ ರಾಜ್ಯದಲ್ಲಿ ಹಲವು ಗ್ರಾಮಗಳಲ್ಲಿ ಬಹುತೇಕ ಅಂಗನವಾಡಿಗಳಿಗೆ ಕಟ್ಟಡಗಳಿಲ್ಲ, ಬಾಡಿಗೆ ಮನೆ, ಶಿಥಿಲಾವಸ್ಥೆಯ ಕಟ್ಟಡಗಳಲ್ಲಿ, ಕೆಲವು ಕಡೆ ದೇವಸ್ಥಾನಗಳಲ್ಲಿ ಕಲಿಸುವ ಪರಿಸ್ಥಿತಿಯೂ ಇದೆ.
ಕಟ್ಟಡವಿದ್ದರೂ, ಮಕ್ಕಳ ಕಲಿಕೆಗೆ ಸಮರ್ಪಕ ಪರಿಕರ ಇರುವುದಿಲ್ಲ. ಹೀಗಾಗಿ ರಾಜ್ಯದ ವಿವಿಧ ಕಡೆಯ ಅಂಗನವಾಡಿ ಅವ್ಯವಸ್ಥೆಯ ಸ್ಥಿತಿ ನೋಡಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳತ್ತ ಸೇರಿಸುತ್ತಿರುವುದನ್ನು ಕೇಳಿದ್ದೇವೆ. ಆದ್ರೆ ಹಾವೇರಿ ತಾಲೂಕು ದೇವಗಿರಿ ಗ್ರಾಮದಲ್ಲಿ ಆರು ಅಂಗನವಾಡಿಗಳಿಗೆ ಅಮೃತ ಯೋಜನೆಯಡಿ ಗ್ರಾಮ ಪಂಚಾಯತ್ನಿಂದ ಡಿಜಿಟಲ್ ಸ್ಪರ್ಶ ನೀಡಿದ್ದು, ಮಕ್ಕಳ ಕಲಿಕೆಗೆ ಆಕರ್ಷಣೀಯ ಕೇಂದ್ರಗಳಾಗಿ ಬದಲಾಗಿವೆ. ದಿನದಿಂದ ದಿನಕ್ಕೆ ಮಕ್ಕಳ ಹಾಜರಾತಿ ಸಂಖ್ಯೆಯೂ ಏರುತ್ತಿದೆ.
ದೇವಗಿರಿ ಗ್ರಾಮಕ್ಕೆ ಕಾಲಿಟ್ಟರೆ ಸಾಕು, ಮೊದಲು ನಿಮ್ಮನ್ನು ವಿವಿಧ ಚಿತ್ರ, ಬಣ್ಣದಲ್ಲಿ ಕಂಗೊಳಿಸುವ ಸುಂದರ ಅಂಗನವಾಡಿ ಕಟ್ಟಡಗಳು ಗಮನಸೆಳೆಯುತ್ತಿವೆ. ಈ ಗ್ರಾಮದಲ್ಲಿನ ಬಹುತೇಕ ಅಂಗನವಾಡಿ ಕೇಂದ್ರಗಳ ಚಿತ್ರಣವೇ ಈಗ ಬದಲಾಗಿದೆ.
ಮೊದಲು ಏಳು ಅಂಗನವಾಡಿ ಕೇಂದ್ರಗಳಿಗೆ ಡಿಜಿಟಲ್ ಸ್ಪರ್ಶ:ಈ ಮೊದಲು ಅಂಗನವಾಡಿ ಕೇಂದ್ರಗಳು ಹಾಳಾಗಿರುವುದನ್ನುಅರಿತ ದೇವಗಿರಿ ಗ್ರಾ.ಪಂ ಪಿಡಿಒ ಸುನಿತಾ ಗರಡಿ ಅವರು 11 ಅಂಗನವಾಡಿ ಕಟ್ಟಡಗಳಲ್ಲಿ 7 ಅಂಗನವಾಡಿ ಕೇಂದ್ರಗಳಿಗೆ ಡಿಜಿಟಲ್ ಸ್ಪರ್ಶ ನೀಡಿ, ಮಾದರಿ ಅಂಗನವಾಡಿ ಶಾಲೆಗಳನ್ನಾಗಿ ನಿರ್ಮಿಸಿದ್ದಾರೆ.
