ಬೆಳಗಾವಿ:ಗಲ್ಲಿ ಕ್ರಿಕೆಟ್ ಜಗಳ ಎರಡು ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾಗಿ 8 ಜನರು ಗಾಯಗೊಂಡ ಘಟನೆ ಬೆಳಗಾವಿ ನಗರದ ಅಳ್ವಾನ್ ಗಲ್ಲಿಯಲ್ಲಿ ಗುರುವಾರ ಸಂಜೆ ನಡೆದಿದೆ. ಈ ಸಂದರ್ಭದಲ್ಲಿ ಕೆಲವರು ತಲ್ವಾರ್ ಪ್ರದರ್ಶಿಸಿರುವ ಆರೋಪವಿದ್ದು, ಸ್ಥಳದಲ್ಲಿ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಘಟನೆ ಸಂಬಂಧ 10 ಜನರನ್ನು ಶಾಹಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಪೂರ್ಣ ವಿವರ: ಶಹಾಪುರ ಪೊಲೀಸ್ ಠಾಣೆಯ ಸಮೀಪದ ಅಳ್ವಾನ್ ಗಲ್ಲಿಯಲ್ಲಿ ಸಂಜೆ 5ರ ಸುಮಾರಿಗೆ ಚಿಕ್ಕ ಮಕ್ಕಳ ನಡುವೆ ಕ್ರಿಕೆಟ್ ವಿಚಾರದಲ್ಲಿ ಗಲಾಟೆ ಆರಂಭವಾಗಿದೆ. ಈ ಗಲಾಟೆಯಲ್ಲಿ ಎರಡು ಗುಂಪಿನ ಯುವಕರು ಮಧ್ಯಪ್ರವೇಶಿಸಿದ್ದಾರೆ. ಯುವಕರ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಹೊಡೆದಾಡಿಕೊಂಡದ್ದಾರೆ. ಪರಿಣಾಮ, 8 ಜನರು ಗಾಯಗೊಂಡಿದ್ದು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಕಾನ್ಸ್‌ಟೇಬಲ್ ಅಮರ್ ಎಂಬವರೂ ಗಾಯಗೊಂಡಿದ್ದಾರೆ. ಇದೀಗ ಘಟನಾ ಸ್ಥಳದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮೂರು ಕೆಎಸ್ಆರ್‌ಪಿ, ಮೂರು ಮಂದಿ ಸಿಪಿಐ ನಿಯೋಜಿಸಲಾಗಿದೆ.
ಘಟನೆಯ ಮಾಹಿತಿ ಪಡೆದು ಶಹಾಪುರ ಪೊಲೀಸ್ ಠಾಣೆಗೆ ದೌಡಾಯಿಸಿದ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಸಿಬ್ಬಂದಿಯಿಂದ ಮಾಹಿತಿ ಪಡೆದರು. ಇದೀಗ ಬೆಳಗಾವಿ ನಗರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಎಲ್ಲ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವಂತೆಯೂ ಕಮಿಷನರ್ ಸೂಚನೆ ನೀಡಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ನಿಗಾ ವಹಿಸಲಾಗಿದೆ.