ಹಾವೇರಿ:ದ್ವಿಚಕ್ರವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಜೊತೆಗೆ ಪ್ರಯಾಣದ ವೇಳೆ ಮಕ್ಕಳನ್ನ ಅಪಾಯದಿಂದ ಪಾರು ಮಾಡಲು ಸುರಕ್ಷತಾ ಸಾಮಗ್ರಿ ಬಳಕೆ ಕುರಿತು ಹಾವೇರಿ ರಸ್ತೆ ಸುರಕ್ಷತಾ ಸಮಿತಿಯಿಂದ ರಾಜ್ಯದಲ್ಲಿ ಪ್ರಥಮ ಬಾರಿಗೆ ಅರಿವು ಕಾರ್ಯಕ್ರಮ ಆಯೋಜಿಸಲಾಯಿತು.
ನಗರದ ವಾಲ್ಮಿಕಿ ವೃತ್ತದಲ್ಲಿ ನಡೆದ ಅರಿವು ಕಾರ್ಯಕ್ರಮಕ್ಕೆ ಹಾವೇರಿ ಜಿಲ್ಲಾಧಿಕಾರಿ ರಘುನಂದನಮೂರ್ತಿ ಚಾಲನೆ ನೀಡಿದರು. ನಂತರ ಪ್ರಾದೇಶಿಕ ಸಾರಿಗೆ ಇಲಾಖೆ ನಿರ್ದೇಶಕ ವಸೀಂಬಾಬಾ ಬೈಕ್ ಸವಾರರಿಗೆ ಮಕ್ಕಳಿಗೆ ಸುರಕ್ಷತಾ ಸಾಮಗ್ರಿಗಳ ಬಳಕೆ ಕುರಿತಂತೆ ಪ್ರಾತ್ಯಕ್ಷಿಕೆ ನೀಡಿದರು.
''ಸವಾರರು ಬೈಕ್ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸಬೇಕು. ಇನ್ನು ಚಿಕ್ಕಮಕ್ಕಳನ್ನು ಸೀಟಿನಲ್ಲಿ ಅಥವಾ ಕಂಕುಳಲ್ಲಿ ಕುರಿಸಿಕೊಂಡು ಪ್ರಯಾಣ ಮಾಡುತ್ತಾರೆ. ಈ ರೀತಿ ಸಂಚರಿಸುವ ವೇಳೆ ಮಕ್ಕಳು ನಿದ್ದೆಗೆ ಜಾರುತ್ತಾರೆ. ಮಕ್ಕಳು ಬೈಕ್‌ಗಳಿಂದ ಕೆಳಗೆ ಬೀಳದಂತೆ ತಡೆಯಲು ಹೋಗಿ ಬೈಕ್ ಅಪಘಾತಗಳಾದ ಉದಾಹರಣೆಗಳು ಅನೇಕ ಇವೆ. ಮಕ್ಕಳ ಸುರಕ್ಷತಾ ಸಾಮಗ್ರಿ ಪರಿಚಯಿಸಲಾಗುತ್ತಿದೆ'' ಎಂದು ಹಾವೇರಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಂಬಾಬಾ ತಿಳಿಸಿದರು.
''ಹಾವೇರಿ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ರಸ್ತೆ ಅಪಘಾತಗಳ ಸಂಖ್ಯೆ ಅಧಿಕವಾಗುತ್ತಿವೆ. ರಸ್ತೆ ಅಪಘಾತಗಳಲ್ಲಿ ಶೇ. 85 ರಷ್ಟು ಪಾಲು ದ್ವಿಚಕ್ರವಾಹನ ಸವಾರರಿಗೆ ಸಂಬಂಧಿಸಿದವು ಇರುತ್ತವೆ. ಕೆಲವೊಮ್ಮೆ ದ್ವಿಚಕ್ರವಾಹನ ಸವಾರರು ಹೆಲ್ಮೆಟ್ ಹಾಕಿದ್ದರೂ ಚಿಕ್ಕಮಕ್ಕಳನ್ನು ಕರೆದೊಯ್ಯುವಾಗ ಯಾವುದೇ ರೀತಿಯ ಸುರಕ್ಷತಾ ಸಾಮಗ್ರಿಗಳನ್ನು ಬಳಕೆ ಮಾಡುವುದಿಲ್ಲ. ಈ ರೀತಿಯಾದಾಗ ಹೆಚ್ಚಿನ ಅನಾಹುತಗಳು ಸಂಭವಿಸುತ್ತವೆ. ಇದನ್ನು ತಡೆಯಲು ಮಕ್ಕಳ ಸುರಕ್ಷತಾ ಸಾಮಗ್ರಿ ಬಳಕೆ ಮಾಡಬೇಕಿದೆ'' ಎಂದು ವಸೀಂಬಾಬಾ ಸಲಹೆ ನೀಡಿದರು.