ಮೈಸೂರು:"ಮುಡಾ 50:50 ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬಕ್ಕೆ ಕ್ಲೀನ್ ಚಿಟ್ ನೀಡಲು ಲೋಕಾಯುಕ್ತ ಯಾರು? ಲೋಕಾಯುಕ್ತ ಡಿಜಿ ಹಾಗೂ ಪೊಲೀಸರನ್ನು ನೇಮಕ ಮಾಡುವುದು ಸರ್ಕಾರಗಳು. ಹೀಗೆ ಅಧಿಕಾರಕ್ಕೆ ಬಂದ ಅಧಿಕಾರಿಗಳು ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಾರೆ. 5 ಸಾವಿರ ಕೋಟಿಗೂ ಮೀರಿ ಮುಡಾದಲ್ಲಿ ಅಕ್ರಮ ನಡೆದಿದೆ. ಲೋಕಾಯುಕ್ತ ಪಾರದರ್ಶಕವಾಗಿ ತನಿಖೆ ಮಾಡಿಲ್ಲ" ಎಂದು ವಿಧಾನಪರಿಸತ್ ಸದಸ್ಯ ಹೆಚ್.ವಿಶ್ವನಾಥ್ ಆರೋಪಿಸಿದರು.
ಮೈಸೂರು ಟೌನ್ ಹಾಲ್ ಬಳಿ ಮಾದ್ಯಮದ ಜೊತೆಗೆ ಮಾತನಾಡಿದ ಅವರು, "ಸಿಎಂ ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ನಡೆಸುವಾಗ ಹಿಂದಿನಿಂದ ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್ 62 ಕೋಟಿ ಬರಬೇಕು ಎಂದು ಸಿದ್ದರಾಮಯ್ಯನವರಿಗೆ ಹೇಳಿಕೊಡ್ತಾರೆ. ಅದನ್ನು ಯಾಕೆ ಗಮನಿಸುತ್ತಿಲ್ಲ ಲೋಕಾಯುಕ್ತ? ಇವೆಲ್ಲವುಗಳಿಂದ ಸಿದ್ದರಾಮಯ್ಯ ಪಾತ್ರವಿರುವುದು ಗೊತ್ತಾಗುತ್ತದೆ ಎಂದು ಹೇಳಿದರು.
ದರೋಡೆಗಳು, ಮೈಕ್ರೋ ಫೈನಾನ್ಸ್ ಹಾವಳಿ ನೋಡಿದರೆ ರಾಜ್ಯದಲ್ಲಿ ಸರ್ಕಾರ ಇಲ್ಲ ಅನಿಸುತ್ತದೆ. ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸರ್ಕಾರದ ಅಧಿಕಾರಿಗಳಾಗಿ ಕೆಲಸ ಮಾಡಬೇಕು, ಶಾಸಕರ ಅಧಿಕಾರಿಗಳಾಗಬಾರದು. ಬೆಂಗಳೂರಿನಲ್ಲಿ ಎಸಿಪಿ ಪೋಸ್ಟಿಂಗ್ಗೆ 2 ಕೋಟಿ ನೀಡಬೇಕು. ಮೈಸೂರಿನಲ್ಲಿ ಎಷ್ಟು ನೀವೇ ಹೇಳಬೇಕು? ಪೊಲೀಸ್ನವರೇ ರಾಬರಿ ಮಾಡಿಸುತ್ತಾರೆ. ಹಾಗಾಗಿ ಪೊಲೀಸ್ ಇಲಾಖೆ ಹಾಳಾಗಿ ಹೋಗಿದೆ. ಪರಮೇಶ್ವರ್ಗೆ ಸಬ್ಇನ್ಸ್ಪೆಕ್ಟರ್ ವರ್ಗಾವಣೆ ಮಾಡುವ ಅಧಿಕಾರ ಮಾತ್ರ ಇದೆ. ಉಳಿದ ಅಧಿಕಾರ ಮುಖ್ಯಮಂತ್ರಿ ನಿಭಾಯಿಸುತ್ತಾರೆ. ಇದರಿಂದ ಗೃಹಮಂತ್ರಿ ಡಮ್ಮಿ ಅಂತ ಅನಿಸುತ್ತದೆ" ಎಂದು ದೂರಿದರು.
ಅರಮನೆ ವಿಚಾರದಲ್ಲಿ ಜನರಲ್ಲಿ ಗೊಂದಲ: ಸಿದ್ದರಾಮಯ್ಯ ಅರಮನೆ ವಿಚಾರದಲ್ಲಿ ಜನರಲ್ಲಿ ಗೊಂದಲ ಮೂಡಿಸುವಂತಹದ್ದು, ಅಪನಂಬಿಕೆ ಮೂಡಿಸುವಂತಹದ್ದು ಮಾಡುತ್ತಿದ್ದಾರೆ. ಇದು ಒಳ್ಳೆಯದಲ್ಲ. ಕೋರ್ಟ್ ಕೊಟ್ಟಂತಹ ತೀರ್ಮಾನದ ಬಗ್ಗೆ ಗೌರವವಿಲ್ವಾ? ಸುಗ್ರೀವಾಜ್ಞೆ ತಂದಿರುವುದು ತಪ್ಪಿಸಿಕೊಳ್ಳುವುದಕ್ಕೆ. ಯದುವಂಶದವರ ಕೂರಿಸಿ ಒಂದು ಸೆಟ್ಲ್ಮೆಂಟ್ ಮಾಡಿಕೊಳ್ಳಬಹದು" ಎಂದು ಸಲಹೆ ನೀಡಿದರು.
"ಮೈಸೂರು ಅರಮನೆ ಬಗ್ಗೆ ಚೇಷ್ಟೇ ಮಾಡುವುದು, ಕಿರುಕುಳ ಕೊಡುವುದು ಮಾಡ್ತಾನೆ ಇರುತ್ತಾರೆ ಸಿದ್ದರಾಮಯ್ಯ. ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವ ಕೆಲಸಕ್ಕೂ ಮುಂದಾಗಿದ್ದರು. ಇದು ಹುಚ್ಚಾಟ. ಯದುವಂಶದ ರಾಜರೆಂದರೆ ಪ್ರಪಂಚದಲ್ಲಿ ಹೆಸರುವಾಸಿ. ಬಹಳ ದೊಡ್ಡ ದೊಡ್ಡ ಕೆಲಸಗಳನ್ನು ಮಾಡಿ ಹೋದ ರಾಜರು ಮೈಸೂರು ಮಹಾರಾಜರು ಮಾತ್ರ. ಅಂತಹ ಮಹಾರಾಜರ ಬಗ್ಗೆ ಹಗುರವಾಗಿ ಮಾತನಾಡುವುದು ಒಳ್ಳೆಯದಲ್ಲ. ನಾನು ಡೆಮಾಕ್ರೆಟಿಕ್ ಅಂತ ತೋರಿಸಿಕೊಳ್ಳುತ್ತಿರುವುದು, ತೋರಿಕೆಯ ಮಾತು" ಎಂದರು.