ಬೆಂಗಳೂರು:''ಕಾಂಗ್ರೆಸ್ ಸರ್ಕಾರ ಸಂಪನ್ಮೂಲದ ಗ್ಯಾರಂಟಿ ಇಲ್ಲದೆ, ಜನರಿಗೆ ಟೋಪಿ ಹಾಕಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಹೀಗಾಗಿ, ಕಾಂಗ್ರೆಸ್ ಶಾಸಕರೇ ಸರ್ಕಾರಕ್ಕೆ ಧಿಕ್ಕಾರ ಹಾಕುವ ಪರಿಸ್ಥಿತಿ ಬರುತ್ತದೆ'' ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಯಾವುದೇ ಪಕ್ಷದ ಸರ್ಕಾರ ಬಂದರೂ ಸಾಲ ಮಾಡಲೇಬೇಕು. ಇಂತಹ ಸ್ಥಿತಿಯಲ್ಲಿ ಸಂಪನ್ಮೂಲದ ಗ್ಯಾರಂಟಿಯೇ ಇಲ್ಲದೇ, ಜನರಿಗೆ ಟೋಪಿ ಹಾಕಿ ಗ್ಯಾರಂಟಿ ಯೋಜನೆ ತಂದಿದ್ದಾರೆ. ಇದನ್ನು ನಿರ್ವಹಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಬೆಸ್ಕಾಂ ಹಾಗೂ ವಿವಿಧ ಇಲಾಖೆಗಳು ನಷ್ಟದಲ್ಲಿವೆ'' ಎಂದರು.
''ಬೆಂಗಳೂರಿಗೆ ನಿಗದಿಯಾದ ಅನುದಾನಗಳನ್ನು ಈ ಹಿಂದೆಯೂ ವಾಪಸ್ ಪಡೆಯಲಾಗಿತ್ತು. ನಗರದಲ್ಲಿ ಪ್ರವಾಹದ ನಿಯಂತ್ರಣಕ್ಕಾಗಿ ಯೋಜನೆ ರೂಪಿಸಲು ಬಿಜೆಪಿ ಸರ್ಕಾರ ಅನುದಾನ ಮೀಸಲಿಟ್ಟಿತ್ತು. ಅದನ್ನೀಗ ಗ್ಯಾರಂಟಿಗೆ ನೀಡಲಾಗಿದೆ. ಪಾದಚಾರಿ ಮಾರ್ಗ, ಮೇಲ್ಸೇತುವೆ, ರಾಜಕಾಲುವೆ ಸೇರಿದಂತೆ ಎಲ್ಲ ಅಭಿವೃದ್ಧಿ ಯೋಜನೆಗಳ ಹಣವನ್ನು ಗ್ಯಾರಂಟಿಗೆ ವರ್ಗಾಯಿಸಲಾಗಿದೆ. ಬಿಬಿಎಂಪಿ ಅನುದಾನ ಬಿಟ್ಟು, ಬಿಜೆಪಿ ಸರ್ಕಾರ 8-9 ಸಾವಿರ ಕೋಟಿ ರೂ. ನೀಡಿತ್ತು. ಈಗ ಸರ್ಕಾರ ಪಾಪರ್ ಆಗಿದೆ'' ಎಂದು ಟೀಕಿಸಿದರು.
ಇತ್ತೀಚೆಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಾಮೂಹಿಕ ನಾಯಕತ್ವದಲ್ಲಿ ಪಾದಯಾತ್ರೆ ನಡೆದಿದೆ. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ನನಗೆ ಕರೆ ಮಾಡಿ, ಈ ಪಾದಯಾತ್ರೆಯಲ್ಲಿ ಎಲ್ಲರೂ ಭಾಗವಹಿಸಿ ಎಂದು ಹೇಳಿದ್ದರು. ಪಾದಯಾತ್ರೆ ಯಶಸ್ವಿಯಾಗಿರುವುದರಿಂದಲೇ ಕಾಂಗ್ರೆಸ್ ನಾಯಕರು ಭಯಗೊಂಡು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸರ್ಕಾರದ ಎರಡು ಹಗರಣಗಳ ವಿರುದ್ಧ ಪಾದಯಾತ್ರೆಯ ಜೊತೆಗೆ, ಕೆಲವರು ರಾಜಭವನಕ್ಕೂ ದೂರು ಸಲ್ಲಿಸಿದ್ದಾರೆ'' ಎಂದರು.