ಅಮೃತ ಯೋಜನೆಯಡಿ ಏಳು ಅಂಗನವಾಡಿಗಳಿಗೆ ಸುಮಾರು 12 ಲಕ್ಷ ರೂಪಾಯಿ ಖರ್ಚು ಮಾಡಿದ್ದು, ಅಂಗನವಾಡಿ ಕೇಂದ್ರಗಳನ್ನು ಚಿಣ್ಣರಿಗೆ ಆಕರ್ಷಣೀಯವಾಗಿ ನಿರ್ಮಿಸಲಾಗಿದೆ. ಡಿಜಿಟಲ್ ಅಂಗನವಾಡಿ ಶಿಸ್ತುಬದ್ಧ ಆಗಿದ್ದು, ಚಿಣ್ಣರನ್ನು ಕೈಬೀಸಿ ಕರೆಯುತ್ತಿವೆ.
ಈ ಅಂಗನವಾಡಿಗಳಿಗೆ ಆಗಮಿಸುವ ಮಕ್ಕಳಿಗೆ ಯುನಿಫಾರ್ಮ ಸಹ ನೀಡಲಾಗಿದೆ. ಮಕ್ಕಳು ಕುಳಿತುಕೊಳ್ಳಲು ಡೆಸ್ಕ್, ಆಟವಾಡಲು ವಿವಿಧ ಕ್ರೀಡಾ ಪರಿಕರಗಳು, ಅಂಗನವಾಡಿಗೆ ಬರುವ ಪ್ರತಿ ವಿದ್ಯಾರ್ಥಿಗೆ ಐಡಿ ನೀಡಲಾಗಿದೆ.
ಅಕ್ಷರ, ಕಥೆ ಚಿತ್ರದಲ್ಲಿ ಕಂಗೊಳಿಸಿದ ಗೋಡೆಗಳು: ಅಂಗನವಾಡಿ ಕಂಪೌಂಡ್ ಗೋಡೆ, ಅಂಗನವಾಡಿ ಕಟ್ಟಡದ ಒಳಾಂಗಣ ಹೊರಾಂಗಣದಲ್ಲಿ ವಿವಿಧ ಕಲಿಕೆ, ಕಥೆಯ ಚಿತ್ರಗಳನ್ನು ಕಲರ್ ಫುಲ್ ರಚಿಸಲಾಗಿದೆ. ಅಂಗನವಾಡಿ ಕಟ್ಟಡದ ಒಂದಿಂಚು ಜಾಗ ಖಾಲಿ ಬಿಡದ ಮಕ್ಕಳನ್ನು ಆಕರ್ಷಿಸುವಂತೆ ಬಣ್ಣ ಬಳೆಯಲಾಗಿದೆ. ವಾರದ ದಿನಗಳು, ತಿಂಗಳುಗಳನ್ನು ಇಂಗ್ಲೀಷ್, ಕನ್ನಡದಲ್ಲಿ ಬರೆಯಲಾಗಿದೆ. ಪ್ರಾಣಿಗಳ ಚಿತ್ರಗಳು, ತರಕಾರಿ ಹಣ್ಣುಗಳ ಚಿತ್ರಗಳು ಬಣ್ಣದಲ್ಲಿ ರಚನೆಯಾಗಿದ್ದು, ಕಂಗೊಳಿಸುತ್ತಿವೆ.
ಮಕ್ಕಳನ್ನು ಸೆಳೆದ ಆಟೋಪಕರಣಗಳು: ಮಕ್ಕಳಿಗೆ ಹುಲ್ಲುಹಾಸಿನ ಚಿಕ್ಕದಾದ ಕ್ರೀಡಾಂಗಣ ಮಾಡಿದ್ದು ಜೋಕಾಲಿ, ಜಾರುಗುಂಡಿಗಳು ಸೇರಿದಂತೆ ವಿವಿಧ ಆಟೋಪಕರಣಗಳು ಮಕ್ಕಳನ್ನು ವಿವಿಧ ಆಟಗಳತ್ತ ಆಕರ್ಷಿಸುತ್ತಿವೆ. ಅಂಗನವಾಡಿ ಕೇಂದ್ರಗಳಲ್ಲಿ ಚಿಣ್ಣರ ಸ್ನೇಹಿ ಕಟ್ಟಡಗಳು, ಚಿಣ್ಣರ ಸ್ನೇಹಿ ಬರಹಗಳು, ಹುಲ್ಲುಹಾಸಿನ ಚಿಕ್ಕ ಮೈದಾನಗಳನ್ನು ಚಿಣ್ಣರಿಗಾಗಿ ನಿರ್ಮಿಸಲಾಗಿದೆ. ಗ್ರಾಮದ ಮಕ್ಕಳಿಗೆ ಡಿಜಿಟಲ್ ಶಿಕ್ಷಣ ನೀಡುವ ದೃಷ್ಟಿಯಲ್ಲಿ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಅಂಗನವಾಡಿಗಳಲ್ಲಿ ಅಂದವಾದ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಪಿಡಿಒ ಸುನೀತಾ ಗರಡಿ ಈಟಿವಿ ಭಾರತ್ಗೆ ಮಾಹಿತಿ ನೀಡಿದ್ದಾರೆ
