ಹಾವೇರಿ:ರಾಜ್ಯಮಟ್ಟದ ಹೋರಿ ಬೆದರಿಸುವ ಸ್ವರ್ಧೆಯಲ್ಲಿ ಹೋರಿ ತಿವಿದು ಓರ್ವ ಯುವಕನೊಬ್ಬನು ಸಾವಿಗೀಡಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಹಿರೇಕೆರೂರು ತಾಲೂಕು ಹಂಸಭಾವಿ ಹೊರವಲಯದ ಕೆರೆಯ ಜಾಗದಲ್ಲಿ ಸೋಮವಾರ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತ ಯುವಕನನ್ನು ಮಂಜಪ್ಪ ಚನ್ನಪ್ಪನವರ (38) ಎಂದು ಗುರುತಿಸಲಾಗಿದೆ.
ಮೃತನು ಅರಳೀಕಟ್ಟಿ ಗ್ರಾಮದ ನಿವಾಸಿಯಾಗಿದ್ದು ಸ್ಪರ್ಧೆಯಲ್ಲಿ ಹೋರಿ ತಿವಿದು ತೀವ್ರವಾಗಿ ಗಾಯಗೊಂಡಿದ್ದ. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಇನ್ನಿಬ್ಬರಿಗೆ ಗಂಭೀರ ಗಾಯವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತದೆ.
ಸ್ಪರ್ಧೆಯಲ್ಲಿ ಸುಮಾರು 10 ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಹಂಸಭಾವಿ ಪೊಲೀಸರು ಹೋರಿ ಬೆದರಿಸುವ ಹಬ್ಬವನ್ನು ಬಂದ್ ಮಾಡಿಸಿದ್ದಾರೆ. ಹಂಸಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಹಂಸಭಾವಿ ಗ್ರಾಮದ ಕೆರೆಯ ಅಂಗಳದಲ್ಲಿ ಎಂಟು ದಿನಗಳವರೆಗೆ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ 80 ಸಾವಿರ ರೂಪಾಯಿ ಮೌಲ್ಯದ ಹೆಚ್ಎಫ್ ತಳಿಯ ಹಸು, 6 ಜನರಿಗೆ ಬೈಕ್ ಸೇರಿದಂತೆ 20 ಟಿವಿ, 20 ಫ್ರಿಡ್ಜ್, 40 ತಿಜೂರಿ, 40 ದಿವಾನ್ ಕಾಟ್, 20 ಮೇಕಪ್ ಟೇಬಲ್ ಸೇರಿದಂತೆ 176 ಬಹುಮಾನಗಳನ್ನು ಘೋಷಣೆ ಮಾಡಲಾಗಿತ್ತು. ಆದ್ರೆ ಮೊದಲ ದಿನವೇ ದುರ್ಘಟನೆ ನಡೆದಿದ್ದರಿಂದ ಸ್ಪರ್ಧೆಯನ್ನು ಸ್ಥಗಿತಗೊಳಿಸಲಾಗಿದೆ.
ಇದನ್ನೂಓದಿ:ಕೌಟುಂಬಿಕ ಕಲಹ, ಸಾಲಬಾಧೆ: ಇಬ್ಬರು ಆತ್ಮಹತ್ಯೆ, ಮಗನನ್ನು ರಕ್ಷಿಸಲು ಹೋದ ತಾಯಿಯೂ ಸಾವು