ಮೈಸೂರು: ಮೈಸೂರಿನ ಕಾಂಕ್ರಿಟ್ ಬಿಲ್ಡಿಂಗ್ಗಳ ಮಧ್ಯೆ ಪ್ರತಿಷ್ಠಿತ ಬಡಾವಣೆಯೊಂದರಲ್ಲಿ ಹಚ್ಚ ಹಸುರಿನ ಗಿಡಬಳ್ಳಿಗಳಿಂದಲೇ ತುಂಬಿರುವ ಈ ಮನೆ ಎಲ್ಲರ ಮನ ಸೆಳೆಯುತ್ತಿದೆ. ಇದನ್ನು ನಿಸರ್ಗವೇ ನಿರ್ಮಿಸಿದ ಅಪರೂಪದ ಮನೆ ಎನ್ನಬಹುದು. ಮನೆಯೊಳಗೆ ಹೆಜ್ಜೆಯಿಟ್ಟರೆ ಕೂಲ್ ಕೂಲ್ ಅನ್ನಿಸುವ ಹಿತಾನುಭವ. ಹಾಗಂತ, ಇಲ್ಲಿ ಯಾವುದೇ ಎಸಿ, ಫ್ಯಾನ್ಗಳಾಗಲೀ ಇಲ್ಲ. ಆದರೂ, ಈ ಬಿರು ಬೇಸಿಗೆಯಲ್ಲಿ ಇಲ್ಲಿ ತಣ್ಣನೆ ಬೀಸುವ ಗಾಳಿ ನಮ್ಮನ್ನು ಮುದಗೊಳಿಸುತ್ತದೆ.
ಈ ಮನೆ ಮುಂದೆ ನಿಂತರೆ ಇದೊಂದು ಮನೆಯೋ ಅಲ್ಲಾ, ಕಾಡೋ ಅಥವಾ ಮಿನಿವಸ್ತು ಸಂಗ್ರಹಾಲಯವೋ ಅಂತನ್ನಿಸಬಹುದು. ಹೀಗೆ ಗೋಚರಿಸುವ ಈ ಮನೆ ಇರುವುದು ಮೈಸೂರಿನ ಗೋಕುಲಂನ 3ನೇ ಹಂತದಲ್ಲಿ. 45x65 ಅಡಿ ಜಾಗದಲ್ಲಿ ತಲೆ ಎತ್ತಿರುವ ಎರಡಂತಸ್ತಿನ ಮನೆ ಇದಾಗಿದ್ದು ಸಂಪೂರ್ಣ ಹಚ್ಚ ಹಸುರಿಂದ ತುಂಬಿದೆ. ಸುಮಾರು 10 ಸಾವಿರ ಗಿಡಬಳ್ಳಿಗಳನ್ನು ಹೊದ್ದುಕೊಂಡಿದೆ. 190ಕ್ಕೂ ಹೆಚ್ಚು ನಾನಾ ಜಾತಿಯ ಸಸ್ಯರಾಶಿಯಿಂದ ಆವರಿಸಿಕೊಂಡಿರುವ ಈ ಹಸಿರು ಮನೆಯ ಮಾಲೀಕರು ಬೆಂಜಮಿನ್ ವಾಸು.
ಮೂಲತಃ ಕೊಡಗಿನ ಸೋಮವಾರಪೇಟೆಯರಾದ ಬೆಂಜಮಿನ್, ಕಳೆದ 20 ವರ್ಷಗಳ ಹಿಂದೆ ಮೈಸೂರಿಗೆ ಬಂದಿದ್ದರು. ಹೀಗೆ ಬಂದವರು ಎಸ್ಟೇಟ್ ಮಾದರಿಯಲ್ಲಿ ಮನೆ ನಿರ್ಮಿಸುವ ಕನಸು ಕಂಡರು. ಅದರಂತೆ ಇದೀಗ ತಮ್ಮ ಮನೆ ಸುತ್ತಲೂ ಬಗೆಬಗೆಯ ಗಿಡಬಳ್ಳಿಗಳನ್ನು ಬೆಳೆಸಿ ಮನೆಯನ್ನು ಹಸಿರಿನಿಂದ ತುಂಬಿಸಿದ್ದಾರೆ. ಸದ್ಯ ಈ ಮನೆ ಎಲ್ಲರ ಆಕರ್ಷಣೆಯ ಕೇಂದ್ರ.
