ಕರ್ನಾಟಕ

karnataka

ETV Bharat / state

ದಾವಣಗೆರೆ: ಗ್ರಾಪಂ ಸದಸ್ಯನ ಜನ‌ಸೇವೆ ಪರಿಗಣಿಸಿ ಕನ್ಯೆ ಹುಡುಕಿ ಮದುವೆ ಮಾಡಿದ ಗ್ರಾಮಸ್ಥರು!

ಗ್ರಾಮ ಪಂಚಾಯ್ತಿ ಸದಸ್ಯನ ಜನಸೇವೆಯನ್ನು ಪರಿಗಣಿಸಿ ಗ್ರಾಮಸ್ಥರು ಕನ್ಯೆ ಹುಡುಕಿ ವಿವಾಹ ಮಾಡಿದ ಅತ್ಯಂತ ಅಚ್ಚರಿಕರ ಘಟನೆ ನಡೆದಿದೆ.

By ETV Bharat Karnataka Team

Published : Feb 2, 2024, 8:06 PM IST

Updated : Feb 3, 2024, 11:18 AM IST

ದಾವಣಗೆರೆ
ದಾವಣಗೆರೆ

ಗ್ರಾಮಸ್ಥ ಪ್ರಕಾಶ್ ಅವರು ಮಾತನಾಡಿದರು

ದಾವಣಗೆರೆ :ಅವರೊಬ್ಬ ಜನ ಸೇವಕ. ಜನರ ಸೇವೆ ಮಾಡಲು ಗ್ರಾ ಪಂ‌ ಸದಸ್ಯನಾಗಿ ಆಯ್ಕೆಯಾದ್ರು. ತನ್ನ ಕ್ಷೇತ್ರದ ಜನರಿಗೆ ಚಿಕ್ಕ ಸಮಸ್ಯೆ ಎದುರಾದರೂ ತಡಮಾಡದೇ ಧಾವಿಸಿ ಸಮಸ್ಯೆ ಬಗೆಹರಿಸುತ್ತಾ ಗ್ರಾಮದ ಕಣ್ಮಣಿ ಆಗಿದ್ದಾರೆ. ಆ ಗ್ರಾಪಂ ಸದಸ್ಯ ಅಲ್ಲಿನ ಜನರ ನೋವಿಗೆ ಧ್ವನಿಯಾಗಿ ನಿಲ್ಲುತ್ತಾ ಸದ್ದಿಲ್ಲದೆ ತಮ್ಮ ಕೈಲಾದಷ್ಟು ಸೇವೆ ಸಲ್ಲಿಸುತ್ತಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ಜನರಿಗೆ ಹತ್ತಿರವಾಗಿದ್ದ ಗ್ರಾಮ ಪಂಚಾಯ್ತಿ ಸದಸ್ಯನಿಗೆ ಇಡೀ ಗ್ರಾಮಸ್ಥರು ಸೇರಿ ಕನ್ಯೆ ನೋಡಿ, ಮದುವೆ ಮಾಡಿಸಿ ಹರಸಿ ಹಾರೈಸಿದ್ದಾರೆ.

ದಾವಣಗೆರೆ ತಾಲೂಕಿನ ಗುಡಾಳ್ ಗ್ರಾಮದಲ್ಲಿ ಇಂದು ಹಬ್ಬದ ವಾತಾವರಣ ನಿರ್ಮಾಣ ಆಗಿತ್ತು. ಒಬ್ಬ ದಲಿತ ಗ್ರಾ ಪಂ ಸದಸ್ಯನಿಗೆ ಜಾತಿ ವೈಮನಸ್ಸು ಬದಿಗೊತ್ತಿ ವಿಶೇಷವಾದ ಮದುವೆ ಮಾಡಿಸಿದ್ದಾರೆ. ಗುಡಾಳ್ ಗ್ರಾಮ ಪಂಚಾಯ್ತಿ ಸದಸ್ಯನಾಗಿರುವ ಅಂಜಿನಪ್ಪ ಗ್ರಾಮದ ಅದೆಷ್ಟೋ ಧ್ವನಿ ಇಲ್ಲದವರಿಗೆ ಧ್ವನಿಯಾಗಿದ್ದಾರೆ. ಅಲ್ಲದೇ ಈ ದಲಿತ ಗ್ರಾಪಂ ಸದಸ್ಯನ ಕಂಡ್ರೆ ಗುಡಾಳ್ ಗ್ರಾಮದಲ್ಲಿ ಎಲ್ಲರಿಗೂ ಅಚ್ಚುಮೆಚ್ಚು. ಆ ಊರಿನ ಜನರಿಗೆ ಆರೋಗ್ಯ ಸೇರಿದಂತೆ ಏನೇ ಸಮಸ್ಯೆ ಎದುರಾದ್ರೂ ಅಲ್ಲಿ 108 ಆಂಬ್ಯುಲೆನ್ಸ್ ರೂಪದಲ್ಲಿ ತನ್ನ ಬಳಿ ಇರುವ ಓಮಿನಿಯಲ್ಲಿ ತುರ್ತು ಸೇವೆ ನೀಡುತ್ತಿದ್ದಾರೆ.

