ವಿಜಯಪುರ:ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಹಿಂದೂ ಸಂಘಟನೆ ಮುಖಂಡರಿಂದ ಭರ್ಜರಿ ಸನ್ಮಾನ ಮಾಡಿ, ಸ್ವಾಗತ ಕೋರಿರುವ ಘಟನೆ ವರದಿಯಾಗಿದೆ. ಬೆಂಗಳೂರು ಸೆಸನ್ಸ್ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ಸಿಕ್ಕ ಬೆನ್ನಲ್ಲೇ ಇಬ್ಬರು ಆರೋಪಿಗಳು ವಿಜಯಪುರಕ್ಕೆ ಆಗಮಿಸಿದ್ದರು.
ಆರೋಪಿಗಳಾದ ಪರಶುರಾಮ್ ವಾಗ್ಮೋಡೆ ಹಾಗೂ ಮನೋಹರ್ ಯಡವೆ ಅವರಿಗೆ ಜಾಮೀನು ಹಿಂದೂ ಸಂಘಟನೆ ಮುಖಂಡರು ಅದ್ಧೂರಿ ಸ್ವಾಗತ ಕೋರಿದ್ದಾರೆ. ಆರೋಪಿಗಳು ನಗರದ ಕಾಳಿಕಾದೇವಿ ಮಂದಿರದಲ್ಲಿ ಪೂಜೆಯಲ್ಲಿ ಪಾಲ್ಗೊಂಡು, ಶಿವಾಜಿ ಮೂರ್ತಿಗೆ ಹೂಮಾಲೆ ಹಾಕಿದರು. ಕಾಳಿಕಾ ಮಂದಿರದಲ್ಲಿ ತೆಂಗಿನಕಾಯಿ, ಕರ್ಪೂರ ಹಿಡಿದು ಆರತಿ ಬೆಳಗಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಸ್ವಾಗತ, ಸನ್ಮಾನ (ETV Bharat) ಈ ವೇಳೆ, ಹಿಂದೂ ಮುಖಂಡ ಉಮೇಶ ವಂದಾಲ್, ನೀಲಕಂಠ ಕಂದಗಲ್ ಆರೋಪಿಗಳಿಗೆ ಶಾಲು ಹೊದಿಸಿ, ಸನ್ಮಾನ ಮಾಡಿದರು. ಕಾರ್ಯಕರ್ತರು ಭಾರತ್ ಮಾತಾ ಕೀ ಜೈ, ಸನಾತನ ಧರ್ಮಕ್ಕೆ ಜೈ ಎಂಬ ಘೋಷಣೆ ಕೂಗಿದರು.
ಇದಕ್ಕೂ ಮುನ್ನ ನಗರಕ್ಕೆ ಆಗಮಿಸುತ್ತಿದ್ದಂತೆ ಶಿವಾಜಿ ವೃತ್ತದಲ್ಲಿ ಶಿವಾಜಿ ಮಹಾರಾಜರ ಮೂರ್ತಿಗೆ ಹೂವಿನ ಹಾರ ಹಾಕಿದರು. ಈ ವೇಳೆ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಆರೋಪಿಗಳು ನಿರಾಕರಿಸಿದರು.
''ನಿರಪರಾಧಿಗಳಿಗೆ 7 ವರ್ಷ ಕಠಿಣ ಶಿಕ್ಷೆ ನೀಡಿದ್ದಾರೆ. ಗೌರಿ ಹತ್ಯೆಯಲ್ಲಿ ಇವರು ಪಾಲ್ಗೊಂಡಿಲ್ಲ. ಅಮಾಯಕರಿಗೆ ಶಿಕ್ಷೆ ನೀಡಲಾಗಿದೆ. ಹತ್ಯೆಗೆ ಸಂಬಂಧವೇ ಇರದವರನ್ನು ಜೈಲಿಗೆ ಹಾಕಿದ್ದು ತಪ್ಪು'' ಎಂದು ಹಿಂದೂ ಮುಖಂಡ ಉಮೇಶ ವಂದಾಲ್ ಹೇಳಿದರು.
''ಕಾಂಗ್ರೆಸ್ ಸರ್ಕಾರ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಬಂಧಿಸಿತ್ತು. ನಾವು ಈಗ ಆರೋಪಿತರನ್ನು ಸ್ವಾಗತಿಸಿಕೊಂಡಿದ್ದೇವೆ'' ಎಂದು ಶ್ರೀರಾಮ ಸಂಘಟನೆ ಮುಖಂಡ ನೀಲಕಂಠ ಕಂದಗಲ್ ಕಿಡಿಕಾರಿದರು.
ಇದನ್ನೂ ಓದಿ:ಮೈಸೂರು : ಮಳೆಗೆ ಮನೆ ಗೋಡೆ ಕುಸಿತ, ಕೂದಲೆಳೆ ಅಂತರದಲ್ಲಿ ಉಳಿಯಿತು 7 ಜನರ ಜೀವ