ಈ ಮನೆಯಲ್ಲಿ ಸಾಮಾನ್ಯ ಗಿಡಬಳ್ಳಿಗಳೊಂದಿಗೆ ಔಷಧಿಯುಕ್ತ ಬಳ್ಳಿಗಳು, ಹಳೆ ಕಾಲದ ಕಲ್ಲಿನ ಮೂರ್ತಿಗಳು, ಪಾರಂಪರಿಕ ಚಿತ್ರಗಳು, ಆಟಿಕೆಗಳು, ವರ್ಣಚಿತ್ರಗಳು, ಕಲಾಕೃತಿಗಳು, ಪ್ರಾಣಿ, ಪಕ್ಷಿಗಳಿವೆ. ಹೀಗಾಗಿ ನೋಡಲು ಥೇಟ್ ಮಿನಿವಸ್ತು ಸಂಗ್ರಹಾಲಯದಂತೆ ಭಾಸವಾಗುತ್ತದೆ. ಮನೆಗೆ ಕ್ರಿಮಿಕೀಟಗಳು ಬರದಂತೆ ಗಿಡಗಳನ್ನು ಹಾಕಿರುವುದು ಇಲ್ಲಿ ಮತ್ತೊಂದು ವಿಶೇಷ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಬೆಂಜಮಿನ್ ವಾಸು ಅವರ ಮಾತುಗಳಲ್ಲೇ ತಿಳಿಯೋಣ.
"ಮನೆಯಲ್ಲಿ ಸುಮಾರು 10 ಸಾವಿರ ಗಿಡ ಬಳ್ಳಿಗಳನ್ನು ಹಾಕಿದ್ದೇನೆ. ಹಾವುಗಳು ಬರದಂತೆ ತಡೆಯುವ ಗಿಡಗಳು, ಸೊಳ್ಳೆ, ಕ್ರಿಮಿಕೀಟಗಳು ಬರದಂತೆ ತಡೆಯುವ ಗಿಡಗಳನ್ನು ಬೆಳೆಸಿದ್ದೇನೆ. ಇದರಿಂದಾಗಿ ಪಕ್ಷಿಗಳು ಜಾಸ್ತಿ ಸಂಖ್ಯೆಯಲ್ಲಿ ಬಂದು ಮನೆ ಮೇಲೆ ಕುಳಿತುಕೊಳ್ಳುತ್ತವೆ. ಬೆಳಗಿನ ಜಾವ ಹೆಚ್ಚು ಪಕ್ಷಿ ಬರುತ್ತವೆ".
"ಮೈಸೂರಿಗೆ ಬಂದು 20 ವರ್ಷವಾಯಿತು. ಮೊದಲಿನಿಂದಲೂ ಗಿಡ, ಬಳ್ಳಿಗಳನ್ನು ಬೆಳೆಸುತ್ತಿದ್ದೆ. ಕಳೆದ 10 ವರ್ಷಗಳಿಂದ ಮನೆ ಸುತ್ತಮುತ್ತ ಗಿಡ, ಬಳ್ಳಿಗಳನ್ನು ಬೆಳೆಸೋಕೆ ಶುರು ಮಾಡಿದೆ. ಅದು ಈಗ ಇಷ್ಟು ದೊಡ್ಡದಾಗಿ ಬೆಳೆದಿವೆ. ಬಳ್ಳಿಗಳು ಜಾಸ್ತಿ ಇವೆ. ದ್ರಾಕ್ಷಿಯಂಥ ಹಣ್ಣುಗಳಿವೆ. ಆಯುರ್ವೇದಿಕ್ಗೆ ಬಳಸುವ ಬಳ್ಳಿಗಳಿವೆ. 10 ರೀತಿಯ ವಿಭಿನ್ನ ಬಳ್ಳಿಗಳಿವೆ. 190 ರೀತಿಯ ಗಿಡಗಳಿವೆ. ಔಷಧಿಗೆ ಬೇಕಿರುವ ಬಳ್ಳಿಗಳು ಇವೆ. ಹೂವಿನ ರೀತಿಯ ಬಳ್ಳಿಗಳು ಮತ್ತು ಗಿಡಗಳಿವೆ."