ಪ್ರತಿ ಕೇಂದ್ರದಲ್ಲಿಯೂ ದೊಡ್ಡ ಪರದೆಯ ಟಿವಿ:ಇನ್ನು ಅಂಗನವಾಡಿ ಮಕ್ಕಳಿಗಾಗಿ ಪ್ರತಿ ಕೇಂದ್ರದಲ್ಲಿ ದೊಡ್ಡ ಪರದೆಯ ಟಿವಿ ಇಡಲಾಗಿದೆ. ಇಲ್ಲಿ ಮಕ್ಕಳಿಗೆ ಕಥೆ, ಗಣಿತದ ಲೆಕ್ಕಗಳನ್ನು ಕಥೆಗಳ ಮೂಲಕ ತಿಳಿಸಲಾಗುತ್ತದೆ. ಅಂಗನವಾಡಿ ಕೇಂದ್ರಗಳಲ್ಲಿನ ಸ್ವಚ್ಛತೆ ಕೇಂದ್ರಗಳ ಅಂದವನ್ನು ಹೆಚ್ಚಿಸಿವೆ. ಅಂಗನವಾಡಿ ಕೇಂದ್ರಗಳನ್ನ ಡಿಜಿಟಲ್ ಮಾಡಿದ ನಂತರ ಮಕ್ಕಳ ಹಾಜರಾತಿ ಸಹ ಅಧಿಕವಾಗಿದೆ ಎಂದು ಪಿಡಿಒ ತಿಳಿಸಿದ್ದಾರೆ.
ಅಂಗನವಾಡಿಗಳ ಅಭಿವೃದ್ಧಿಗೆ ಪೋಷಕರು ಸಂತಸ:ಪೋಷಕರಾದ ಪುಷ್ಪಾ ಮಾತನಾಡಿ,ದೇವಗಿರಿ ಗ್ರಾಮ ಪಂಚಾಯತ್ ಕಾರ್ಯದಿಂದ ಮಕ್ಕಳ ಪಾಲಕರಿಗೆ ಸಂತಸ ತಂದಿದೆ. ಈ ರೀತಿ ಅಂಗನವಾಡಿ ಡಿಜಿಟಲ್ ಆದ ಮೇಲೆ ಮಕ್ಕಳಿಗೆ ಕಲಿಯುವ ಆಸಕ್ತಿ ಹೆಚ್ಚಾಗಿದೆ. ಮಕ್ಕಳನ್ನು ಮನೆಯಿಂದ ಅಂಗನವಾಡಿ ಕೇಂದ್ರಗಳಿಗೆ ಕರೆತರುವುದು ದೊಡ್ಡ ಸವಾಲು ಆಗಿತ್ತು. ಆದರೆ ಅಂಗನವಾಡಿಗಳು ಡಿಜಿಟಲ್ ಆದ ಮೇಲೆ ಈ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ.
ದೇವಗಿರಿ ಗ್ರಾಪಂ ಆಡಳಿತವು ಏಳು ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ಧಿ ಮಾಡಿ ಡಿಜಿಟಲ್ ಸ್ಪರ್ಶ ನೀಡಿದ್ದರಿಂದ ಮಕ್ಕಳ ಕಲಿಕೆಯಲ್ಲಿ ಸುಧಾರಣೆಯಾಗಿದೆ. ಅಂಗನವಾಡಿ ಕಟ್ಟಡಗಳನ್ನ ಕಲರ್‌ಫುಲ್ ಮಾಡಿರುವದಕ್ಕೆ ಮಕ್ಕಳು ಅಂಗನವಾಡಿಗಳಲ್ಲಿ ಹಿಂದಿನಕ್ಕಿಂತ ಹೆಚ್ಚುಕಾಲ ಕಳೆಯಲು ಇಷ್ಟಪಡುತ್ತಾರೆ. ಕಲಿಕೆಯಲ್ಲಿ ಮಕ್ಕಳು ಹೆಚ್ಚು ಆಸಕ್ತಿ ತೋರುತ್ತಿರುವುದಕ್ಕೆ ನಮಗೆ ಖುಷಿ ತಂದಿದೆ ಎನ್ನುತ್ತಾರೆ ಪೋಷಕರು.
ಇದನ್ನೂಓದಿ:ಆನಂದ್ ತೆಲ್ತುಂಬಡೆ, ಡಾ. ಎನ್. ಜಿ ಮಹದೇವಪ್ಪಗೆ ಬಸವ ರಾಷ್ಟ್ರೀಯ ಪುರಸ್ಕಾರ