ಇದರಿಂದ ಗ್ರಾಮದಲ್ಲಿ ಎಲ್ಲರಿಗೂ ಅಂಜಿನಪ್ಪ ಎಂದರೆ ಬಲು ಪ್ರೀತಿ. ಆ ಪ್ರೀತಿ ಮತವಾಗಿ ಸತತ ಮೂರನೇ ಬಾರಿ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದಾರೆ. ಗ್ರಾಮ ಪಂ‌ಚಾಯ್ತಿ ಸದಸ್ಯನಾಗಿರುವ ಅಂಜಿನಪ್ಪರ ಜನ ಸೇವೆ ಪರಿಗಣಿಸಿದ ಗ್ರಾಮಸ್ಥರು ಕನ್ಯೆ ಹುಡುಕಿ ಬದುಕು ಕಟ್ಟಿಕೊಟ್ಟಿದ್ದಾರೆ. 45 ವರ್ಷ ವಯಸ್ಸಿನ ಅಂಜಿನಪ್ಪ ತನ್ನ ತಂಗಿಯರಿಗೆ ಒಂದು ನೆಲೆ ಒದಗಿಸಬೇಕೆಂದು ಮದುವೆಯಾಗದೇ ವೈವಾಹಿಕ ಜೀವನಕ್ಕೆ ಅಲ್ಪವಿರಾಮ ನೀಡಿದ್ದರು. ಗ್ರಾಮಸ್ಥರಿಗೆ ಹತ್ತಿರವಾಗಿದ್ದ ಅಂಜಿನಪ್ಪ ಊರಿನ ಗ್ರಾಮಸ್ಥರ ಬಲವಂತ ಮತ್ತು ಅವರ ಮಾತಿಗೆ ಬೆಲೆ ನೀಡಿ ಹರಪನಹಳ್ಳಿ ತಾಲೂಕಿನ ಪಲ್ಲವಿ ಜೊತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ದಂಪತಿಗಳಿಗೆ ಇಡೀ ಊರಿನ ಜನ ಶುಭಾಶಯ ಕೋರಿದ್ದಾರೆ.

ಮದುವೆಯ ಎಲ್ಲ ಖರ್ಚನ್ನು ನೋಡಿಕೊಂಡ ಗ್ರಾಮಸ್ಥರು : ಈ ವೇಳೆ ಪ್ರತಿಕ್ರಿಯಿಸಿದ ಗ್ರಾಮಸ್ಥರಾದ ಪ್ರಕಾಶ್ ಅವರು, ಅಂಜಿನಪ್ಪ ಅವರು ಗುಡಾಳ್ ಗ್ರಾಮ ಪಂಚಾಯತ್​ಗೆ ಮೂರು ಬಾರಿ ಆಯ್ಕೆಯಾಗಿ ಜನಮೆಚ್ಚುವ ಕೆಲಸ ಮಾಡಿದ್ದಾರೆ‌. ಕೆಳವರ್ಗದಿಂದ ಬಂದ ವ್ಯಕ್ತಿ ಅಂಜಿನಪ್ಪ ಅವರ ಮದುವೆ ಸಮಾರಂಭವನ್ನು ಜಾತಿಭೇದ ಇಲ್ಲದೇ ಗ್ರಾಮದ ಎಲ್ಲರೂ ನಿಂತು ಮಾಡ್ತಿದ್ದೇವೆ. ಎಲ್ಲಾ ವರ್ಗದವರು ಸೇರಿ ಈ ಪುಣ್ಯಕಾರ್ಯ ಮಾಡ್ತಿದ್ದೇವೆ. ಮದುವೆಯಲ್ಲಿ ಹಣವನ್ನು ಹೊರತು ಪಡಿಸಿ ನೀರಿನ ವ್ಯವಸ್ಥೆ, ಶಾಮಿಯಾನ, ಊಟದ ವ್ಯವಸ್ಥೆ, ಚೇರ್ ವ್ಯವಸ್ಥೆ ಎಲ್ಲ ಖರ್ಚು ಗ್ರಾಮಸ್ಥರೇ ನೋಡಿಕೊಂಡಿದ್ದಾರೆ ಎಂದಿದ್ದಾರೆ.

