ಬೆಂಗಳೂರು : ದೇಶಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಪ್ರತಿವರ್ಷದಂತೆ ಈ ಬಾರಿಯೂ ಜೆ. ಪಿ ನಗರದ ಪುಟ್ಟೇನಹಳ್ಳಿ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯನ್ನು ವೈಭವದಿಂದ ಆಚರಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಟ್ರಸ್ಟಿ ರಾಮ್ ಮೋಹನ ರಾಜ್ ತಿಳಿಸಿದರು.
ಪ್ರತಿವರ್ಷ ಹೊಸದೊಂದು ಥೀಮ್ನಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಹಾಗೂ ವಿಶೇಷ ಅಲಂಕಾರದ ಮೂಲಕ ದೇಶದ ಗಮನವನ್ನು ಸೆಳೆಯುತ್ತಿದ್ದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ದೇವಸ್ಥಾನದಲ್ಲಿ ಈ ಬಾರಿ 36ಕ್ಕೂ ಹೆಚ್ಚು ವಿಧದ ಹಣ್ಣು ಹಾಗೂ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ ಎಂದರು.
ಇಂದು ಬೆಳಗ್ಗೆ 9 ಗಂಟೆಯಿಂದ ವಿಶೇಷ ಪೂಜಾಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹೂವು ಹಣ್ಣುಗಳಿಂದ ಸಿಂಗರಿಸಲಾಗಿರುವ ದೇವಸ್ಥಾನ ನೋಡಲು ಎರಡು ಕಣ್ಣುಗಳು ಸಾಲದಾಗಿದೆ. ಪ್ರತಿವರ್ಷ ಹೊಸದೊಂದು ಥೀಮ್ ಅಳವಡಿಸಿಕೊಂಡು ಭಕ್ತರಿಗೆ ಹೊಸ ಅನುಭವ ನೀಡುವುದು ನಮ್ಮ ಉದ್ದೇಶವಾಗಿದೆ. ವಿಶೇಷ ಪೂಜೆಯ ಜೊತೆಗೆ ಪ್ರಸಾದ ವಿತರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಹಬ್ಬದ ಖರೀದಿಯಲ್ಲಿ ಮಗ್ನರಾದ ಜನತೆ: ಸಿಲಿಕಾನ್ ಸಿಟಿ ಜನರು ಗಣೇಶ ಹಬ್ಬ ಸ್ವಾಗತಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಹಿನ್ನೆಲೆ ಕೆ ಆರ್ ಮಾರ್ಕೆಟ್ನಲ್ಲಿ ಖರೀದಿ ಜೋರಾಗಿತ್ತು. ಹೂವು, ಹಣ್ಣು, ಗರಿಕೆ, ಎಕ್ಕದ ಹಾರದ ಜೊತೆಗೆ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಯಲ್ಲಿ ಗ್ರಾಹಕರು ಬ್ಯುಸಿಯಾಗಿದ್ದರು. ಇತ್ತ ಪ್ರತಿ ಬಾರಿಯಂತೆ ಈ ಸಲ ಕೂಡ ಹೂ, ಹಣ್ಣುಗಳ ಬೆಲೆ ಕೊಂಚ ಏರಿಕೆಯಾಗಿದೆ.