ಬೆಳಗಾವಿ:"ಯಾವುದೇ ಕಾರಣಕ್ಕೂ ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ" ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಇಂದು ಸುವರ್ಣಸೌಧಕ್ಕೆ ಆಗಮಿಸಿದ್ದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳನ್ನು ಭೇಟಿಯಾಗಿ ಮಾತನಾಡಿದ ಅವರು, "ಗ್ಯಾರಂಟಿಗಳಿಂದ ಬಡವರು, ಮಧ್ಯಮ ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಅನುಕೂಲ ಆಗ್ತಿದೆ. ಗ್ಯಾರಂಟಿಗಳ ಅನುಕೂಲ ಪಡೆದ ಮಹಿಳೆಯರು ಇವತ್ತು ನನ್ನನ್ನು ಭೇಟಿಯಾಗಿದ್ದಾರೆ. ಮಹಿಳೆಯರಿಗೆ ತುಂಬಾ ಅನುಕೂಲ ಆಗಿದೆ" ಎಂದರು.
ವಕ್ಫ್ ವಿರುದ್ದ ಬಿಜೆಪಿ ಹೋರಾಟದ ವಿಚಾರವಾಗಿ ಮಾತನಾಡಿ, "ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡಲು ಅವಕಾಶವಿದೆ. ಆದರೆ ದುರುದ್ದೇಶದಿಂದ ಹೋರಾಟ ಮಾಡಬಾರದು. ನಮ್ಮ ತಪ್ಪುಗಳಿದ್ರೆ ವಿಪಕ್ಷದವರು ಚರ್ಚಿಸಲಿ. ಅಭಿವೃದ್ದಿ ವಿಚಾರಗಳ ಬಗ್ಗೆ ಚರ್ಚೆ ಮಾಡಲಿ. ಎಐಸಿಸಿ ಅಧಿವೇಶನ ಬೆಳಗಾವಿಯಲ್ಲಿ ನಡೆಯುತ್ತೆ. ಅಡ್ಡಿಪಡಿಸೋಕೆ ಬಂದ್ರೆ ಕಾನೂನು ಕ್ರಮ ಕೈಗೊಳ್ತೀವಿ. ಯಾರೇ ಅಡ್ಡಿಪಡಿಸಿದ್ರೂ ಕಾನೂನು ಕ್ರಮ ಕೈಗೊಳ್ಳುತ್ತೇವೆ" ಎಂದು ಎಚ್ಚರಿಕೆ ನೀಡಿದರು.