ಎಲ್ಲರೂ ಐಕ್ಯತೆಯಿಂದ ಈ ಕೆಲಸ ಮಾಡಿದ್ದೇವೆ. ಅವರು ಗ್ರಾಪಂ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ದೇವಾಲಯ, ಆಶ್ರಯ ಮನೆ ಬಡವರಿಗೆ ಕೊಡಿಸಿದ್ದು, ಜಮೀನು ಮಂಜೂರು ಮಾಡುವುದು, ಹೊಲ ಇಲ್ಲದವರಿಗೆ ಹೊಲ ಕೊಡಿಸುವ ಸಾಮಾಜಿಕ ಬದಲಾವಣೆ ಮಾಡಿದ್ದಾರೆ. ಎರಡು ಬಾರಿ ಅಧ್ಯಕ್ಷರಾಗಿ ಉನ್ನತ ಕೆಲಸ ಮಾಡಿದ್ದಾರೆಂದು ಇಲ್ಲಿನ ಜನರು ತಿಳಿಸಿದ್ದಾರೆ.

ಗುಡಾಳ್ ಗ್ರಾಮದಲ್ಲಿರುವ ವಾತಾವರಣ ರಾಜ್ಯದಲ್ಲೂ ಪಸರಿಸಲಿ: ಜಾತಿ ಭೇದ ಇಲ್ಲದೇ ಒಬ್ಬ ದಲಿತ ಯುವಕನ ಮದುವೆ ಮಾಡಿದ್ದಾರೆ. ಜಾತಿ ಭೇದ ಎಂಬುದು ತೊಲಗಲಿ. ಈ ರೀತಿಯ ವಾತಾವರಣ ರಾಜ್ಯದಲ್ಲಿ ಪಸರಿಸಲಿ ಎಂದು ದಲಿತ‌ ಮುಖಂಡ ಆಲೂರು ನಿಂಗರಾಜ್ ಹರ್ಷ ವ್ಯಕ್ತಪಡಿಸಿದರು.

ಇನ್ನು ದಾವಣಗೆರೆ ತಾಲೂಕಿನಲ್ಲಿ ವಿಶೇಷ ಮದುವೆ ನಡೆಯುತ್ತಿದೆ. ದಲಿತ ಯುವಕನ ಸೇವೆಯನ್ನು ಪರಿಗಣಿಸಿ ಊರಿನ‌ ಜ‌ನ ಸೇರಿ ಕನ್ಯೆ ಹುಡುಕಿ ಮುಂದೆ ನಿಂತು ಮದುವೆ ಮಾಡಿಸಿರುವುದು ವಿಶೇಷವಾಗಿದೆ. ರಾಜ್ಯದಲ್ಲಿ ಧರ್ಮ - ಜಾತಿ ಎಂದು ಕಿತ್ತಾಟ ನಡೆಯುತ್ತಿರುವ ಈ ದಿನಗಳಲ್ಲಿ ದಲಿತ ಯುವಕನಿಗೆ ಮದುವೆ ಮಾಡಿರುವುದು ಅಭಿನಂದನಾರ್ಹ. ಈ ವಾತಾವರಣ ರಾಜ್ಯದಲ್ಲಿ ಪಸರಿಸಲಿ ಎಂದು ಆಲೂರು ನಿಂಗರಾಜ್ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ನೌಕರಿ ಇರೋ ವರಗಳನ್ನೇ ಹುಡುಕುತ್ತಿರುವ ಪೋಷಕರು.. ಕನ್ಯಾಭಾಗ್ಯ ಯೋಜನೆ ಆರಂಭಿಸುವಂತೆ ಸಿಎಂ ಸಿದ್ದರಾಮಯ್ಯಗೆ ರೈತರಿಂದ ಪತ್ರ

Last Updated : Feb 3, 2024, 11:18 AM IST

ABOUT THE AUTHOR

...view details